ಓಡಾಟಕ್ಕೆ ಬಸ್, ಕಾರು, ಐಶಾರಾಮಿ ವಾಹನ, ರೈಲು, ವಿಮಾನಗಳಿದ್ದರೂ ಯಾವುದೇ ನಗರಕ್ಕೆ ಹೋದರೂ ಆಟೋ ರಿಕ್ಷಾಗಳ ಭರಾಟೆ ಜೋರಾಗಿಯೇ ಇರುತ್ತದೆ. ಮನೆ ಬಾಗಿಲಿಗೆ ಹೋಗಬೇಕಿದ್ದರೆ, ಮಧ್ಯರಾತ್ರಿ ನಿಲ್ದಾಣಕ್ಕೆ ಬಂದರೆ..ತುಂಬಾ ಲಗೇಜುಗಳಿದ್ದರೆ ಹೀಗೆ ಹಲವಾರು ಕಾರಣಗಳಿಗೆ ಆಟೋ ಅನಿವಾರ್ಯ ಎಂಬಂತಾಗಿದೆ.
ಆಟೋ ಓಡಿಸುವವರ ಒಬ್ಬೊಬ್ಬರ ಬದುಕಿನ ಕಥೆಯೂ ಒಂದೊಂದು ತೆರನಾಗಿರುತ್ತದೆ.
ಆ ಸಾಲಿಗೆ ಬೆಂಗಳೂರಿನ ಹಲಸೂರು ನಿವಾಸಿ ಅಬ್ದುಲ್ ಖಾದರ್ ಕೂಡಾ ಒಬ್ಬರು. ಇವರು ಎರಡು ದಶಕಗಳಿಂದ ಆಟೋ ಓಡಿಸುತ್ತಿದ್ದಾರೆ. ಹಲಸೂರು, ಮಣಿಪಾಲ್ ಸೆಂಟರ್, ಶಿವಾಜಿನಗರ ಸುತ್ತಮುತ್ತ ನೀವೂ ಇವರನ್ನು ಗಮನಿಸಿದ್ದಿರಬಹುದು.
ಒಂದು ವೇಳೆ ನೀವು ಅಬ್ದುಲ್ ಖಾದರ್ ಅವರ ಆಟೋ ಹತ್ತಿದರೆ ನಿಮಗೆ ಕುತೂಹಲ ಕೆರಳಿಸದೆ ಇರಲು ಸಾಧ್ಯವಿಲ್ಲ. ಯಾಕೆಂದರೆ ಇವರ ಆಟೋ ಎಲ್ಲರಿಗಿಂತ ಭಿನ್ನ. ಹೌದು,
ಅಬ್ದುಲ್ ಅವರ ಆಟೋದಲ್ಲಿ ಮಕ್ಕಳಿಗೆ ಮನರಂಜನೆ ನೀಡಲು ಪುಟ್ಟ ಟಿವಿ ಅಳವಡಿಸಿದ್ದಾರೆ. ಅದರಲ್ಲಿ ಮಕ್ಕಳಿಗೆ ಬೇಕಾದ ಕಾರ್ಟೂನ್, ಸಿನಿಮಾಗಳನ್ನು ಹಾಕುತ್ತಾರೆ. ಅದಕ್ಕಾಗಿ ಅವರ ಬಳಿ ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಯ ನೂರಾರು ಸೀಡಿಗಳಿವೆ!
ರಿಕ್ಷಾದ ಮುಂಭಾಗದಲ್ಲಿ ಕಾಸಿದ್ರೆ ಕೈಲಾಸ ಎಂದು ಬರೆಯಿಸಿದ್ದಾರೆ.
ಅಷ್ಟೇ ಅಲ್ಲ ಗರ್ಭಿಣಿಯರು ಆಟೋ ಹತ್ತಿದರೆ ಅವರಿಗೆ ಹಂಪ್ ಬಂದಾಗ ಅಥವಾ ಮೆಲ್ಲ ಆಟೋ ಓಡಿಸಬೇಕು ಎಂದಾದರೆ ಬೆಲ್ ವೊಂದನ್ನು ಅಳವಡಿಸಿದ್ದಾರೆ. ಅದನ್ನು ಬಾರಿಸಿದರೆ, ಅಬ್ದುಲ್ ಖಾದರ್ ನಿಧಾನಕ್ಕೆ ರಿಕ್ಷಾ ಓಡಿಸುತ್ತಾರಂತೆ.
ರಿಕ್ಷಾದ ಒಳಗೆ, ಹಿಂಭಾಗದಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಬರಹಗಳು ಕೂಡಾ ಅಬ್ದುಲ್ ಅವರ ರಿಕ್ಷಾದಲ್ಲಿ ಜಾಗಪಡೆದುಕೊಂಡಿದೆ. ಗ್ರಾಹಕರಿಗೆ ತಕ್ಕಂತೆ ಉತ್ತಮ ಸೇವೆ ನೀಡುವುದೇ ತನ್ನ ಕೆಲಸ ಎಂಬುದು ಅಬ್ದುಲ್ ಅವರ ಮನದಾಳದ ಮಾತು.
ದುಬೈನಲ್ಲಿ ಕೆಲಸ ಮಾಡಿದ್ದ ಅಬ್ದುಲ್ ಸ್ನೇಹಿತರೊಬ್ಬರಿಗೆ ನೀಡಿದ್ದ ಲಕ್ಷಾಂತರ ರೂಪಾಯಿ ಸಾಲ ವಾಪಸ್ ಕೊಡದೇ ಹೋದಾಗ ಮತ್ತೆ ಬೆಂಗಳೂರಿಗೆ ಬಂದು ಆಟೋ ಓಡಿಸುತ್ತಿದ್ದಾರಂತೆ. ನಮ್ಮ ಬದುಕಿನ ಬಂಡಿ..ಆಟೋ ರಿಕ್ಷಾದ ಜೊತೆ ಓಡುತ್ತಲೇ ಇದೆ..ಆದರೆ ನಮ್ಮ ಜೀವನ ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ ಎಂಬುದು ಅಬ್ದುಲ್ ಖಾದರ್ ಮನದ ಮಾತು.