ಮೊಹಾಲಿ: ಐಪಿಎಲ್ ತಂಡಗಳ ತಯಾರಿ ಜೋರಾಗಿದೆ. ಕೆಲ ದಿನಗಳ ಹಿಂದಷ್ಟೇ ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ನೀಡಿದ್ದ ಫ್ರಾಂಚೈಸಿಗಳು ಮಿನಿ ಹರಾಜಿಗೆ ಸಿದ್ದತೆ ನಡೆಸುತ್ತಿದೆ. ಈ ನಡುವೆ ಪಂಜಾಬ್ ಕಿಂಗ್ಸ್ ತಂಡವು ತಮ್ಮ ಸಹಾಯಕ ಸಿಬ್ಬಂದಿ ನೇಮಕ ಮಾಡಿದೆ.
ಭಾರತದ ಮಾಜಿ ಬ್ಯಾಟರ್ ವಾಸಿಂ ಜಾಫರ್ ಬುಧವಾರ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜಾಫರ್ ಅವರು ಈ ಹಿಂದೆಯೂ ಪಂಜಾಬ್ ಕಿಂಗ್ಸ್ ಪರವಾಗಿ ಕೆಲಸ ಮಾಡಿದ್ದಾರೆ. ಇದೀಗ 2023ರ ಸೀಸನ್ ಗೆ ಅವರನ್ನು ನೇಮಕ ಮಾಡಲಾಗಿದೆ. ಫ್ರಾಂಚೈಶಿಯು ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದೆ.
ಆದರೆ ವಾಸಿಂ ಜಾಫರ್ ಜತೆ ಸದಾ ಟ್ವಿಟ್ಟರ್ ನಲ್ಲಿ ಕಿರಿಕ್ ಮಾಡಿಕೊಳ್ಳುವ ಇಂಗ್ಲೆಂಡ್ ನ ಮಾಜಿ ನಾಯಕ ಮೈಕಲ್ ವಾನ್ ಮತ್ತೆ ಕಾಲೆಳೆದಿದ್ದಾರೆ. ಪಂಜಾಬ್ ಕಿಂಗ್ಸ್ ನ ಅನೌನ್ಸ್ ಮೆಂಟ್ ಟ್ವಿಟ್ ಗೆ ಮರುಟ್ವೀಟ್ ಮಾಡಿರುವ ವಾನ್, “”ನನಗೆ ಔಟಾದ ಯಾರೋ ಒಬ್ಬರು ಈಗ ಬ್ಯಾಟಿಂಗ್ ಕೋಚ್…” ಎಂದಿದ್ದಾರೆ.
ವಾನ್ ಅವರು 2002ರ ಲಾರ್ಡ್ಸ್ ಟೆಸ್ಟ್ ನಲ್ಲಿ ವಾಸಿಂ ಜಾಫರ್ ಅವರನ್ನು ಔಟ್ ಮಾಡಿದ್ದಾರೆ. ಇದನ್ನು ಉಲ್ಲೇಖಿಸಿ ಕುಹಕವಾಡಿದ್ದಾರೆ.
Related Articles
ಪಂಜಾಬ್ ಕಿಂಗ್ಸ್ ತಂಡವು ಈ ಬಾರಿ ಹಲವು ಬದಲಾವಣೆಗೆ ಮುಂದಾಗಿದೆ. ತಂಡದ ನಾಯಕತ್ವದಲ್ಲೂ ಬದಲಾವಣೆ ಮಾಡಿಸಿದ್ದು, ಶಿಖರ್ ಧವನ್ ಗೆ ನೂತನ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೆ ತಂಡವು ಮಯಾಂಕ್ ಅಗರ್ವಾಲ್, ಓಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ವೃತ್ತಿಕ್ ಚಟರ್ಜಿ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.