Advertisement

ಮೆಕ್ಸಿಕೋ ಕಂಪನ

09:33 AM Sep 21, 2017 | Team Udayavani |

ಮೆಕ್ಸಿಕೋ: ಭಾರಿ ತೀವ್ರತೆಯ ಭೂಕಂಪಕ್ಕೆ ಮೆಕ್ಸಿಕೊ ಅಕ್ಷರಶಃ ತತ್ತರಿಸಿದೆ. ಬುಧವಾರ ಇದ್ದಕ್ಕಿದ್ದಂತೆ ಒಂದು  ನಿಮಿಷದಷ್ಟು ಸಮಯ 7.1 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ನೋಡ ನೋಡುತ್ತಿದ್ದಂತೆ ಮೆಕ್ಸಿಕೋ ಚಿತ್ರಣವೇ ಬದಲಾಗಿಹೋಗಿದೆ. ನೂರಾರು ಕಟ್ಟಡಗಳು ಧರೆಗುರುಳಿದ್ದು, ಪರಿಣಾಮ 21 ಶಾಲಾ ಮಕ್ಕಳು ಸೇರಿ 250ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಮನೆ, ಶಾಲೆ ಹಾಗೂ ವಾಣಿಜ್ಯ ಸೇರಿ ಅನೇಕ ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿವೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಗಳು ಹಾನಿಗೀಡಾಗಿವೆ.

Advertisement

ಸ್ಥಳೀಯ ಕಾಲಮಾನ ಅಪರಾಹ್ನ 1.15ರ ಸುಮಾರಿಗೆ ಭೂಮಿ ಕಂಪಿಸಿದ್ದು, 1985ರ ಬಳಿಕ ಭಾರಿ ಹಾನಿ ಮಾಡಿದ ಭೂಕಂಪ ಇದಾಗಿದೆ.  ಎಂದು ಮೆಕ್ಸಿಕೋದ ಭೂವಿಜ್ಞಾನ ಮತ್ತು ಅಧ್ಯಯನ ಸಂಸ್ಥೆ ತಿಳಿಸಿದೆ. 1985ರಲ್ಲಿ ಸಂಭವಿಸಿದ್ದ ಭೂಕಂಪವನ್ನು ನೆನಪು ಮಾಡಿಕೊಂಡ ದಿನವೇ ಮತ್ತೂಂದು ಭಾರಿ ದುರಂತ ನಡೆದು ಹೋಗಿದೆ.

ರಕ್ಷಣಾ ಕಾರ್ಯ ಚುರುಕು: ಭೂಕಂಪದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಕೆಲಸ ಚುರುಕಾಗಿ ಸಾಗಿದೆ. ಪೊಲೀಸರು, ಅಗ್ನಿಶಾಮಕ ಪಡೆ, ವಿಪತ್ತು ನಿರ್ವಹಣ ಪಡೆ ಹಾಗೂ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಕುಸಿದುಬಿದ್ದಿರುವ ಕಟ್ಟಡಗಳ ಕೆಳಗೆ ಇನ್ನಷ್ಟು ಮಂದಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಹೊರಕ್ಕೆ ಎತ್ತುವ ಕಾರ್ಯ ನಡೆಯುತ್ತಿದೆ. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವಶೇಷಗಳ ಎಡೆಯಲ್ಲಿ ಇನ್ನೂ ಹಲವಾರು ಮಂದಿ ಸಿಕ್ಕಿಹಾಕಿಕೊಂಡಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಕುಸಿದು ಬಿದ್ದ ಶಾಲಾ ಕಟ್ಟಡ: ಕಂಪನದ ತೀವ್ರತೆಗೆ ಮೆಕ್ಸಿಕೋ ದಕ್ಷಿಣದಲ್ಲಿರುವ ಎನ್ರಿಕ್‌ ರೆಬ್ಸಮೆನ್‌ ಪ್ರಾಥಮಿಕ ಶಾಲಾ ಕಟ್ಟಡ ಕುಸಿದುಬಿದ್ದ ಪರಿಣಾಮ ಮುದ್ದು ಮಕ್ಕಳು ಹಾಗೂ ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆ.

ಈಗಾಗಲೇ ನಾಲ್ವರು ವಯಸ್ಕರು ಹಾಗೂ 21 ಮಕ್ಕಳ ಮೃತದೇಹವನ್ನು ಹೊರ ತೆಗೆಯಲಾಗಿದೆ. ಇನ್ನೂ 28 ಮಕ್ಕಳು ಸಹಿತ 40 ಮಂದಿ ಅವಶೇಷದ ಅಡಿಯಲ್ಲಿ ಸಿಲುಕಿಕೊಂಡಿದ್ದು, ಶೋಧಕಾರ್ಯ ನಡೆಯುತ್ತಿದೆ. ಗಾಯಾಳು 11 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳ ಕೆಳಕ್ಕೆ ಉಸಿರಾಟಕ್ಕೆ ತೊಂದರೆ ಆಗದಂತೆ ಆಮ್ಲಜನಕವನ್ನು ಟ್ಯೂಬ್‌ಗಳ ಮೂಲಕ ಕೆಳಕ್ಕೆ ಬಿಡಲಾಗಿದೆ. ಘಟನಾ ಸ್ಥಳಕ್ಕೆ ಮೆಕ್ಸಿಕೊ ಅಧ್ಯಕ್ಷ ಎನ್ರಿಕ್‌ ಪೆನ ನಿಯೆಟೋ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಎಲ್ಲೆಲ್ಲಿ ಸಾವು-ನೋವು?
ಪುಯೆಬ್ಲಾ, ಮೊರೆಲಾಸ್‌, ಮೆಕ್ಸಿಕೋ ನಗರ ಹಾಗೂ ಗುಎರ್ರೆರೋ ಭಾಗಗಳಲ್ಲಿ ಕಟ್ಟಡಗಳು ಕುಸಿದಿವೆ. ಇದರಿಂದ ಈ ಪ್ರದೇಶಗಳಲ್ಲಿಯೇ ಹೆಚ್ಚೆಚ್ಚು ಸಾವು ಸಂಭವಿಸಿದೆ ಎಂದು ಗೃಹ ಸಚಿವ ಮಿಗುಯೆಲ್‌ ಒಸೋರಿಯೊ ಚಾಂಗ್‌ ತಿಳಿಸಿದ್ದಾರೆ.

ವಿಮಾನ ಹಾರಾಟ ಸ್ಥಗಿತ
ಭೂಕಂಪದ ಮುನ್ಸೂಚನೆ ಸಿಗುತ್ತಿದ್ದಂತೆ ಮೆಕ್ಸಿಕೋ ವಿಮಾನ ನಿಲ್ದಾಣ ಸ್ತಬ್ಧಗೊಂಡಿತ್ತು. ಎಲ್ಲ ವಿಮಾನ ಗಳ ಹಾರಾಟವನ್ನೂ ಮೂರ್‍ನಾಲು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಅಲ್ಲದೇ, ಮೆಕ್ಸಿಕೋ ತಲುಪಬೇಕಿದ್ದ ವಿಮಾನಗಳ ಮಾರ್ಗವನ್ನೂ ಬದಲಿಸುವಂತೆ ಸೂಚನೆ ನೀಡಲಾಗಿತ್ತು.

ಎಲ್ಲೆಲ್ಲೂ  ಹುಡುಕಾಟ, ಪರದಾಟ
ಕಟ್ಟಡಗಳು ಕುಸಿದಿದ್ದರಿಂದ ಮೆಕ್ಸಿಕೋ ನಗರದಲ್ಲಿ ತಮ್ಮವರಿಗಾಗಿ ಜನ ಹುಡಕಾಟ ನಡೆಸುತ್ತಿದ್ದರೆ, ಗಾಯಾಳುಗಳ ಸಂಬಂಧಿಕರು ಚಿಕಿತ್ಸೆಗಾಗಿ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೇಕರು ನಾಪತ್ತೆಯಾದ ಮಕ್ಕಳು, ಅಪ್ಪ-ಅಮ್ಮ, ಸಂಬಂಧಿಕರ ಹುಡುಕಾಟದಲ್ಲಿರುವುದು ಕತ್ತಲಾದರೂ ಕಂಡು ಬರುತ್ತಲೇ ಇತ್ತು. ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ತಮ್ಮವರ ವಿವರ ನೀಡಿ, ರಕ್ಷಣೆ ಕೋರಿ ಸಂದೇಶಗಳು ಹರಿದಾಡುತ್ತಿವೆ. ಕಟ್ಟಡದಡಿ ಸಿಲುಕಿರುವರ ಬಗ್ಗೆ ಮಾಹಿತಿ ನೀಡಿ ರಕ್ಷಿಸುವಂತೆ ಕೋರಿಕೊಳ್ಳುತ್ತಿದ್ದಾರೆ.

1985ರ ಭೂಕಂಪ; ಕರಾಳ ಘಟನೆ
ಮೆಕ್ಸಿಕೋ ಇಂಥ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದ್ದು ಇದೇ ಮೊದಲಲ್ಲ. 1985ರಲ್ಲಿ ಇಂಥದ್ದೇ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿತ್ತು. ಅಂದು ಬರೋಬ್ಬರಿ 10,000 ಮಂದಿ ಸಾವಿಗೀಡಾಗಿದ್ದರು. ಸೆಪ್ಟೆಂಬರ್‌ 7ರಂದು ಮೆಕ್ಸಿಕೋದ ಓಕ್ಸಕಾ ಮತ್ತು ಚಿಯಾಪಾಸ್‌ ಸುತ್ತ 8.1 ತೀವ್ರತೆಯ ಭೂಕಂಪ ಸಂಭವಿಸಿತ್ತು. 12 ದಿನ ಕಳೆಯುವಷ್ಟರಲ್ಲೇ ಮತ್ತೆ ಭೂಮಿ ಕಂಪಿಸಿ ಸಾವು-ನೋವು ಸಂಭವಿಸಿದೆ. ಅಂದು 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಭಾರತ ಸಹಾಯಕ್ಕೆ ಸಿದ್ಧವಿದೆ. ಮೆಕ್ಸಿಕೋ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. 
 ನರೇಂದ್ರ ಮೋದಿ, ಪ್ರಧಾನಿ

ಮೆಕ್ಸಿಕೋ ಜನತೆಯನ್ನು ದೇವರು ಕಾಪಾಡಲಿ. ನಿಮ್ಮೊಂದಿಗೆ ನಾವಿದ್ದೇವೆ. ಆತಂಕಪಡಬೇಕಿಲ್ಲ. ನಿಮಗೆ ಬೇಕಾದುದನ್ನು ನಾವು ಪೂರೈಸುತ್ತೇವೆ.
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next