ದುಬೈ: ಐಸಿಸಿ ಟಿ20 ವಿಶ್ವಕಪ್ ಬಳಿಕ ತೆರವಾಗುತ್ತಿರುವ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಹೆಸರು ಕೇಳಿ ಬರುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೊತೆಗಿನ ಮಾತುಕತೆಯ ನಂತರ ದ್ರಾವಿಡ್ ಅವರು ಕೋಚ್ ಹುದ್ದೆ ನಿಭಾಯಿಸಲು ಒಪ್ಪಿಗೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಸುದ್ದಿ ಸದ್ಯ ಕ್ರಿಕೆಟ್ ವಿಶ್ವದಲ್ಲಿ ಸದ್ದು ಮಾಡುತ್ತಿದೆ.
ಇದುವರೆಗೆ ಕಿರಿಯರ ತಂಡ ಕೋಚ್ ಮತ್ತು ಎನ್ ಸಿಎ ಮುಖ್ಯಸ್ಥನ ಜವಾಬ್ದಾರಿ ಹೊತ್ತಿದ್ದ ರಾಹುಲ್ ದ್ರಾವಿಡ್ ಅವರು ಈ ಮೊದಲು ಮುಖ್ಯ ತಂಡದ ಕೋಚ್ ಆಗಲು ನಿರಾಕರಿಸಿದ್ದರು. ಬಿಸಿಸಿಐ ಈ ಹಿಂದೆ ಮೂರು ಸಲ ಈ ಬಗ್ಗೆ ಪ್ರಸ್ತಾವನೆ ಇಟ್ಟಾಗಲು ದ್ರಾವಿಡ್ ನಯವಾಗಿಯೇ ನಿರಾಕರಿಸಿದ್ದರು. ಕುಟುಂಬದ ಜೊತೆಗೆ ಹೆಚ್ಚಿನ ಕಾಲ ಕಳೆಯಬೇಕಾದ ಕಾರಣ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಮುಖ್ಯಸ್ಥ ಸ್ಥಾನವನ್ನು ಅವರು ವಹಿಸಿದ್ದರು.
ಆದರೆ ಶುಕ್ರವಾರ ದುಬೈ ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಅವರು ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಸ್ಥಾನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.
ಭಾರತೀಯ ಪುರುಷರ ತಂಡದ ಮುಖ್ಯ ಕೋಚ್ ಆಗಲು ರಾಹುಲ್ ದ್ರಾವಿಡ್ ಅವರು ಒಪ್ಪಿಗೆ ನೀಡಿದ್ದಾರೆ. ಎನ್ ಸಿಎ ಮುಖ್ಯಸ್ಥ ಸ್ಥಾನದಿಂದ ಅವರು ಶೀಘ್ರವೇ ಕೆಳಗಿಳಿಯಲಿದ್ದಾರೆ. ದ್ರಾವಿಡ್ ಆಪ್ತ ಪರಾಸ್ ಮಾಂಬ್ರೆ ಅವರು ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಈ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, “ಭಾರತೀಯ ಕ್ರಿಕೆಟ್ ತಂಡದ ಮುಂದಿನ ಕೋಚ್ ರಾಹುಲ್ ದ್ರಾವಿಡ್ ಆಗುವುದು ನಿಜವಾದರೆ ವಿಶ್ವ ಕ್ರಿಕೆಟ್ ಹುಷಾರಾಗಿರಬೇಕಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಭಾರತದ ದ್ವಿತೀಯ ತಂಡ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದಾಗ ದ್ರಾವಿಡ್ ಮೊದಲ ಸಲ ಹಿರಿಯರ ತಂಡದ ಕೋಚ್ ಆಗಿದ್ದರು. ಆಗ ಭಾರತದ ಪ್ರಧಾನ ತರಬೇತುದಾರ ರವಿಶಾಸ್ತ್ರಿ ಭಾರತ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಅವರ ಒಪ್ಪಂದದ ಅವಧಿ ಪೂರ್ಣಗೊಳ್ಳಲಿದೆ. ಅದರ ಬಳಿಕ ನಡೆಯುವ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ದ್ರಾವಿಡ್ ಕೋಚ್ ಆಗಿರಲಿದ್ದಾರೆ.