ಡಲ್ಲಾಸ್: ಮುಂಬೈ ಇಂಡಿಯನ್ಸ್ ನ ಫ್ರಾಂಚೈಸ್ ಸಂಸ್ಥೆ ಎಂಐ ನ್ಯೂಯಾರ್ಕ್ ಇದೀಗ ಇತಿಹಾಸ ಬರೆದಿದೆ. ಚೊಚ್ಚಲ ಮೇಜರ್ ಲೀಗ್ ಕ್ರಿಕೆಟ್ ಕಪ್ ನ್ಯೂಯಾರ್ಕ್ ತಂಡ ಗೆದ್ದು ಕೊಂಡಿದೆ. ಫೈನಲ್ ಪಂದ್ಯದಲ್ಲಿ ಸೀಟಲ್ ಓರ್ಕಸ್ ವಿರುದ್ಧ ಎಂಐ ನ್ಯೂಯಾರ್ಕ್ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿ ಸೀಟಲ್ ಓರ್ಕಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದರೆ, ಪೂರನ್ ಸಿಡಿಲಬ್ಬರದ ಶತಕದ ನೆರವಿನಿಂದ ನ್ಯೂಯಾರ್ಕ್ 16 ಓವರ್ ಗಳಲ್ಲಿ ಗುರಿ ತಲುಪಿ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸೀಟಲ್ ತಂಡಕ್ಕೆ ಡಿಕಾಕ್ ನೆರವು ನೀಡಿದರು. 52 ಎಸೆತಗಳಲ್ಲಿ ಡಿಕಾಕ್ ನಾಲ್ಕು ಸಿಕ್ಸರ್ ಸಹಿತ 87 ರನ್ ಗಳಿಸಿದರು. ಉಳಿದಂತೆ ಶುಭಂ ರಂಜನೆ 29 ರನ್, ಪ್ರಿಟೋರಿಯಸ್ 21 ರನ್ ಮಾಡಿದರು. ಎಂಐ ಪರ ಬೋಲ್ಟ್ ಮತ್ತು ರಶೀದ್ ಖಾನ್ ತಲಾ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡವು ಆರಂಭದಲ್ಲೇ ಸ್ಟೀವನ್ ಟೇಲರ್ ವಿಕೆಟ್ ಕಳೆದುಕೊಂಡಿತು. ಆದರೆ ವನ್ಡೌನ್ ಬ್ಯಾಟರ್ ಆಗಿ ಬಂದ ನಿಕೋಲರ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 55 ಎಸೆತ ಎದುರಿಸಿದ ಪೂರನ್ 13 ಸಿಕ್ಸರ್ ಮತ್ತು 10 ಬೌಂಡರಿ ಬಾರಿಸಿದ ಪೂರನ್ ಅಜೇಯ 137 ರನ್ ಮಾಡಿದರು. ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದರು.
ಪೂರನ್ ಶತಕದ ನೆರವಿನಿಂದ ಎಂಐ ನ್ಯೂಯಾರ್ಕ್ ತಂಡವು ಕೇವಲ ಮೂರು ವಿಕೆಟ್ ಕಳೆದುಕೊಂಡು 16 ಓವರ್ ಗಳಲ್ಲಿ ಗುರಿ ತಲುಪಿ ವಿಜಯಿಯಾಯಿತು.
ನಿಕೋಲಸ್ ಪೂರನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಕ್ಯಾಮರೂನ್ ಗ್ಯಾನನ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.