ಮೆಕ್ಸಿಕೋ ನಗರ(Mexico City): ಗ್ವಾಟೆಮಾಲಾದ ಗಡಿ ಸಮೀಪ ಟ್ರಕ್ ನಲ್ಲಿ ಪರಾರಿಯಾಗಲು ಯತ್ನಿಸಿದ್ದ ಆರು ಮಂದಿ ವಲಸಿಗರ ಮೇಲೆ ಮೆಕ್ಸಿಕೋ ಸೈನಿಕರು (Mexican Soldiers) ನಡೆಸಿದ ಗುಂಡಿನ ದಾಳಿಗೆ ಸಾವನ್ನಪ್ಪಿರುವ ಘಟನೆ ಬುಧವಾರ (ಅ.02) ನಡೆದಿರುವುದಾಗಿ ಮೆಕ್ಸಿಕೋ ರಕ್ಷಣಾ ಇಲಾಖೆ ತಿಳಿಸಿದೆ.
ಈಜಿಪ್ಟ್, ನೇಪಾಳ, ಕ್ಯೂಬಾ, ಭಾರತ, ಪಾಕಿಸ್ತಾನದ ವಲಸಿಗರು ಟ್ರಕ್ ನಲ್ಲಿ ಪರಾರಿಯಾಗಲು ಯತ್ನಿಸಿದ ವೇಳೆ ಈ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.
ಮೆಕ್ಸಿಕೋ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಟ್ರಕ್ ನಲ್ಲಿದ್ದ ಆರು ಮಂದಿ ವಲಸಿಗರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಸ್ಥಿತಿ ಹೇಗಿದೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ ಎಂದು ವರದಿ ತಿಳಿಸಿದೆ.
ಟ್ರಕ್ ನಲ್ಲಿ ಯಾವುದಾದರು ಶಸ್ತ್ರಾಸ್ತ್ರಗಳಿವೆ, ಅವರು ಯಾವ ಉದ್ದೇಶಕ್ಕಾಗಿ ಪರಾರಿಯಾಗಲು ಯತ್ನಿಸಿದ್ದರು ಎಂಬ ಬಗ್ಗೆ ಮೆಕ್ಸಿಕೋ ರಕ್ಷಣಾ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ವರದಿಯಾಗಿದೆ.
ಟ್ರಕ್ ನಲ್ಲಿ ಒಟ್ಟು 33 ಮಂದಿ ವಲಸಿಗರು ತೆರಳುತ್ತಿದ್ದರು. ಈ ಮಾರ್ಗ ವಲಸಿಗರನ್ನು ಕಳ್ಳಸಾಗಣೆ ಮಾಡುವ ಮಾರ್ಗವಾಗಿದೆ. ವಲಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಸೇನಾ ಯೋಧರನ್ನು ಅಮಾನತು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.