ಮುಂಬಯಿ: ಈ ಕೂಟದ ನೆಚ್ಚಿನ ಹಾಗೂ ಬಲಿಷ್ಠ ತಂಡಗಳಲ್ಲೊಂದಾದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ “ಎ ದರ್ಜೆ”ಯ ಗೇಮ್ ಪ್ರದರ್ಶಿಸಬೇಕಾದ ಒತ್ತಡದಲ್ಲಿದೆ. ರವಿವಾರ ತವರಿನ ವಾಂಖೇಡೆ ಸ್ಟೇಡಿಯಂನಲ್ಲಿ ಈ ಮುಖಾಮುಖೀ ಏರ್ಪಡಲಿರುವುದೂ ಮುಂಬೈ ಮೇಲಿನ ಒತ್ತಡವನ್ನು ತುಸು ಹೆಚ್ಚಿಸಿದೆ ಎನ್ನಲಡ್ಡಿಯಿಲ್ಲ.
ಮುಂಬೈ ಇಂಡಿಯನ್ಸ್ ಕಳೆದ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಅಹ್ಮದಾಬಾದ್‌ನಲ್ಲಿ ಆಡಿ ಸೋತು ಬಂದಿತ್ತು. ಇದರೊಂದಿಗೆ ರೋಹಿತ್ ಪಡೆ ಏಳರಲ್ಲಿ 4 ಪಂದ್ಯಗಳನ್ನು ಕಳೆದುಕೊಂಡಂತಾಯಿತು. ಶನಿವಾರದ ಪಂದ್ಯಗಳಿಗೂ ಮುನ್ನ ಮುಂಬೈ ಏಳರಷ್ಟು ಕೆಳಗಿನ ಸ್ಥಾನದಲ್ಲಿತ್ತು. ಇನ್ನೊಂದೆಡೆ ರಾಜಸ್ಥಾನ್ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇರಿಸಿದೆ. ಚೆನ್ನೈ ವಿರುದ್ಧ ತವರಿನ ಜೈಪುರ ಅಂಗಳದಲ್ಲಿ ಗೆದ್ದು ವಾಂಖೇಡೆಗೆ ಆಗಮಿಸಿದೆ.
ಈ ಕೂಟದಲ್ಲಿ ಇತ್ತಂಡಗಳ ಬಲಾ ಬಲದ ಲೆಕ್ಕಾಚಾರದಲ್ಲಿ ಸಂಜು ಸ್ಯಾಮ್ಸನ್ ಪಡೆಯೇ “ಪ್ರೈಮ್ ಫಾರ್ಮ್ನ”ಲ್ಲಿದೆ ಎಂದು ಧಾರಾಳ ವಾಗಿ ತೀರ್ಮಾನಿಸಬಹುದು. ಮುಖ್ಯ ವಾಗಿ ಮುಂಬಯಿಯವರೇ ಆದ ಆರಂಭಕಾರ ಯಶಸ್ವಿ ಜೈಸ್ವಾಲ್ ಫಾರ್ಮ್ ಅಮೋಘ ಮಟ್ಟದಲ್ಲಿದೆ. ಅಂದು ಚೆನ್ನೈ ತಂಡದ ಮುಂಬಯಿ ಆಟಗಾರ ಅಜಿಂಕ್ಯ ರಹಾನೆ ವಾಂಖೇಡೆಯಲ್ಲಿ ಸಿಡಿದಂತೆ, ಜೈಸ್ವಾಲ್ ಕೂಡ ತವರಿನ ಅಂಗಳದಲ್ಲಿ ಸಿಡಿದು ನಿಲ್ಲಬಾರದೇಕೆ? 158 ರನ್ ಚೇಸಿಂಗ್ ವೇಳೆ 27 ಎಸೆತಗಳಿಂದ 61 ರನ್ (7 ಬೌಂಡರಿ, 3 ಸಿಕ್ಸರ್) ಬಾರಿಸಿದ ರಹಾನೆ ಆಟ ಇನ್ನೂ ಕಣ್ಮುಂದಿದೆ.
ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್, ಹೆಟ್‌ಮೈರ್, ಧ್ರುವ ಜುರೆಲ್, ಪಡಿಕ್ಕಲ್ ಅವರಿಂದ ರಾಜಸ್ಥಾನ್ ಬ್ಯಾಟಿಂಗ್ ಲೈನ್‌ಅಪ್ ಬೆಳೆಯುತ್ತದೆ. ಬೌಲಿಂಗ್‌ನಲ್ಲಿ ಸ್ಪಿನ್ ತ್ರಿವಳಿಗಳಾದ ಅಶ್ವಿನ್, ಚಹಲ್, ಝಂಪ ದಾಳಿಯನ್ನು ಎದುರಿಸಿ ನಿಲ್ಲುವುದು ಸುಲಭವಲ್ಲ. ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಆರಂಭದಲ್ಲೇ ಬಿಗಿ ಬೌಲಿಂಗ್ ಸಂಘಟಿಸುತ್ತಿದ್ದಾರೆ.
ಡೆತ್ ಓವರ್ ಸಮಸ್ಯೆ
ಮುಂಬೈ ಸಮಸ್ಯೆ ಇರುವುದು ಡೆತ್ ಓವರ್‌ಗಳಲ್ಲಿ. ವಾಂಖೇಡೆಯಲ್ಲೇ ಆಡಲಾದ ಪಂಜಾಬ್ ಎದುರಿನ ಕಳೆದ ಪಂದ್ಯದಲ್ಲಿ ಕೊನೆಯ 30 ಎಸೆತಗಳಲ್ಲಿ 96 ರನ್ ನೀಡಿತ್ತು. ಇದರಿಂದ ಪಂಜಾಬ್ ಮೊತ್ತ 214ರ ತನಕ ಬೆಳೆದಿತ್ತು. ಮುಂಬೈ ಕೂಡ 201 ರನ್ ಮಾಡಿತೆಂಬುದು ಬೇರೆ ಮಾತ್ತು. ಅನಂತರ ಗುಜರಾತ್ ವಿರುದ್ಧವೂ ಈ ಸಮಸ್ಯೆ ಪುನರಾವರ್ತನೆಗೊಂಡಿತು. ಅಂತಿಮ 4 ಓವರ್‌ಗಳಲ್ಲಿ 70 ರನ್ ಸೋರಿ ಹೋಯಿತು.
Related Articles
ಚಾವ್ಲಾ, ಹೃತೀಕ್ ಶೊಕೀನ್ ಹೊರತು ಪಡಿಸಿ ಉಳಿದ ವರು ಪರಿಣಾಮ ಬೀರುತ್ತಿಲ್ಲ. ಮುಖ್ಯ ವಾಗಿ ವೇಗಿಗಳಾದ ಅರ್ಜುನ್ ತೆಂಡು ಲ್ಕರ್, ಬೆಹ್ರೆಂಡಾರ್ಫ್, ರಿಲೇ ಮೆರೆಡಿತ್ ಹರಿತವಾದ ದಾಳಿ ಸಂಘಟಿಸಬೇಕಿದೆ.