Advertisement

ಮಾಡಾ ಲಾಟರಿ: ಶಿವ ಸೇನೆಯ ಕಾರ್ಯಕರ್ತನಿಗೆ 5 ಕೋಟಿಯ 2 ಫ್ಲ್ಯಾಟ್‌

04:43 PM Dec 17, 2018 | udayavani editorial |

ಮುಂಬಯಿ : ಮಹಾರಾಷ್ಟ್ರ ಹೌಸಿಂಗ್‌ ಆ್ಯಂಡ್‌ ಏರಿಯಾ ಡೆವಲಪ್‌ಮೆಂಟ್‌ ಅಥಾರಿಟಿ (ಮಾಡಾ) ತಾನು ವಿವಿಧ ಆರ್ಥಿಕ ವರ್ಗಗಳ ಫ‌ಲಾನುಭವಿಗಳಿಗಾಗಿ ನಿರ್ಮಿಸಿರುವ 1,384 ಅಪಾರ್ಟ್‌ಮೆಂಟ್‌ಗಳ ಲಾಟರಿ ಫ‌ಲಿತಾಂಶವನ್ನು ನಿನ್ನೆ ಭಾನುವಾರ ಪ್ರಕಟಸಿದ್ದು ಶಿವ ಸೇನೆಯ ಕಾರ್ಯಕರ್ತ, ಅಗ್ರಿಪಾಡಾ ದ ವಿನೋದ್‌ ಶಿರ್ಕೆ ಅವರಿಗೆ ಭಾರೀ ಅದೃಷ್ಟವೆಂಬಂತೆ ತಲಾ ಐದು ಕೋಟಿ ರೂ. ಮೌಲ್ಯದ ಎರಡು ಫ್ಲ್ಯಾಟುಗಳು ಸಿಕ್ಕಿದೆ. 

Advertisement

ಮಾಡಾ ಆರ್ಥಿಕವಾಗಿ ದುರ್ಬಲರಿರುವ ಮತ್ತು ಕಡಿಮೆ ಆದಾಯದ ವರ್ಗದವರಿಗೆ 999 ಮನೆಗಳನ್ನು, ಮಧ್ಯಮ ಆದಾಯ ವರ್ಗದವರಿಗೆ 210 ಫ್ಲಾಟ್‌ಗಳನ್ನು ಮತ್ತು ಉನ್ನತ ಆದಾಯದ ವರ್ಗದವರಿಗಾಗಿ 194 ಫ್ಲ್ಯಾಟುಗಳನ್ನು ಮಾರಾಟದ ಉದ್ದೇಶದಲ್ಲಿ ನಿರ್ಮಿಸಿತ್ತು. 

ಮಾಡಾ ಗೆ ಒಟ್ಟು 1.60 ಲಕ್ಷ ಅರ್ಜಿಗಳು ಬಂದಿದ್ದವು. ಈ ಪೈಕಿ 80 ಅರ್ಜಿಗಳು ಮೂರು ದುಬಾರಿ ಫ್ಲ್ಯಾಟುಗಳಿಗೆ ಬಂದಿದ್ದವು. 

ಗ್ರ್ಯಾಂಟ್‌ ರೋಡ್‌ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಧವಳಗಿರಿ ಕಟ್ಟಡದಲ್ಲಿರುವ ಮೂರು ದುಬಾರಿ ಫ್ಲ್ಯಾಟಗಳ ಬೆಲೆ ಅನುಕ್ರಮವಾಗಿ 4.99 ಕೋಟಿ ರೂ., 5.13 ಕೋಟಿ ರೂ. ಮತ್ತು 5.80 ಕೋಟಿ ರೂ. ಇತ್ತು. 

ಈ ಪೈಕಿ ವಿನೋದ್‌ ಶಿರ್ಕೆಗೆ 4.99 ಕೋಟಿ ರೂ. ಮತ್ತು 5.8 ಕೋಟಿ ರೂ. ಮೌಲ್ಯದ ಎರಡು ಫ್ಲ್ಯಾಟುಗಳು ಲಾಟರಿಯಲ್ಲಿ ಬಂದಿವೆ. ಮೂರನೇ ಫ್ಲ್ಯಾಟು ಅಖ್‌ತರ್‌ ಸೈದ್‌ ಮೊಹಮ್ಮದ್‌ ಎಂಬವರಿಗೆ ಸಿಕ್ಕಿದೆ. 

Advertisement

ಶಿರ್ಕೆಗೆ ಎರಡು ಫ್ಲ್ಯಾಟುಗಳು ಲಾಟರಿಯಲ್ಲಿ ಸಿಕ್ಕಿವೆಯಾದರೂ ಆತ ಮಾಡಾ ನಿಮಯಗಳ ಪ್ರಕಾರ ತನ್ನ ಆಯ್ಕೆಯ ಒಂದನ್ನು ಉಳಿಸಿಕೊಂಡು ಇನ್ನೊಂದನ್ನು  ಪ್ರಾಧಿಕಾರಕ್ಕೆ ಒಪ್ಪಿಸಬೇಕಾಗುತ್ತದೆ.

ಇನ್ನೊಂದು ಸಂಗತಿ ಎಂದರೆ ಮುಂಬಯಿ ಹೊರವಲಯದ ತಿತ್‌ವಾಲಾದಲ್ಲಿನ ತಡವಿ ಕುಟುಂಬ ಈ ಲಾಟರಿಯಲ್ಲಿ  ಮೂರು ಫ್ಲ್ಯಾಟುಗಳನ್ನು ಗೆದ್ದಿದೆ.

ಮಾಡಾ ನಿಯಮಗಳ ಪ್ರಕಾರ ಈ ಕುಟುಂಬ ತನ್ನ ಅದೃಷ್ಟಕ್ಕೆ ಬಂದಿರುವ ಎಲ್ಲ ಮೂರು ಫ್ಲ್ಯಾಟುಗಳನ್ನು ಉಳಿಸಿಕೊಳ್ಳಬಹುದಾಗಿದೆ ! 

ಆ್ಯಂಟಾಪ್‌ ಹಿಲ್‌, ಮುಲುಂಡ್‌, ಸಯಾನ್‌, ಗೋರೇಗಾಂವ್‌, ಬೊರಿವಲಿ, ಕಾಂದಿವಿಲಿ, ದಹೀಸರ್‌, ಪೊವಾಯ್‌, ಚೆಂಬೂರ್‌, ಕುಂಬಲ್ಲಾ ಹಿಲ್ಸ್‌, ಚಾರ್‌ಕೋಪ್‌, ವಿಕ್ರೋಲಿ, ಲೋವರ್‌ ಪರೇಲ್‌ ಮತ್ತು ಮಾತುಂಗಾದಲ್ಲಿ ಮಾಡಾ ಈ ಫ್ಲ್ಯಾಟುಗಳನ್ನು ನಿರ್ಮಿಸಿದೆ. 

ಮಾಡಾ ಉದ್ಯೋಗಿ ಸಮರ್‌ ಪಖಾರೆ, ಮಹಾರಾಷ್ಟ್ರ ಸರಕಾರಿ  ಉದ್ಯೋಗಿ ತೃಪ್ತಿ ಖಾರಾಟ್‌ ಮತ್ತು ಪ್ರಜಕ್ತಾ K. ಇವರು ಕೂಡ ಲಾಟರಿಯಲ್ಲಿ ಫ್ಲ್ಯಾಟುಗಳನ್ನು ಗೆದ್ದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next