Advertisement

ವಿದ್ಯಾರ್ಥಿಗಳಿಗೆ ರಜೆಯಲ್ಲೂ ಬಿಸಿಯೂಟ

10:21 AM Mar 17, 2019 | Team Udayavani |

ಯಲಬುರ್ಗಾ: ತಾಲೂಕು ಬರಪೀಡಿತವಾಗಿದ್ದು, ಬೇಸಿಗೆ ರಜಾ ಅವಧಿಯಲ್ಲೂ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ದೊರೆಯಲಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ಎಫ್‌.ಎಂ. ಕಳ್ಳಿ ಹೇಳಿದರು. ಪಟ್ಟಣದ ಬಿಆರ್‌ಸಿ ಕಚೇರಿ ಸಭಾಂಗಣದಲ್ಲಿ ಬರಪೀಡಿತ ಪ್ರದೇಶಗಳ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಕಾರ್ಯಕ್ರಮವನ್ನು ಬೇಸಿಗೆ ರಜಾ ಅವಧಿಯಲ್ಲಿ ಅನುಷ್ಠಾನಗೊಳಿಸುವ ನಿಮಿತ್ತ ಶನಿವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಏ. 11ರಿಂದ ರಜೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ರವಾನಿಸಿದ್ದು, ಸರಕಾರದ ಅಧಿಕೃತ ಸಮ್ಮತಿಯೂ ದೊರೆತಿದೆ. ಸುಪ್ರೀಂ ಕೋರ್ಟ್‌ ಆದೇಶದನ್ವಯ ಬರಪೀಡಿತ ತಾಲೂಕುಗಳಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸಲು ತಯಾರಿ ನಡೆಸಲಾಗುತ್ತಿದೆ. ಬೇಡಿಕೆ ಆಧರಿಸಿ ಮಕ್ಕಳ ವಾಸ್ತವ್ಯದ ಪ್ರದೇಶ ಇಲ್ಲವೇ ಆಯಾ ಶಾಲೆ ಇರುವ ಗ್ರಾಮಗಳಲ್ಲಿಯೇ ಮಧ್ಯಾಹ್ನದ ಬಿಸಿಯೂಟ ದೊರೆಯಲಿದೆ ಎಂದರು.

1ರಿಂದ 8ನೇ ತರಗತಿವರೆಗೆ ಅಭ್ಯಾಸ ಮಾಡುತ್ತಿರುವ ಅನುದಾನಿತ ಹಾಗೂ ಸರಕಾರಿ ಶಾಲೆಗಳಲ್ಲಿನ ಮಕ್ಕಳು ಸೌಲಭ್ಯ ಪಡೆಯಬಹುದು. ಒಂದೇ ಗ್ರಾಮದಲ್ಲಿ ಎರಡಕ್ಕಿಂತ ಹೆಚ್ಚು ಶಾಲೆಗಳಿದ್ದರೆ, ಅಂತಹ ಕಡೆ ಒಂದೆಡೆ ಬಿಸಿಯೂಟಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು.

ಏ. 10ರವರೆಗೆ ಶಾಲೆಗಳು ನಡೆಯಲಿದ್ದು, ನಂತರ ರಜೆ ಘೋಷಣೆಯಾಗುತ್ತದೆ. ಆ ಸಮಯದಲ್ಲಿ ಅಕ್ಷರ ದಾಸೋಹ ಯೋಜನೆ ಅನುಷ್ಠಾನಗೊಳಿಸಲು ಸರಕಾರದ ಸೂಚನೆಯನ್ವಯ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ನೋಡಲ್‌ ಅಧಿಕಾರಿಗಳಿಗೆ ಸೂಚಿಸಿದರು.

ಬಿಇಒ ಶರಣಪ್ಪ ವಟಗಲ್‌ ಮಾತನಾಡಿ, ಬೇಸಿಗೆ ಬಿಸಿಯೂಟ ಕಾರ್ಯಕ್ರಮವನ್ನು ತಾಲೂಕಿನಲ್ಲಿ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ. ತಾಲೂಕಿನ 250 ಶಾಲೆಗಳ ಪೈಕಿ 172 ಕೇಂದ್ರಗಳಲ್ಲಿ ಬಿಸಿಯೂಟ ಆರಂಭ ಮಾಡಲಾಗುತ್ತದೆ. ಇದಕ್ಕಾಗಿ ಕ್ಲಸ್ಟರ್‌ ವ್ಯಾಪ್ತಿಯ 18 ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕು ಎಂದರು.

Advertisement

ಬಿಆರ್‌ಸಿ ಮಲ್ಲಿಕಾರ್ಜುನ ಬೆಲೇರಿ, ಶಿಕ್ಷಣ ಸಂಯೋಜಕರು, ಬಿಆರ್‌ಪಿ, ಸಿಆರ್‌ಪಿ, ಹಾಗೂ ತಾಲೂಕಿನ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next