Advertisement

ಮೈಕ್ರೋಪ್ಲಾಸ್ಟಿಕ್‌ ಎಂಬ ರಕ್ತ ಬೀಜಾಸುರ!

01:19 AM Jun 04, 2019 | Lakshmi GovindaRaj |

ಬೆಂಗಳೂರು: ಕಣ್ಣಿನ ಹುಬ್ಬಿಗೂ ಕಣ್ಣಿಗು ಹೆಚ್ಚು ಅಂತರವಿಲ್ಲ ಎನ್ನುವ ಮಾತಿದೆ. ಹಾಗೇ ಪ್ಲಾಸ್ಟಿಕ್‌ ಮತ್ತು ಮೈಕ್ರೋ ಪ್ಲಾಸ್ಟಿಕ್‌ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ಮೈಕ್ರೋ ಪ್ಲಾಸ್ಟಿಕ್‌ ಬಗ್ಗೆ ಚರ್ಚೆ ಆಗಿರುವುದು ತೀರ ಕಡಿಮೆ. ಪ್ಲಾಸ್ಟಿಕ್‌ ಕಣಗಳ ಬಗ್ಗೆ ಹೆಚ್ಚು ಚರ್ಚೆ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಭೂಮಿಯ ಒಡಲು ಮತ್ತು ಜಲಮೂಲಗಳನ್ನು ಸೇರುತ್ತಿರುವ ಅಪಾಯಕಾರಿ ಪ್ಲಾಸ್ಟಿಕ್‌ನ ಬಗ್ಗೆ ಜನರಿಗೆ ಸ್ವಲ್ಪ ಮಟ್ಟಿಗಾದರೂ ತಿಳಿವಳಿಕೆ ಇದೆ.

Advertisement

ಆದರೆ, ಸಣ್ಣ ಸುಳಿವೂ ಇಲ್ಲದೆ ಮೈಕ್ರೋಪ್ಲಾಸ್ಟಿಕ್‌ ಕಣಗಳು ನಮ್ಮ ದೇಹವನ್ನು ಸೇರುತ್ತಿವೆ. ಈ ಮೈಕೋ ಕಣಗಳು ಕಣ್ಣಿಗೂ ಕಾಣದೆ ಇರುವುದರಿಂದ ದೇಹವನ್ನು ಸೇರುತ್ತಿರುವುದು ತಿಳಿಯುತ್ತಿಲ್ಲ. ಕುಡಿಯುವ ನೀರಿಗಾಗಿ ನಾವು ಬಳಸುವ ಪ್ಲಾಸ್ಟಿಕ್‌ ಬಾಟಲಿಗಳ ಮೂಲಕವೂ ದೇಹದ ಅಂಗಾಂಗಗಳಿಗೆ ಮೈಕ್ರೋ ಅಂಶಗಳು ಲಗ್ಗೆ ಇಟ್ಟಿವೆ.

ಅಪಾಯಕಾರಿ ಮೈಕ್ರೋ ಪ್ಲಾಸ್ಟಿಕ್‌ ಪರೋಕ್ಷವಾಗಿ ನಮ್ಮ ಆಹಾರ ಸರಪಳಿಯನ್ನು ಸೇರುತ್ತಿದೆ. ಸೊಪ್ಪು, ತರಕಾರಿಗಳ ಬೇರಿನಲ್ಲಿ ಮೈಕ್ರೋಪ್ಲಾಸ್ಟಿಕ್‌ ಅಂಶಗಳು ಸೇರಿಕೊಳ್ಳುತ್ತಿವೆ. ಕೆರೆ, ರಾಜಕಾಲುವೆ ಮತ್ತು ಒಳಚರಂಡಿಗೂ ಪ್ಲಾಸ್ಟಿಕ್‌ ಸೇರಿಕೊಳ್ಳುತ್ತಿರುವುದರಿಂದ ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿದ್ದೇವೆ ಎನ್ನುತ್ತಾರೆ ವಿಜ್ಞಾನಿ ಟಿ.ವಿ ರಾಮಚಂದ್ರ.

ಪರಿಸರದ ಬಗ್ಗೆ ಮತ್ತು ನಾವು ಬಳಸುತ್ತಿರುವ ವಸ್ತುಗಳು ಪರಿಸರದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ತಿಳಿವಳಿಕೆ ಇಲ್ಲದೆ ಇರುವುದರಿಂದ ಸಮಸ್ಯೆ ಗಂಭೀರವಾಗಿದೆ. ನಮ್ಮಲ್ಲಿ ಶೇ.3.5ರಷ್ಟು ಜನರಿಗೆ ಮಾತ್ರ ಪರಿಸರ ಸಾಕ್ಷರತೆ ಇದೆ. ಉಳಿದ 96.5 ಜನರಿಗೆ ಪರಿಸರ ಸಾಕ್ಷರತೆಯೇ ಇಲ್ಲ. ಇದರ ಫ‌ಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಸಣ್ಣ ಮಕ್ಕಳಿಗೆ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಮಸಾಲೆ ದೋಸೆ, ಇಡ್ಲಿ ಮತ್ತಿತರ ಆಹಾರ ಪದಾರ್ಥಗಳನ್ನು ನೀಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ವಿಷಕಾರಿ ಬಾಟಲಿ: ನೀರು ಕುಡಿಯಲು ನಿತ್ಯ ಬಳಸುವ ಪ್ಲಾಸ್ಟಿಕ್‌ ಬಾಟಲ್‌ಗ‌ಳು, ಪ್ಲಾಸ್ಟಿಕ್‌ ಕ್ಯಾನ್‌ಗಳು ಸಹ ಅಪಾಯಕಾರಿ. ನೀರು ಪ್ಲಾಸ್ಟಿಕ್‌ಗೆ ಅಂಟಿಕೊಂಡೇ ಇರುವುದರಿಂದ ಬಾಟಲ್‌ನಲ್ಲಿನ ರಾಸಾಯನಿಕ ಅಂಶಗಳು ಕರಗುತ್ತವೆ. ಕ್ರಮೇಣ ಇದು ದೇಹವನ್ನು ಸೇರಿ ಕ್ಯಾನ್ಸರ್‌ ನಂತಹ ಮಾರಣಾಂತಿಕ ಕಾಯಿಲೆಗಳಿಗೂ ಕಾರಣವಾಗುತ್ತದೆ. ಬೆಂಗಳೂರಿನ ಬಿಎನ್‌ಎಂಟಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಅಕ್ಷರ್‌ ಕೆ.ಆರ್‌ ಮಾಡಿರುವ ಸಂಶೋಧನೆ, ನೀರಿನ ಮೂಲಕ ಪ್ಲಾಸ್ಟಿಕ್‌ ಅಂಶ ಹೇಗೆ ದೇಹ ಸೇರುತ್ತದೆ ಎಂಬುದು ಬೆಳಕಿಗೆ ಬಂದಿದೆ.

Advertisement

ಪಿಎಚ್‌ ಸಲ್ಯೂಷನ್‌ (ಸೂತ್ರ) ಮೂಲಕ ಕೈಗೊಂಡ ಸಂಶೋಧನೆಯಲ್ಲಿ, ಪ್ಲಾಸ್ಟಿಕ್‌ ಬಾಟಲಿಗಳಲ್ಲಿನ ನೀರಿನ ಜತೆ ಪ್ಲಾಸ್ಟಿಕ್‌ ರಾಸಾಯನಿಕ ಕರಗುತ್ತಿರುವುದು ಪತ್ತೆಯಾಗಿದೆ ಎನ್ನುತ್ತಾರೆ ಅಕ್ಷರ್‌.
ಆ್ಯಸಿಡ್‌ ಅಲ್ಕನೇನಿಟಿ ಅಂಶವು 6.5ರಿಂದ 7ಕ್ಕಿಂತ ಕಡಿಮೆ ಇರುವ ಯಾವುದೇ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಅತ್ಯಂತ ಅಪಾಯಕಾರಿ ಎನ್ನುವ ಅಕ್ಷಯ್‌, ಅದಮ್ಯ ಚೇತನ ಸಂಸ್ಥೆಯಿಂದ ನಡೆಯುತ್ತಿರುವ ಜಾಗೃತಿ ಕಾರ್ಯಕ್ರಮಗಳಲ್ಲಿ ಮೈಕ್ರೋ ಪ್ಲಾಸ್ಟಿಕ್‌ನ ಅಪಾಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಇ-ತ್ಯಾಜ್ಯದಿಂದಲೂ ಡ್ಯಾಮೇಜ್‌: ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆಲ್ಲ ಇ-ತ್ಯಾಜ್ಯವೂ ಹೆಚ್ಚಾಗುತ್ತಿದೆ. ಇ-ತ್ಯಾಜ್ಯ ಸಂಸ್ಕರಣೆಗೆ ಯಾವುದೇ ಕಾನೂನು ಇಲ್ಲದಿರುವುದು ಮತ್ತಷ್ಟು ಅಪಾಯಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಸಿ.ರಾಮಚಂದ್ರ. ಇ-ತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಕಾನೂನು ಬೇಕು.

ಎಷ್ಟು ಬಳಕೆಯಾಗುತ್ತಿದೆ, ಎಲ್ಲಿ ಅದನ್ನು ಸಂಸ್ಕರಣೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇರಬೇಕು. ಇಲ್ಲವಾದರೆ ಎಲ್ಲೆಂದರಲ್ಲಿ ಎಸೆದು ಕೈ ತೊಳೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತದೆ. ಇ-ತ್ಯಾಜ್ಯದಲ್ಲಿರುವ ಕೇಜಿಯಂ, ಕ್ರೋಮಿಯಂ, ನಿಕ್ಕಲ್‌ ಮತ್ತು ಲೆಡ್‌ ರೀತಿಯ ರಾಸಾಯನಿಕಗಳು ಅಂತರ್ಜಲ ಸೇರುತ್ತಿವೆ. ಇದರ ಸಂಸ್ಕರಣೆಗೆ ಸೂಕ್ತ ಮಾರ್ಗ ಕಂಡುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸುತ್ತಾರೆ ರಾಮಚಂದ್ರ.

ಪ್ರವಾಹಕ್ಕೂ ಬಾಟಲಿ ಕಾರಣ: ಮಳೆ ಬಂದಾಗ ನಗರದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿಗೂ, ನಾವು ನಿತ್ಯ ಬಳಸಿ, ಬಿಸಾಡುತ್ತಿರುವ ಪ್ಲಾಸ್ಟಿಕ್‌ ಬಾಟಲಿಗಳಿಗೂ ನೇರ ಸಂಬಂಧವಿದೆ. ಪ್ರತಿ ದಿನ ನಗರದಲ್ಲಿ ಸಾವಿರಾರು ಪ್ಲಾಸ್ಟಿಕ್‌ ಬಾಟಲಿಗಳನ್ನು ಬಿಸಾಡಲಾಗುತ್ತದೆ. ಎಲ್ಲೆಂದರಲ್ಲಿ ಎಸೆದ ಪ್ಲಾಸ್ಟಿಕ್‌ ಬಾಟಲಿಗಳು ಒಳಚರಂಡಿ ಸೇರಿತ್ತಿದ್ದು, ನೀರು ಹರಿಯುವುದನ್ನು ತಡೆಯುತ್ತಿವೆ. ಇದರಿಂದ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ.

ಏನಿದು ಮೈಕ್ರೋ ಪ್ಲಾಸ್ಟಿಕ್‌?: ಕಣ್ಣಿಗೆ ಕಾಣಿಸದ ಅತೀ ಸಣ್ಣ ಅಂಶವೇ ಮೈಕ್ರೋಪ್ಲಾಸ್ಟಿಕ್‌ ಇದು 0.05 ಎಂಎಂ ಗಿಂತಲೂ ಕಡಿಮೆ ಇರುತ್ತದೆ. ದೊಡ್ಡ ಪ್ರಮಾಣದ ಪ್ಲಾಸ್ಟಿಕ್‌ ಅನ್ನು ಕಟ್ಟುನಿಟ್ಟಾಗಿ ಸಂಸ್ಕರಣೆ ಮಾಡದೆ ಇರುವುದರಿಂದಲೇ ಮೈಕ್ರೋಪ್ಲಾಸ್ಟಿಕ್‌ ಅಂಶಗಳು ಹೆಚ್ಚಾಗುತ್ತಿವೆ. ಇವು ಪ್ಲಾಸ್ಟಿಕ್‌ ಜನ್ಮ ನೀಡಿದ ಮರಿಗಳು. ಸಾರ್ವಜನಿಕರಲ್ಲೂ ಈ ಬಗ್ಗೆ ತಿಳುವಳಿಕೆ ಇಲ್ಲದೆ ಇರುವುದರಿಂದಲೇ ಮೈಕ್ರೋಪ್ಲಾಸ್ಟಿಕ್‌ ಕಣಗಳು ಹೆಚ್ಚಾಗುತ್ತಿವೆ ಎನ್ನುತ್ತಾರೆ ತಜ್ಞರು.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next