Advertisement
ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಪ್ರವೀಣ್ ಸೂದ್ ಅವರು, ಎಂ.ಜಿ. ರಸ್ತೆಯಲ್ಲಿ ಯುವತಿಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ತನಿಖೆಗೆ ವಹಿಸಲಾಗಿದೆ ಎಂದರು.
Related Articles
Advertisement
ಪೋಟೋದಿಂದ ವಿವಾದ: ಶನಿವಾರ ರಾತ್ರಿ ಸಂಭ್ರಮಾಚರಣೆ ವೇಳೆ ಪುಂಡಾಟಿಕೆ ನಡೆಸಿದ ಗುಂಪು ಚದುರಿಸಲು ಪೊಲೀಸರ ಲಘು ಲಾಠಿ ಪ್ರಹಾರ ನಡೆಸಿದ್ದರು. ಆ ವೇಳೆ ಜನರ ಗುಂಪಿನಿಂದ ಲಾಠಿ ಪ್ರಹಾರಕ್ಕೆ ಹೆದರಿ ಯುವತಿ, ಪೊಲೀಸರ ಕಡೆಗೆ ರಕ್ಷಣೆಗೆ ಓಡಿ ಬಂದಿದ್ದಾಳೆ. ಆಗ ತೆಗೆದ ಫೋಟೋ ಈಗ ಲೈಂಗಿಕ ಕಿರುಕುಳ ಆರೋಪಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಾಠಿ ಪ್ರಹಾರದಿಂದ ಆ ಯುವತಿ ಜತೆಯಲ್ಲಿದ್ದ ಸ್ನೇಹಿತರು ನಾಪತ್ತೆಯಾಗಿದ್ದರು. ಇದರಿಂದ ಆಕೆ ಆತಂಕಗೊಂಡು ಪೊಲೀಸರಲ್ಲಿ ಸಹಾಯ ಕೋರಿದ್ದಳು. ಕೆಲ ಹೊತ್ತಿನ ನಂತರ ಆಕೆಯ ಸ್ನೇಹಿತರು ಬಂದು, ಅವಳನ್ನು ಸಂತೈಸಿ ಕರೆದೊಯ್ದಿದ್ದಾರೆ. ಈ ಬಗ್ಗೆ ಸಿಸಿಟೀವಿ ಕ್ಯಾಮೆರಾ ದೃಶ್ಯಾವಳಿಗಳು ಪತ್ತೆಯಾಗಿವೆ ಎಂದು ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಯುವತಿ ಪೊಲೀಸರನ್ನು ತಬ್ಬಿಕೊಂಡಿರುವ ಫೋಟೋಗಳು ಹಾಗೂ ಗುಂಪಿನಿಂದ ಆಕೆ ಓಡಿ ಬರುತ್ತಿರುವ ಕೆಲ ಸೆಕೆಂಡಿನ ದೃಶ್ಯಾವಳಿಗಳನ್ನೇ ಆಧಾರವಾಗಿಟ್ಟುಕೊಂಡು ಲೈಂಗಿಕ ಕಿರುಕುಳ ಆರೋಪ ಮಾಡಲಾಗುತ್ತಿದೆ. ಈ ಆರೋಪ ಸಾಕ್ಷೀಕರಿಸುವ ಕುರುಹುಗಳು ಪತ್ತೆಯಾದರೆ ಮಾತ್ರವಷ್ಟೆ ಎಫ್ಐಆರ್ ದಾಖಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಗರದ ಎಲ್ಲಾ ಸಿಸಿಟೀವಿ ಪರಿಶೀಲನೆಗೆ ಸೂಚನೆಬೆಂಗಳೂರು: ಎಂ.ಜಿ. ರಸ್ತೆಯಲ್ಲಿ ವರ್ಷಾಚರಣೆ ವೇಳೆ ನಡೆದ ಗಲಾಟೆ ಹಾಗೂ ಕಮ್ಮನಹಳ್ಳಿಯಲ್ಲಿ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜಧಾನಿ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆ ದಿನದ ಬಗ್ಗೆ ಎಲ್ಲಾ ಸಿಸಿಟೀವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆಯುಕ್ತ ಪ್ರವೀಣ್ ಸೂದ್ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು, ಖಾಸಗಿ ಹಾಗೂ ಸರ್ಕಾರಿ ಕಟ್ಟಡಗಳು, ಹೋಟೆಲ್ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಅಳವಡಿಸಿರುವ ಸಿಸಿಟೀವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸರು ತಪಾಸಣೆಗೊಳಪಡಿಸಿದ್ದು, ಡಿ. 31ರಂದು ರಾತ್ರಿ ನೂತನ ವರ್ಷದ ಸ್ವಾಗತ ಸಂಭ್ರಮದ ವೇಳೆ ನೆಡೆದಿರುವ ಘಟನಾವಳಿಗಳ ಕುರಿತು ಮಾಹಿತಿ ಸಂಗ್ರಹಿಸಿ ಆಯುಕ್ತರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಎಂ.ಜಿ. ರಸ್ತೆಯಲ್ಲಿ ಹೊಸ ಸಂವತ್ಸರದ ಸಂಭ್ರಮಾಚರಣೆ ಸಂದರ್ಭದಲ್ಲಿ ಯುವತಿಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಘಟನೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೊಳಗಾಗಿರುವ ವೇಳೆಯಲ್ಲಿ ಅದೇ ದಿನ ಕಮ್ಮನಹಳ್ಳಿಯಲ್ಲಿ ಯುವತಿ ಮೇಲಿನ ಲೌಂಗಿಕ ದೌರ್ಜನ್ಯ ಎಸೆಗಿದ ಸಿಸಿಟೀವಿ ದೃಶ್ಯಾವಳಿ ಬಹಿರಂಗವಾಗಿದೆ. ಈ 2 ಪ್ರಕರಣಗಳಿಂದ ರಾಜ್ಯ ಸರ್ಕಾರವು ತೀವ್ರ ಮುಜುಗಕ್ಕೀಡಾಗಿದ್ದು, ಪೊಲೀಸರ ವಿರುದ್ಧ ಜನಾಕ್ರೋಶಕ್ಕೂ ಕಾರಣವಾಗಿದೆ. ಇದರಿಂದಾಗಿ ಎಚ್ಚೆತ್ತ ಆಯುಕ್ತರು, ಡಿ.31 ರಂದು ಶನಿವಾರ ರಾತ್ರಿ ನಗರದ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆ ಸಂಭ್ರದ ಕುರಿತು ಸಿಸಿಟೀವಿ ದೃಶ್ಯಾವಳಿ ಪರಿಶೀಲಿಸುವಂತೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. ಪರಂ ವಿರುದ್ಧ ದಿಲ್ಲಿ ಮಹಿಳಾ ಆಯೋಗ ದೂರು
ನವದೆಹಲಿ: ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ವಿವಾದಿತ ಹೇಳಿಕೆ ನೀಡಿದ್ದ ಕರ್ನಾಟಕದ ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ವಿರುದ್ಧ ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಬೆಂಗಳೂರು ಘಟನೆ ಬಗ್ಗೆ ಉಭಯ ರಾಜಕೀಯ ನಾಯಕರು ನೀಡಿರುವ ಹೇಳಿಕೆ ಸಂಪೂರ್ಣವಾಗಿ ಸ್ತ್ರೀಯರನ್ನು ದ್ವೇಷಿಸುವಂತಿದೆ ಮತ್ತು ಮಹಿಳೆಯರ ಮಾನದ ಮೇಲೆ ಹಾನಿ ಎಸಗುವಂತದ್ದಾಗಿದೆ. ಈ ಹೇಳಿಕೆ ಮೂಲಕ ಅವರು ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಹಿಂಸೆಯನ್ನು ಉತ್ತೇಜಿಸಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸಬೇಕು ಎಂದು ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರಿಗೆ ಬರೆದ ಪತ್ರದಲ್ಲಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಒತ್ತಾಯಿಸಿದ್ದಾರೆ. ಜೊತೆಗೆ ಈ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆಯೂ ಪೊಲಿಸರಿಗೆ ಮಲಿವಾಲ್ ಸೂಚಿಸಿದ್ದಾರೆ. ಶೀಘ್ರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಉಗ್ರಪ್ಪ
ಬೆಂಗಳೂರು: ನೂತನ ವರ್ಷಾಚರಣೆ ಸಂದರ್ಭದಲ್ಲಿ ಮಹಾತ್ಮಗಾಂಧಿ ರಸ್ತೆ ಹಾಗೂ ಕಮ್ಮನಹಳ್ಳಿಯಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಒತ್ತಾಯಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಿತಿ ವತಿಯಿಂದ ಎರಡೂ ಪ್ರಕರಣಗಳ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಇಂತಹ ಘಟನೆಗಳು ಅಕ್ಷಮ್ಯ ಅಪರಾಧ. ಮಾನವೀಯ ಸಮಾಜ ತಲೆತಗ್ಗಿಸುವಂತದ್ದು, ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ತಕ್ಷಣ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಸಮಿತಿ ಸಹ ಇದರ ಬಗ್ಗೆ ಗಂಭೀರವಾಗಿ ಗಮನಹರಿಸಲಿದೆ ಎಂದು ತಿಳಿಸಿದರು. ಕಮ್ಮನಹಳ್ಳಿ ಪ್ರಕರಣದಲ್ಲಿ ಯುವತಿ- ಯುವಕರ ಜತೆ ಸಂಘರ್ಷಕ್ಕಿಳಿದು ಸ್ವಯಂ ರಕ್ಷಣೆ ಮಾಡಿಕೊಂಡಿದ್ದಾಳೆ. ಆಕೆಯ ಧೈರ್ಯ ಮೆಚ್ಚುವಂತದ್ದು. ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯವ್ಯಾಪಿಯಾಗಿವೆ. ಇದರ ಬಗ್ಗೆ ಗೃಹ ಹಾಗೂ ಪೊಲೀಸ್ ಇಲಾಖೆಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.