ಕೀ ಬಿಸ್ಕೇನ್: ಮೂರು ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಅವರನ್ನು ಉರುಳಿಸಿದ ಸ್ವಿಟ್ಸರ್‌ಲ್ಯಾಂಡಿನ ರೋಜರ್ ಫೆಡರರ್ ಅವರು ಮಿಯಾಮಿ ಓಪನ್ ಟೆನಿಸ್ ಕೂಟದ ಫೈನಲ್ ಹಂತಕ್ಕೇರಿದರು. ರವಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಅವರು ರಫೆಲ್ ನಡಾಲ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ನಲ್ಲಿ ನಡಾಲ್ ಅವರನ್ನು ಕಠಿನ ಹೋರಾಟದಲ್ಲಿ ಕೆಡಹಿದ್ದ ಫೆಡರರ್ ತನ್ನ ಬಾಳ್ವೆಯ 18ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಇದೀಗ ಮತ್ತೆ ನಡಾಲ್ ಅವರನ್ನು ಕೆಡಹಲು ಸಜ್ಜಾಗಿದ್ದಾರೆ. ನಡಾಲ್ 14 ಗ್ರ್ಯಾನ್ ಸ್ಲಾéಮ್ ಪ್ರಶಸ್ತಿ ಜಯಿಸಿದ್ದಾರೆ.
ಫೆಡರರ್ ಮತ್ತು ಕಿರ್ಗಿಯೋಸ್ ನಡುವಣ ಹೋರಾಟ ತೀವ್ರ ಪೈಪೋಟಿ ಯಿಂದ ಸಾಗಿತ್ತು. ಪ್ರತಿಯೊಂದು ಅಂಕ ಗಳಿಸಲೂ ಉಭಯ ಆಟಗಾರರು ವೀರಾವೇಶದಿಂದ ಹೋರಾಡಿದರು. ಮೂರು ಸೆಟ್ ಟೈಬ್ರೇಕರ್‌ನಲ್ಲಿ ಕೊನೆಗೊಂಡದ್ದು ಹೋರಾಟದ ತೀವ್ರತೆಗೆ ಸಾಕ್ಷಿಯಾಗಿದೆ. ಪ್ರೇಕ್ಷಕರ ಪೂರ್ಣ ಬೆಂಬಲದೊಂದಿಗೆ ಕಾದಾಡಿದ ಫೆಡರರ್ 7-6 (11-9), 6-7 (9-11), 7-6 (7-5) ಸೆಟ್‌ಗಳಿಂದ ಜಯಭೇರಿ ಬಾರಿಸಿದರು. ನಿರ್ಣಾಯಕ ಟೈಬ್ರೇಕ್‌ನಲ್ಲಿ ಫೆಡರರ್ ಜಯ ಸಾಧಿಸಿದಾಗ ಕಿರ್ಗಿಯೋಸ್ ಸೋತ ನಿರಾಸೆಯಿಂದ ಮೂರು ಬಾರಿ ರಾಕೆಟ್ ಅನ್ನು ಮೈದಾನಕ್ಕೆ ಬಡಿದರು.
ನಡಾಲ್ ಪ್ರಶಸ್ತಿ ಸುತ್ತಿಗೆ: ಈ ಮೊದಲು ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಇಟಲಿಯ ಫ್ಯಾಬಿಯೊ ಫಾಗ್ನಿನಿ ಅವರನ್ನು 6-1, 7-5 ನೇರ ಸೆಟ್‌ಗಳಿಂದ ಕೆಡಹಿ ಫೈನಲಿಗೇರಿದರು. ಶ್ರೇಯಾಂಕರಹಿತ ಆಟಗಾರ ಫಾಗ್ನಿನಿ ಮೊದಲ ಸೆಟ್‌ನಲ್ಲಿ ಹಿಡಿತ ಸಾಧಿಸಿಕೊಳ್ಳಲು ಬಹಳಷ್ಟು ಒದ್ದಾಡಿದರು. ಇದರಿಂದ ನಡಾಲ್ ಕೇವಲ 25 ನಿಮಿಷದಲ್ಲಿ ಮೊದಲ ಸೆಟ್ ತನ್ನದಾಗಿಸಿಕೊಂಡರು. ಆದರೆ ದ್ವಿತೀಯ ಸೆಟ್‌ನಲ್ಲಿ ಫಾಗ್ನಿನಿ ಸ್ವಲ್ಪಮಟ್ಟಿಗೆ ಹೋರಾಟ ನಡೆಸಿದರು. ಆದರೆ ಗೆಲುವಿನಿಂದ ದೂರವೇ ಉಳಿದರು.
ನಡಾಲ್ ಇದೀಗ ಐದನೇ ಬಾರಿ ಮಿಯಾಮಿ ಕೂಟದ ಫೈನಲ್‌ನಲ್ಲಿ ಆಡಲಿದ್ದು ಮೊದಲ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ನಾಲ್ಕು ಸಲವೂ ಅವರು ಫೈನಲ್‌ನಲ್ಲಿ ಸೋತಿದ್ದರು.