ಬೆಂಗಳೂರು: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ಬದಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ರಸ್ತೆಗಳಾದ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳ ಸುತ್ತಮುತ್ತ ಜುಲೈ 1ರಿಂದ ಮದ್ಯ ಮಾರಾಟ ಸ್ಥಗಿತಗೊಳ್ಳಲಿದೆ. ಹೀಗಾಗಿ ನೂರಾರು ಅಂಗಡಿಗಳು ಬಾಗಿಲು ಮುಚ್ಚುತ್ತಿದ್ದರೆ ಸಾವಿರಾರು ಸಿಬ್ಬಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಮದ್ಯ ಮಾರಾಟ ನಿಷೇಧಿಸಿರುವುದರಿಂದ ಈ ಭಾಗದ ಸುಮಾರು 138ಕ್ಕೂ ಹೆಚ್ಚು ಬಾರ್, ಪಬ್‌ಗಳು ಸ್ಥಗಿತಗೊಳ್ಳಲಿವೆ. ಇಲ್ಲಿನ ಬಾರ್, ಪಬ್‌ಗಳಿಗೆ ಮದ್ಯಕ್ಕಾಗಿಯೇ ಹೆಚ್ಚಿನ ಸಂಖ್ಯೆಯ ಜನ ಬರುವುದರಿಂದ ಮದ್ಯ ಮಾರಾಟ ಸ್ಥಗಿತಗೊಳಿಸಿದರೆ ವ್ಯಾಪಾರವೂ ಕುಸಿಯಲಿದೆ.
“ದಿ ಪಬ್ ವರ್ಲ್ಡ್’ನ ಸಿಬ್ಬಂದಿ ಗೋಪಾಲ್ ಈ ಕುರಿತು “ಉದಯವಾಣಿ’ ಜತೆ ಮಾತನಾಡಿ, “ಕಳೆದ 28 ವರ್ಷಗಳಿಂದ ಇದೇ ಪಬ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ಕೆಲಸವಿಲ್ಲವಾದರೆ ಮನೆ ಬಾಡಿಗೆ, ಮಗನ ವೈದ್ಯಕೀಯ ಶಿಕ್ಷಣದ ಶುಲ್ಕ ಭರಿಸುವುದು ಹೇಗೆ ಎಂಬ ಭಯ ಶುರುವಾಗಿದೆ. ಮದ್ಯ ಮಾರಾಟ ಸ್ಥಗಿತಗೊಳಿಸಿರುವುದರಿಂದ ವ್ಯಾಪಾರ ಸಂಪೂರ್ಣವಾಗಿ ಕುಸಿಯಲಿದ್ದು, ಮಾಲೀಕರಲ್ಲಿಯೂ ಸಹಾಯ ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ,’ ಎಂದು ಹೇಳಿದರು.
“ಎಂ.ಜೆ.ಪಬ್’ನ ವ್ಯವಸ್ಥಾಪಕ ಅಪ್ಪಚ್ಚು ಮಾತನಾಡಿ, “ಕೇವಲ ಊಟಕ್ಕಾಗಿ ಪಬ್‌ಗ ಯಾರೂ ಬರುವುದಿಲ್ಲ. ಮದ್ಯ ಇದ್ದರೆ ಮಾತ್ರ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಆದರೆ, ಶನಿವಾರದಿಂದ ಕಡ್ಡಾಯವಾಗಿ ಮದ್ಯ ಮಾರಾಟ ಸ್ಥಗಿತಗೊಳಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.
ಅದರ ಹಿನ್ನೆಲೆಯಲ್ಲಿ ಮದ್ಯ ಪರವಾನಗಿ ನವೀಕರಿಸಿಲ್ಲ. ಒಂದೊಮ್ಮೆ ಅಬಕಾರಿ ಇಲಾಖೆ ಸೂಚನೆ ಮೀರಿ ಮದ್ಯ ಮಾರಾಟ ಮುಂದುವರಿಸಿದರೆ ಪರವಾನಗಿ ರದ್ದಾಗುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಪಬ್ ಸ್ಥಗಿತಗೊಳಿಸಲಾಗುವುದು,’ ಎಂದು ತಿಳಿಸಿದರು.