Advertisement

MI ಪರಿಸ್ಥಿತಿ ಬಿಗಡಾಯಿಸಿದೆ..; ಮುಂಬೈ ಬಿಡುವರೇ ರೋಹಿತ್‌ ಶರ್ಮ?

12:16 AM Apr 06, 2024 | Team Udayavani |

ಮುಂಬಯಿ: ಮುಂಬೈ ತಂಡಕ್ಕೆ ಪಾಂಡ್ಯ ನಾಯಕರಾಗಿ ಆರಿಸಲ್ಪಟ್ಟಾಗಿನಿಂದ ತಂಡದೊಳಗಿನ ಪರಿಸ್ಥಿತಿ ಬಿಗಡಾಯಿಸಿದೆ. ಹಾಲಿ ನಾಯಕ ಮತ್ತು ಮಾಜಿ ನಾಯಕ ರೋಹಿತ್‌ ಶರ್ಮ ಮಧ್ಯೆ ಜಟಾಪಟಿ ನಡೆಯುತ್ತಲೇ ಇದೆ. ಈ ಮಧ್ಯೆ ರೋಹಿತ್‌, ಮುಂಬೈ ತೊರೆದು ಹೈದರಾಬಾದ್‌ ಸೇರುತ್ತಾರೆಂದು ಸುದ್ದಿಯಾಗಿದೆ. ಇನ್ನೊಂದೆಡೆ, ಮುಂಬೈ ನಾಯಕತ್ವ ಮತ್ತೆ ರೋಹಿತ್‌ ಹೆಗಲೇರಲಿದೆ ಎಂದೂ ವರದಿಯಾಗಿದೆ.

Advertisement

ಈ ಐಪಿಎಲ್‌ನಲ್ಲಿ 3 ಪಂದ್ಯಗಳನ್ನಾಡಿರುವ ಮುಂಬೈ, ಮೂರರಲ್ಲೂ ಸೋತು ಮುಖಭಂಗ ಕ್ಕೀಡಾಗಿದೆ. ಸಾಲದೆಂಬಂತೆ, ಮುಂಬೈನ ಪ್ರತೀ ಪಂದ್ಯ ಮುಗಿದ ಮರುದಿನ, ನಾಯಕ ಹಾರ್ದಿಕ್‌ ಮತ್ತು ತಂಡದ ಆಟಗಾರರ ನಡುವೆ ಬಿಗುವಿನ ವಾತಾವರಣ ಏರ್ಪಟ್ಟ ಪೋಸ್ಟ್‌ ಜಾಲತಾಣದಲ್ಲಿ ಕಾಣಸಿಗುತ್ತಿದೆ. ತಂಡದಲ್ಲಿ ಭಿನ್ನಾಭಿಪ್ರಾಯ ಭುಗಿಲೇಳುತ್ತಿದೆ ಎನ್ನುವುದಕ್ಕೆ ಇವೇ ಸಾಕ್ಷಿ ಹೇಳುತ್ತಿವೆ.

ನಾಯಕತ್ವದ ವಿಚಾರದಲ್ಲಿ ಫ್ರಾಂಚೈಸಿ ನಡೆಸಿ ಕೊಂಡ ರೀತಿ ಬಗ್ಗೆ ರೋಹಿತ್‌ಗೆ ಬೇಸರವಿದೆ. ಡ್ರೆಸ್ಸಿಂಗ್‌ ರೂಮ್‌ ವಾತಾವರಣವೂ ಸರಿಯಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರೋಹಿತ್‌ ತಂಡವನ್ನು ತೊರೆದು, ಮುಂದಿನ ಆವೃತ್ತಿಯಲ್ಲಿ ಹೈದರಾಬಾದ್‌ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಅಭ್ಯಾಸ ಆರಂಭಿಸಿದ ಸೂರ್ಯಕುಮಾರ್‌
ಸತತ ಸೋಲು ಹಾಗೂ ನಾಯಕತ್ವ ವಿವಾದದಿಂದ ತತ್ತರಿಸಿರುವ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಶುಭ ಸಮಾಚಾರವೊಂದು ಲಭಿಸಿದೆ. “360 ಡಿಗ್ರಿ ಕ್ರಿಕೆಟರ್‌’, ಟಿ20 ಕ್ರಿಕೆಟಿನ ನಂ.1 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಶುಕ್ರವಾರ ತಂಡದ ಆಟಗಾರರೊಂದಿಗೆ ಅಭ್ಯಾಸ ಆರಂಭಿಸಿದರು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ರವಿವಾರದ ವಾಂಖೇಡೆ ಪಂದ್ಯದಲ್ಲಿ ಅವರು ಮುಂಬೈ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತಪಟ್ಟಿದೆ.

ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೂರ್ಯಕುಮಾರ್‌ ಯಾದವ್‌ ಜನವರಿಯಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

Advertisement

ತಂಡದ ಇತರ ಆಟಗಾರರಿಗಿಂತ ಒಂದು ಗಂಟೆ ಮೊದಲೇ ಸೂರ್ಯಕುಮಾರ್‌ “ವಾಂಖೇಡೆ ಸ್ಟೇಡಿಯಂ’ಗೆ ಆಗಮಿಸಿದ್ದರು. ಎರಡು ನೆಟ್ಸ್‌ಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಇವರಿಗೆ ಮುಂಬೈ ಸ್ಪಿನ್ನರ್‌ ಕುಮಾರ ಕಾರ್ತಿಕೇಯ ಬೌಲಿಂಗ್‌ ನಡೆಸಿದರು. ಎಂದಿನಂತೆ ಬಿರುಸಿನ ಆಟದ ಮೂಲಕ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next