Advertisement

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

03:17 AM Sep 26, 2020 | Hari Prasad |

ಕುಂದಾಪುರ: ಬಿಸಿಯೂಟಕ್ಕಾಗಿ ವಿದ್ಯಾರ್ಥಿಗಳಿಗೆ ವಿತರಿಸಲೆಂದು ಖರೀದಿಸಲಾದ 216 ಕೋ. ರೂ. ಮೌಲ್ಯದ 2.55 ಲಕ್ಷ ಕ್ವಿಂಟಾಲ್‌ ತೊಗರಿ ಬೇಳೆ ರಾಜ್ಯದ ಗೋದಾಮುಗಳಲ್ಲಿ ಕೊಳೆಯುತ್ತಿದೆ.

Advertisement

ಅಕ್ಕಿ, ಬೇಳೆಯನ್ನು ವಿದ್ಯಾರ್ಥಿಗಳ ಮನೆಮನೆಗೆ ವಿತರಿಸುವ ರಾಜ್ಯ ಸರಕಾರದ ಆಶಯಕ್ಕೆ ಕೇಂದ್ರ ಸರಕಾರ ಬ್ರೇಕ್‌ ಹಾಕಿದ್ದರಿಂದ ರಾಜ್ಯ ಆರ್ಥಿಕ ಇಲಾಖೆ ಅನುಮೋದನೆ ನೀಡದಿರುವುದು ಈ ಪರಿಸ್ಥಿತಿಗೆ ಕಾರಣ.

ಜೂನ್‌ನಿಂದ ಈವರೆಗಿನ ಬಿಸಿ ಯೂಟದ ಅಕ್ಕಿ, ಬೇಳೆಗಳನ್ನು ಕಿಟ್‌ ರೂಪದಲ್ಲಿ ವಿತರಿಸಲು ಸಿದ್ಧತೆ ನಡೆದಿತ್ತು.

ಗೋದಾಮಿನಲ್ಲಿ ಬಾಕಿ
ಜೂನ್‌, ಜುಲೈಯ ಅಕ್ಕಿ, ಬೇಳೆ ವಿತರಣೆಗಾಗಿ ಎಲ್ಲ ಶಾಲೆಗಳಿಂದ ಮಾಹಿತಿ ಸಂಗ್ರಹಿಸಿ, ಖರೀದಿಸಿ ಪ್ರತೀ ತಾಲೂಕಿಗೆ ಕಳುಹಿಸಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಇರಿಸಲಾಗಿದೆ.ವಿತರಣೆ ಆದೇಶವಷ್ಟೇ ಬಾಕಿ ಎಂದು ಕಾದು ಕುಳಿತ ಶಾಲೆಯವರಿಗೆ ರಾಜ್ಯ ಹಣಕಾಸು ಇಲಾಖೆ ಆಘಾತ ನೀಡಿದೆ.

ಕೇಂದ್ರ ಸರಕಾರವು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ ಮತ್ತು ಪಡಿತರ ಮೂಲಕ ಉಚಿತ ಅಕ್ಕಿ, ಬೇಳೆ ನೀಡುತ್ತಿದೆ. ಆದ್ದರಿಂದ ಶಾಲೆಗಳು ಪುನಾರಂಭವಾದ ಬಳಿಕವೇ ಬಿಸಿಯೂಟ ಆರಂಭಿಸಬೇಕೆನ್ನುವುದು ಅದರ ಆದೇಶ. ಇದರಿಂದ ತಂದಿಟ್ಟ ಬೇಳೆ, ಅಕ್ಕಿ ಗೋದಾಮಿನಲ್ಲಿ ಬಾಕಿಯಾಗಿದೆ.

Advertisement

ಎಷ್ಟು ಬಾಕಿ?
ರಾಜ್ಯದೆಲ್ಲೆಡೆ ಒಟ್ಟು 2,55,868 ಕ್ವಿಂಟಾಲ್‌ ಬೇಳೆ ಸರಬರಾಜು ಆಗಿದೆ. ಇದರಲ್ಲಿ ಉಡುಪಿ ಜಿಲ್ಲೆಗೆ 3,840 ಕ್ವಿಂ., ದಕ್ಷಿಣ ಕನ್ನಡಕ್ಕೆ 5,166 ಕ್ವಿಂ., ಕೊಡಗು ಜಿಲ್ಲೆಗೆ 2,221 ಕ್ವಿಂ. ಇದನ್ನು ಪ್ರತೀ ಕ್ವಿಂ.ಗೆ 8,448 ರೂ.ಗಳಂತೆ ಖರೀದಿಸಲಾಗಿದೆ. ಅಂದರೆ ಒಟ್ಟು ಅಂದಾಜು 216.15 ಕೋ.ರೂ. ಆಗುತ್ತದೆ.

ಬೇಗ ಹಾಳಾಗುತ್ತದೆ
ಡಿಸೆಂಬರ್‌ಗೆ ಮುನ್ನ ಶಾಲಾರಂಭ ಕಷ್ಟ. 6 ತಿಂಗಳ ಅವಧಿಗೆ ಕರಾವಳಿ- ಮಲೆನಾಡಿನ ವಾತಾವರಣದಲ್ಲಿ ಗೋದಾಮುಗಳಲ್ಲಿ ಈ ಬೇಳೆ ಉಳಿಯಲಾರದು. ಅಕ್ಕಿಯನ್ನು ಸ್ಥಳೀಯ ಆಹಾರ ನಿಗಮದಿಂದ ಪಡೆಯುವ ಕಾರಣ ಸಮಸ್ಯೆಯಾಗಿಲ್ಲ. ಬೇಳೆ ಈಗಾಗಲೇ ಖರೀದಿಸಿದ ಕಾರಣ ಹಾಳಾಗುವ ಸಂಭವವಿದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯ ಅಕ್ಕಿ ಸರಕಾರಿ ಶಾಲೆಯ ಎಲ್ಲ ಮಕ್ಕಳ ಪೋಷಕರಿಗೆ ದೊರೆಯುವುದಿಲ್ಲ. ಹಾಗೆ ದೊರೆಯದವರಿಗೆ ಇದನ್ನು ವಿತರಿಸಬೇಕು, ತರಿಸಿದ ಬೇಳೆಯನ್ನು ಪಡಿತರ ವಿತರಣೆಗಾದರೂ ನೀಡಿ ನಷ್ಟ ತಪ್ಪಿಸಬೇಕು ಎನ್ನುವುದು ಕಳಕಳಿ.

ಈಗಾಗಲೇ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬಳಿಕ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಬೇಳೆ ಹಾಳಾಗಿ, ನಷ್ಟವಾಗಲು ಬಿಡುವುದಿಲ್ಲ.
– ಜಗದೀಶ್‌, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next