ಚೆನ್ನೈ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. “ವಾಂಖೇಡೆ’ಯಲ್ಲಿ ಆಡಿ ಮುಂಬೈಯನ್ನು 7 ವಿಕೆಟ್‌ಗಳಿಂದ ಮಣಿಸಿ ಬಂದ ಚೆನ್ನೈ ತವರಲ್ಲೂ ಮೇಲುಗೈ ಸಾಧಿಸೀತೇ ಅಥವಾ ರೋಹಿತ್ ಪಡೆ ಸೇಡು ತೀರಿಸಿಕೊಂಡೀತೇ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳದ್ದು.
ಇದು 4 ವರ್ಷಗಳ ಬಳಿಕ ಇತ್ತಂಡ ಗಳ ನಡುವೆ ಚೆನ್ನೈಯಲ್ಲಿ ನಡೆಯುವ ಮುಖಾಮುಖೀ. ಚೆನ್ನೈಯಲ್ಲಿ ನಡೆದ 2019ರ ಎರಡೂ ಮೇಲಾಟದಲ್ಲಿ ಮುಂಬೈ ಜಯ ಸಾಧಿಸಿತ್ತು. ಹೀಗಾಗಿ ಚೆನ್ನೈ ಅಭಿಮಾನಿಗಳಿಗೆ ಧೋನಿ ಪಡೆ ಗೆಲುವನ್ನು ಕಾಣುವ ಕಾತರ ಸಹಜ.
ಆದರೀಗ ಧೋನಿ ಪಡೆಯ ನಸೀಬು ಅಷ್ಟೇನೂ ಚೆನ್ನಾಗಿಲ್ಲ. ಕಳೆದ 3 ಪಂದ್ಯಗಳಲ್ಲಿ ಗಳಿಸಲು ಸಾಧ್ಯವಾದದ್ದು ಒಂದು ಅಂಕ ಮಾತ್ರ. ಶನಿವಾರದ ಲಕ್ನೋ ಎದುರಿನ ಪಂದ್ಯವನ್ನು ಮಳೆ ನುಂಗಿತ್ತು. ಎ. 30ರ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯವನ್ನು ಕೊನೆಯ ಎಸೆತದಲ್ಲಿ ಕಳೆದುಕೊಂಡಿತ್ತು. ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್‌ಗೆ
32 ರನ್ನುಗಳಿಂದ ಶರಣಾಗಿತ್ತು.ಒಟ್ಟಾರೆ ಧೋನಿ ಪಡೆಗೆ ತುರ್ತಾಗಿ ಗೆಲುವೊಂದರ ಅಗತ್ಯವಿದೆ.
ವಾಂಖೇಡೆ ಮೇಲಾಟದಲ್ಲಿ ಮುಂಬೈ 8 ವಿಕೆಟಿಗೆ ಕೇವಲ 157 ರನ್ ಗಳಿಸಿತ್ತು. ಚೆನ್ನೈ 18.1 ಓವರ್‌ಗಳಲ್ಲಿ 3 ವಿಕೆಟಿಗೆ 159 ರನ್ ಬಾರಿಸಿ ಗೆದ್ದು ಬಂದಿತ್ತು. ಮುಂಬಯಿಯವರೇ ಆದ ಅಜಿಂಕ್ಯ ರಹಾನೆ ಸಿಡಿದು ನಿಂತು 27 ಎಸೆತಗಳಿಂದ 61 ರನ್ ಬಾರಿಸಿ (7 ಬೌಂಡರಿ, 3 ಸಿಕ್ಸರ್) ರೋಹಿತ್ ಪಡೆಗೆ ನೀರು ಕುಡಿಸಿದ್ದನ್ನು ಮರೆಯುವಂತಿಲ್ಲ.
Related Articles
ಚೆನ್ನೈ ಓಪನರ್ ಅಮೋಘ ಫಾರ್ಮ್ ನಲ್ಲಿದ್ದಾರೆ. ಡೇವನ್ ಕಾನ್ವೇ ಸತತ ಅರ್ಧ ಶತಕ ಬಾರಿಸುತ್ತ ಈಗಾಗಲೇ 414 ರನ್ ರಾಶಿ ಹಾಕಿದ್ದಾರೆ. ರುತುರಾಜ್ ಗಾಯಕ್ವಾಡ್ 354 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ, ಶಿವಂ ದುಬೆ ಅವರನ್ನು ನಂಬಿಕೊಳ್ಳಬಹುದು. ಆದರೆ ಅಂಬಾಟಿ ರಾಯುಡು, ಮೊಯಿನ್ ಅಲಿ ಪ್ರಯತ್ನ ಸಾಲದು. ಜಡೇಜ-ಧೋನಿ ಜೋಡಿಯಿಂದಲೂ ಹೆಚ್ಚೇ ನಿರೀಕ್ಷಿಸಲಾಗಿದೆ.
ಬೌಲಿಂಗ್ ವಿಭಾಗದಲ್ಲಿ ತುಷಾರ್ ದೇಶಪಾಂಡೆ (17 ವಿಕೆಟ್), ಲಂಕೆಯ ಜೋಡಿಯಾದ ಮಹೀಶ ತೀಕ್ಷಣ, ಮತೀಶ ಪತಿರಣ ಎದುರಾಳಿ ಪಾಲಿಗೆ ಕಗ್ಗಂಟಾಗುತ್ತಿದ್ದಾರೆ.
ಚೇತರಿಸಿದೆ ಮುಂಬೈ
ಮುಂಬೈ ಆರಂಭಿಕ ಆಘಾತದಿಂದ ಹಂತ ಹಂತವಾಗಿ ಚೇತರಿಸಿಕೊಂಡು 9 ಪಂದ್ಯಗಳಲ್ಲಿ ಐದನ್ನು ಗೆದ್ದಿದೆ. ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟಿಗೆ 214 ರನ್ ಬಾರಿಸಿ ಜಯಭೇರಿ ಮೊಳಗಿಸಿದ್ದರಿಂದ ಮುಂಬೈ ಆತ್ಮವಿಶ್ವಾಸ ಬಹಳಷ್ಟು ಎತ್ತರ ತಲುಪಿದೆ. ನಾಯಕ ರೋಹಿತ್ ಶರ್ಮ ಹೊರತುಪಡಿಸಿ ಉಳಿದವರೆಲ್ಲ ಚೆನ್ನಾಗಿಯೇ ಬ್ಯಾಟ್ ಬೀಸುತ್ತಿದ್ದಾರೆ. ಇಶಾನ್ ಕಿಶನ್, ಕ್ಯಾಮರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಟಿಮ್ ಡೇವಿಡ್ ಸೇರಿಕೊಂಡು ರಾಜಸ್ಥಾನ್ ದಾಳಿಯನ್ನು ಪುಡಿಗಟ್ಟಿದ್ದರು.