Advertisement

ಬಿಸಿಯೂಟ ನಿರಾಕರಣೆ ನೀಚ ರಾಜಕೀಯ: ಎಂ.ಎಸ್‌. ಮಹಮ್ಮದ್‌

08:15 AM Feb 11, 2018 | Team Udayavani |

ಮಂಗಳೂರು: ಕಲ್ಲಡ್ಕ ಹಾಗೂ ಪುಣಚದ ಶಾಲೆಗಳು ಅನುದಾನಿತ ಶಾಲೆಗಳಲಾಗಿದ್ದು, ಅವು ಸರಕಾರದ ಬಿಸಿಯೂಟ ಯೋಜನೆಯನ್ನು ಪಡೆಯಲು ಅರ್ಹವಾಗಿವೆ. ಶಾಲೆಯ ಆಡಳಿತ ಮಂಡಳಿ ಸರಕಾರದ ಇತರ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಬಿಸಿಯೂಟವನ್ನು ನಿರಾಕರಿಸುವ ಮೂಲಕ ನೀಚ ರಾಜಕೀಯ ಮಾಡುತ್ತಿದೆ ಎಂದು ದ.ಕ.ಜಿ.ಪಂ. ವಿಪಕ್ಷ ನಾಯಕ ಎಂ.ಎಸ್‌. ಮಹಮ್ಮದ್‌ ಆರೋಪಿಸಿದರು.

Advertisement

ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಎರಡು ಶಾಲೆಗಳಿಗೆ ಮಧ್ಯಾಹ್ನದ ಊಟಕ್ಕಾಗಿ ಕೊಲ್ಲೂರು ದೇಗುಲದಿಂದ ಬರುತ್ತಿದ್ದ ಅನುದಾನವನ್ನು ಸರಕಾರ ನಿಲ್ಲಿಸಿದೆ ಎಂಬ ಆರೋಪ ಮಾಡಲಾಗುತ್ತಿದೆ. ಈ ರೀತಿ ದೂರದ ಶಾಲೆಗಳಿಗೆ ಅನುದಾನ ನೀಡಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಸರಕಾರ ಅನುದಾನ ನಿಲ್ಲಿಸಿದೆ. 

ಆದರೆ ಇದನ್ನೇ ಕಾರಣವಾಗಿಟ್ಟುಕೊಂಡು ಶಾಲಾ ಆಡಳಿತ ಮಂಡಳಿ ಮಕ್ಕಳಿಂದ ಭಿಕ್ಷೆ ಬೇಡಿಸುವ ಕೆಲಸ ಮಾಡಿದೆ. ಅನುದಾನ ನಿಲ್ಲಿಸಿರುವ ವಿಚಾರ ಜಿ.ಪಂ. ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದ್ದು, ಆ ಶಾಲೆಗಳಿಗೆ ಅಕ್ಷರ ದಾಸೋಹ ಯೋಜನೆಯಲ್ಲಿ ಬಿಸಿಯೂಟ ನೀಡುವಂತೆ ಕಾಂಗ್ರೆಸ್‌ ಜಿ.ಪಂ. ಸದಸ್ಯರು ಆಗ್ರಹಿಸಿದ್ದೇವೆ. 

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್‌ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿ ಅವರು ಅನುದಾನ ಕಡಿತ ಮಾಡಿರುವ ವಿಚಾರವನ್ನು ವಿಧಾನ ಪರಿಷತ್‌ ಕಲಾಪದಲ್ಲೂ ಪ್ರಸ್ತಾಪಿಸಿರುವುದು ಖಂಡನೀಯ. ಕೊಲ್ಲೂರಿನ ಅನುದಾನವನ್ನು ಸ್ಥಳೀಯ ಶಾಲೆಗಳಿಗೆ ನೀಡುವುದರಲ್ಲಿ ನಮ್ಮ ವಿರೋಧವಿಲ್ಲ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ಜಿ.ಪಂ. ಸದಸ್ಯರಾದ ಡಿ.ಎಸ್‌. ಮಮತಾ ಗಟ್ಟಿ, ಚಂದ್ರಪ್ರಕಾಶ್‌ ಶೆಟ್ಟಿ, ಬಿ. ಪದ್ಮಶೇಖರ್‌ ಜೈನ್‌, ಧರಣೇಂದ್ರ, ಮಂಜುಳಾ ಮಾವೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next