ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ದಿನೇ ದಿನೆ ಅಪರಾಧ ಪ್ರಕರಣಹಳ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಮಹಾನಗರ ಪಾಲಿಕೆ ಹಾಗೂ ತಾಲೂಕು ಮಟ್ಟದಲ್ಲಿ ಹಂತ ಹಂತ ವಾಗಿ ಸೈಬರ್ ಕ್ರೈಂ ಠಾಣೆಗಳನ್ನು ತೆರೆಯುವುದಾಗಿ ಗೃಹ ಸಚಿವ ಡಾ ಜಿ.ಪರಮೇಶ್ವರ ಹೇಳಿದರು.
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಶನಿವಾರ ನಗರ ಸೈಬರ್ ಕ್ರೈಂ ಠಾಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವರು ಫೇಸ್‌ಬುಕ್, ಟ್ವಿಟರ್ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಅವಹೇಳನಕಾರಿ ಹಾಗೂ ಪ್ರಚೋದನಾಕಾರಿ ಹೇಳಿಕೆಗಳನ್ನು ಪ್ರಕಟಿಸಿ ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ. ಮಹಿಳೆಯರ ಅಶ್ಲೀಲ ಫೋಟೋಗಳನ್ನು ಅಪ್‌ಲೋಡ್ ಮಾಡಿ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಲೇಬೇಕಿದೆ ಎಂದು ತಿಳಿಸಿದರು.
ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿಕೊಂಡು ಲಕ್ಷಾಂತರ ರೂ. ದರೋಡೆ ಮಾಡುತ್ತಿದ್ದಾರೆ. ಶಾಸಕ ಸಿ.ಪಿ.ಯೋಗೇಶ್ವರ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 1.90 ಲಕ್ಷ ದೋಚಿರುವ ಪ್ರಕರಣವೂ ನಡೆದಿದ್ದು ಇಂತಹ ಪ್ರಕರಣ ನಿತ್ಯ ನೂರಾರು ದಾಖಲಾ ಗುತ್ತಿವೆ ಎಂದರು.
ಪೊಲೀಸ್ ವ್ಯವಸ್ಥೆಯನ್ನು ಜನರಿಗೆ ಮತ್ತಷ್ಟು ತಲುಪಿಸುವ ನಿಟ್ಟಿನಲ್ಲಿ ಪೊಲೀಸ್ ಕಂಟ್ರೋಲ್ ರೂಂ(ಡಯಲ್-100) ಅನ್ನು ಉನ್ನತ್ತೀಕರಿಸಲಾಗುವುದು. ಸದ್ಯ ನಗರದಲ್ಲಿ 15 ಸಿಗ್ನಲ್ ಲೈನ್‌ಗಳು ಸೇವೆ ಒದಗಿಸುತ್ತಿದ್ದು, ಇದನ್ನು ಇನ್ನಷ್ಟು ದ್ವಿಗುಣಗೊಳಿಸಲಾಗುವುದು. ಹಾಗೇ ನಗರದಲ್ಲಿ ಮತ್ತೆ 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಪದಕ: ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ಮೊದಲ ಮೂವರು ಪೊಲೀಸರ ಹೆಸರನ್ನು “ಮುಖ್ಯಮಂತ್ರಿ ಪದಕ’ಕ್ಕೆ ಪ್ರತಿವರ್ಷ ಶಿಫಾರಸು ಮಾಡುವಂತೆ ಆಯುಕ್ತರಿಗೆ ಸೂಚಿಸಲಾಗಿದೆ. ಈ ಮೂಲಕ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುವವರಿಗೆ ಪ್ರೇರಣೆ ನೀಡಲಾಗುತ್ತದೆ ಎಂದು ಹೇಳಿದರು.
ಸಂಚಾರ ದಟ್ಟಣೆ, ವಾಯುಮಾಲಿನ್ಯ, ರಸ್ತೆ ಅಪಘಾತ ಮತ್ತು ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿರುವ 15-20 ವರ್ಷ ಮೇಲ್ಪಟ್ಟ ಹಳೆಯ ವಾಹನ ಗಳಿಗೆ ನಿರ್ಬಂಧ ಹೇರಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾ ಗುವುದು. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸೂಚಿಸಿದ್ದೇನೆ. ನಿರ್ಬಂಧ ಕುರಿತ ಅಂತಿಮ ತೀರ್ಮಾನವನ್ನು ಸಾರಿಗೆ ಇಲಾಖೆ ತೆಗೆದುಕೊಳ್ಳಲಿದೆ.
– ಡಾ.ಜಿ.ಪರಮೇಶ್ವರ್, ಗೃಹ ಸಚಿವ