Advertisement

ಮೈಕ್ರೋಮ್ಯಾಕ್ಸ್, ಲಾವಾ, ಕಾರ್ಬನ್ ಮೊಬೈಲ್‌ಗಳ ಕಮ್‌ಬ್ಯಾಕ್‌!

08:39 PM Jan 24, 2021 | Team Udayavani |

ಮಣಿಪಾಲ: ಕಳೆದ ಕೆಲವು ವರ್ಷಗಳಲ್ಲಿ ಮಾರುಕಟ್ಟೆಯಿಂದ ಬಹುತೇಕ ಕಣ್ಮರೆಯಾಗಿದ್ದ ಭಾರತೀಯ ಮೂಲದ ಮೊಬೈಲ್ ಫೋನ್ ತಯಾರಕರಾದ ಮೈಕ್ರೋಮ್ಯಾಕ್ಸ್, ಲಾವಾ ಇಂಟರ್‌ನ್ಯಾಶನಲ್‌ ಮತ್ತು ಕಾರ್ಬನ್ ಮೊಬೈಲ್‌ಗಳು ಮತ್ತೆ ಗತವೈಭವಕ್ಕೆ ಮರಳುತ್ತಿವೆ.

Advertisement

ಕಳೆದ ನವೆಂಬರ್‌ನಲ್ಲಿ ಮೈಕ್ರೋಮ್ಯಾಕ್ಸ್ ಹೊಸ ಬ್ರಾಂಡ್ ಐಎನ್ ಮೊಬೈಲ್‌ಗಳೊಂದಿಗೆ ಮತ್ತೆ ಮಾರುಕಟ್ಟೆಯನ್ನು ಪ್ರವೇಶಿಸಿತು. ಲಾವಾ ಕಸ್ಟಮೈಸ್ ಮಾಡಿದ ಸ್ಮಾರ್ಟ್‌ಫೋನ್ ಶ್ರೇಣಿ ‘ಮೈ ಝೆಡ್’ ಅನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಮಾರುಕಟ್ಟೆಗೆ ಪ್ರವೇಶಿಸಿದೆ. ಕಾರ್ಬನ್ ಮೊಬೈಲ್ಸ್ ಮಾರ್ಚ್ ವೇಳೆಗೆ ಎರಡು ಸ್ಮಾರ್ಟ್‌ ಫೋನ್‌ಗಳನ್ನು ಪರಿಚಯಿಸಲು ಯೋಜಿಸುತ್ತಿದೆ.

ಮೇಡ್ ಇನ್ ಇಂಡಿಯಾ ನೇಮ್‌ಪ್ಲೇಟ್‌ನ ಹೊರತಾಗಿ, ಈ ಬ್ರಾಂಡ್‌ಗಳ ಪುನರಾಗಮನ ತಂತ್ರವು ಚೀನದ ಸ್ಮಾರ್ಟ್‌ಫೋನ್ ತಯಾರಕರ ತಂತ್ರವನ್ನು ಹೋಲುತ್ತದೆ, ಅವರು ಭಾರತೀಯ ಮಾರುಕಟ್ಟೆಯನ್ನು ಸೆರೆಹಿಡಿಯಲು ಭಾರೀ ವಿಶೇಷಣಗಳೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದರು. ಲಾವಾದ ಮೈ ಝೆಡ್ ಸರಣಿಯ ಬೆಲೆ 6,999-10,500 ರೂ., ಮೈಕ್ರೋಮ್ಯಾಕ್ಸ್ IN ನೋಟ್ 1 ಅನ್ನು 10,999 ರೂ. ಮತ್ತು IN 1b ಅನ್ನು 6,999 ರೂ. ಗಳಿಗೆ ನೀಡುತ್ತಿದೆ. ಕಾರ್ಬನ್ ಮೊಬೈಲ್ಸ್ ತನ್ನ ಸ್ಮಾರ್ಟ್‌ಫೋನ್ ಅನ್ನು 5,000-10,000 ರೂ.ಗಳ ಬೆಲೆ ವಿಭಾಗದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ.

ಕಾರ್ಬನ್‌ ಸಂಸ್ಥೆಯ ಗುರಿ ಏನು?
ಕಾರ್ಬನ್ ಸಂಸ್ಥೆ ಹೊಸದಾಗಿ ಮಾರಯಕಟ್ಟೆ ಸೃಷ್ಟಿಸಲು ಯೋಚಿಸುತ್ತಿದೆ. ಆರಂಭದಲ್ಲಿ 5,000-7,000 ರೂ.ಗಳ ಬೆಲೆಯ ಬ್ಯಾಂಡ್‌ನತ್ತ ಗಮನ ಹರಿಸಲು ಯೋಜಿಸುತ್ತಿದೆ. ಏಕೆಂದರೆ ಈ ವಿಭಾಗದಲ್ಲಿ ಹೆಚ್ಚಿನ ಸ್ಪರ್ಧೆಯಿಲ್ಲ, ಬಳಿಕ ಕ್ರಮೇಣ 10,000 ರೂ. ವಿಭಾಗದತ್ತ ಸಾಗಲಿದೆ. ಈ ಫೋನ್‌ಗಳಿಗಾಗಿ ಶ್ರೇಣಿ II ಮತ್ತು III ನಗರಗಳನ್ನು ಗುರಿಯಾಗಿಸಲು ಕಂಪೆನಿಯು ಯೋಜಿಸಿದೆ. ಅದರ 45,000 ಚಿಲ್ಲರೆ ಟಚ್‌ಪಾಯಿಂಟ್‌ಗಳ ಜಾಲವನ್ನು ಮತ್ತು ಮಾರಾಟ ಮಾಡಲು ಇ-ಕಾಮರ್ಸ್ ಮಾರುಕಟ್ಟೆ ಸ್ಥಳವನ್ನು ಟ್ಯಾಪ್ ಮಾಡಲು ಯೋಜಿಸಿದೆ. ಗ್ರಾಹಕರನ್ನು ಆಕರ್ಷಿಸಲು ಕಂಪೆನಿಯು 2 ಜಿಬಿ RAM ಮತ್ತು 32 ಜಿಬಿ ಸಂಗ್ರಹಣೆಯಂತಹ ವೈಶಿಷ್ಟ್ಯಗಳನ್ನು 6 ಇಂಚುಗಳಿಗಿಂತ ದೊಡ್ಡದಾದ ಸ್ಮಾರ್ಟ್‌ ಫೋನ್‌ ಮೂಲಕ 7,000 ರೂ.ಗಿಂತ ಕಡಿಮೆ ಬೆಲೆಗೆ ತರಲಿದೆ. ಒಟ್ಟಾರೆಯಾಗಿ ಕಂಪೆನಿಯು ಈ ವರ್ಷ ಎಂಟು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.

ಮೈಕ್ರೋಮ್ಯಾಕ್ಸ್ ಆನ್‌ಲೈನ್ ಮಾರಾಟ
ಮೈಕ್ರೋಮ್ಯಾಕ್ಸ್ ತನ್ನ ಹೊಸ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ಯುವಕರನ್ನು ಮತ್ತು ಚಿಲ್ಲರೆ ಮಾರಾಟವನ್ನು ಗುರಿಯಾಗಿಸುವ ಆನ್‌ಲೈನ್-ಮೊದಲ ತಂತ್ರದ ಮೇಲೆ ಕಣ್ಣಿಟ್ಟಿದೆ. ಕಂಪೆನಿಯು ಆರಂಭದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಕಂಪೆನಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೈಕ್ರೋಮ್ಯಾಕ್ಸ್.ಕಾಂನಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟಗೊಳಿಸಲು ತೀರ್ಮಾನಿಸಿದೆ. ಅನಂತರ ಅದನ್ನು ಆಫ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಅಲ್ಲಿ ಅದು ಸುಮಾರು 10,000 ಮಳಿಗೆಗಳನ್ನು ಹೊಂದಿದೆ. ಕಂಪೆನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ. ಕಂಪೆನಿಯ ಮೂಲಕಗಳ ಪ್ರಕಾರ ಹೈದರಾಬಾದ್, ಭಿವಾನಿ ಮತ್ತು ರುದ್ರಪುರದಲ್ಲಿ ಮೂರು ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ಹೊಂದಿದೆ. ಅಲ್ಲಿ ವಾರ್ಷಿಕವಾಗಿ 20 ದಶಲಕ್ಷ ಫೋನ್‌ಗಳನ್ನು ತಯಾರಿಸಬಹುದಾಗಿದೆ.

Advertisement

ಈ ಕಂಪೆನಿಗಳು ಕಡಿಮೆ ಬೆಲೆ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲಿವೆ. ಫೀಚರ್ ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್ ಮಾಡಲು ಬಯಸುವ ಅಂತಹ ಗ್ರಾಹಕರನ್ನು ಸಹ ಕಂಪೆನಿಯು ಟಾರ್ಗೆಟ್‌ ಮಾಡಿದೆ. ಈ ಕಂಪೆನಿಗಳು ಫೀಚರ್ ಫೋನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಚೀನದ ಬ್ರಾಂಡ್‌ಗಳು ಭಾರತಕ್ಕೆ ಬಂದ ಅನಂತರ ಅವು ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ಹೊರಬಂದವು. ಕಾರಣ ಬೇಡಿಕೆ ನಷ್ಟ.

4ಜಿಯ ಕಲ್ಪನೆಯೂ ಇರಲಿಲ್ಲ
ಶಿಯೋಮಿ, ಒಪ್ಪೊ ಮತ್ತು ವಿವೊ ಕಳೆದ ದಶಕದ ಮಧ್ಯದಲ್ಲಿ ಫೀಚರ್-ಲೋಡೆಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಹೆಚ್ಚಿನ ಉತ್ಪಾದನಾ ಸಾಮರ್ಥ್ಯದೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಆಗ 4 ಜಿ ಯ ಉಪಯುಕ್ತತೆಯನ್ನು ಭಾರತೀಯ ಕಂಪೆನಿಗಳು ಅರ್ಥಮಾಡಿಕೊಳ್ಳಲಿಲ್ಲ, ಇದು ಚೀನದ ಕಂಪೆನಿಗಳಿಗೆ ಸುಲಭವಾಯಿತು. ಕೌಂಟರ್‌ಪಾಯಿಂಟ್‌ ರಿಸರ್ಚ್ ಪ್ರಕಾರ, 2015ರಲ್ಲಿ ಮೈಕ್ರೋಮ್ಯಾಕ್ಸ್ ಮತ್ತು ಲಾವಾ ಸ್ಮಾರ್ಟ್ಫೋನ್ ಮಾರುಕಟ್ಟೆ ಪಾಲು ಕ್ರಮವಾಗಿ ಶೇ. 16 ಮತ್ತು ಶೇ. 6 ಆಗಿದ್ದು, ಇದು 2020 ರಲ್ಲಿ ಶೇ. 1ರಷ್ಟು ಕಡಿಮೆಯಾಗಿದೆ.

ಕಾರಣ ಏನು?
ದೇಶದಲ್ಲಿ ಚೀನ ವಿರೋಧಿ ಮನೋಭಾವ ಹೆಚ್ಚುತ್ತಿರುವಾಗ ಸರಕಾರವು ಸ್ವಾವಲಂಬಿ ಭಾರತ ಅಭಿಯಾನಕ್ಕೆ ತಿರುಗಿತು. ಈಗ ಮೊಬೈಲ್ ಉತ್ಪಾದನೆಗಾಗಿ ಸರಕಾರದ ಕಾರ್ಯಕ್ಷಮತೆ-ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆ ಈ ಕಂಪೆನಿಗಳನ್ನು ಮತ್ತೆ ವಿಭಾಗಕ್ಕೆ ಬರಲು ಸಹಾಯ ಮಾಡಿದೆ. ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಮುಕ್ಕಾಲು ಭಾಗವನ್ನು ಆಕ್ರಮಿಸಿಕೊಂಡಿರುವ ಚೀನೀ ಬ್ರಾಂಡ್‌ಗಳೊಂದಿಗೆ ಸ್ಪರ್ಧಿಸುವುದು ಅವರಿಗೆ ಸುಲಭವಲ್ಲ. ಕೆಲವು ಭಾರತೀಯ ಬ್ರ್ಯಾಂಡ್‌ಗಳು ತಮ್ಮ ಫೀಚರ್ ಫೋನ್‌ಗಳ ಕಾರಣದಿಂದಾಗಿ ಈಗಾಗಲೇ ಆಫ್‌ಲೈನ್ ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಹೊಂದಿರುವುದರಿಂದ ಈಗ ಭಾರತೀಯ ಕಂಪೆನಿಗಳು ಆನ್‌ಲೈನ್ ಮಾರುಕಟ್ಟೆಯೊಂದಿಗೆ ಪಾಲುದಾರಿಕೆ ಮಾಡಬೇಕಾಗಿದೆ ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next