Advertisement

ಮೆಟ್ರೋ ಕಾಮಗಾರಿ: ಸಂಚಾರ ನಿರ್ಬಂಧ

07:42 AM Jun 18, 2019 | Lakshmi GovindaRaj |

ಬೆಂಗಳೂರು: ನಗರದ “ಹಾಟ್‌ ಸ್ಪಾಟ್‌’ ಎಂ.ಜಿ.ರಸ್ತೆ ಹಾಗೂ ಅದಕ್ಕೆ ಕೂಡುವ ರಸ್ತೆಗಳ ಆಯ್ದ ಮಾರ್ಗಗಳಲ್ಲಿ ಇನ್ನುಮುಂದೆ ಎಂದಿಗಿಂತ ಹೆಚ್ಚು ವಾಹನದಟ್ಟಣೆ ಸಮಸ್ಯೆ ಉಂಟಾಗಲಿದೆ. ಅದೂ ಒಂದಲ್ಲ, ಎರಡಲ್ಲ; ಮುಂದಿನ ಸುಮಾರು ಮೂರು ವರ್ಷ ಈ ಸಮಸ್ಯೆ ಎದುರಿಸಲು ಸಾರ್ವಜನಿಕರು ಮಾನಸಿಕವಾಗಿ ಸಜ್ಜಾಗಬೇಕಿದೆ.

Advertisement

ಬೆಂಗಳೂರು ಮೆಟ್ರೋ ರೈಲು ನಿಗಮವು “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಉದ್ದೇಶಿತ ಎಂ.ಜಿ. ರಸ್ತೆಯ ಹಲವು ಭಾಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ, ಪರ್ಯಾಯ ರಸ್ತೆಗಳಲ್ಲಿ ಎಂದಿಗಿಂತ ವಾಹನಗಳ ಸಂಚಾರ ಅಧಿಕವಾಗಲಿದೆ. ಅದರಲ್ಲೂ ಪೀಕ್‌ ಅವರ್‌ನಲ್ಲಿ ಇದರ ಬಿಸಿ ಜನರಿಗೆ ತುಸು ಜೋರಾಗಿಯೇ ತಟ್ಟಲಿದೆ.

ಏಕಾಏಕಿ ನಿರ್ಬಂಧ ವಿಧಿಸಿದ್ದರಿಂದ ಭಾನುವಾರದಿಂದಲೇ ವಾಹನ ಸವಾರರು ಗೊಂದಲಕ್ಕೀಡಾದರು. ಸೋಮವಾರ ಇದು ಹೆಚ್ಚು ಕಿರಿಕಿರಿ ಉಂಟುಮಾಡಿತು. ವಾರಾಂತ್ಯ ರಜೆ ಮುಗಿಸಿಕೊಂಡು ಎಂದಿನಂತೆ ಕೆಲಸಕ್ಕೆ ಹೊರಟವರಿಗೆ ಮೆಟ್ರೋ ಬ್ಯಾರಿಕೇಡ್‌ಗಳು ಬ್ರೇಕ್‌ ಹಾಕಿದವು. ಗಲಿಬಿಲಿಗೊಂಡ ವಾಹನ ಸವಾರರಿಗೆ ಸಂಚಾರ ಪೊಲೀಸರು ನೆರವಾದರು. ಪರ್ಯಾಯ ಮಾರ್ಗಗಳನ್ನು ಬಳಸಲು ಸಲಹೆ ನೀಡಿದರು.

ಎರಡನೇ ಹಂತದಲ್ಲಿ ಡೈರಿ ವೃತ್ತದಿಂದ ನಾಗವಾರದವರೆಗೆ ಸುರಂಗ ಮಾರ್ಗ ನಿರ್ಮಾಣ ಆಗಲಿದ್ದು, ಇದು ಎಂ.ಜಿ. ರಸ್ತೆ ಮೂಲಕ ಹಾದುಹೋಗಲಿದೆ. ಎಂ.ಜಿ.ರಸ್ತೆಯ ನೆಲದಡಿಯ ಮೆಟ್ರೊ ನಿಲ್ದಾಣ ಕಾಮಗಾರಿ ಕಾಮರಾಜ ರಸ್ತೆಯಲ್ಲೇ ನಡೆಯಲಿದೆ. ಹಾಗಾಗಿ ಕಾಮರಾಜ ರಸ್ತೆಯಲ್ಲಿ ಎಂ.ಜಿ.ರಸ್ತೆ ಹಾಗೂ ಕಬ್ಬನ್‌ ರಸ್ತೆ ನಡುವೆ ವಾಹನ ಸಂಚಾರವನ್ನು ಭಾನುವಾರದಿಂದ ನಿರ್ಬಂಧಿಸಲಾಗಿದೆ.

ಬಿಎಂಆರ್‌ಸಿಯು ಈ ಸುರಂಗ ಮಾರ್ಗ ಹಾಗೂ ನೆಲದಡಿಯ ನಿಲ್ದಾಣ ಕಾಮಗಾರಿಗಳನ್ನು 42 ತಿಂಗಳುಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು. ಸುರಂಗ ಮಾರ್ಗದ ಮೆಟ್ರೊ ನಿಲ್ದಾಣಗಳನ್ನು ರಸ್ತೆಯಲ್ಲೇ ನಿರ್ಮಿಸಬೇಕಾದ ಕಡೆ ವಾಹನ ಸಂಚಾರ ಸ್ಥಗಿತಗೊಳಿಸುವುದು ಅನಿವಾರ್ಯ.

Advertisement

ಕಾಮಗಾರಿ ಪೂರ್ಣಗೊಂಡ ಬಳಿಕ ನಿಗಮದಿಂದಲೇ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದರು. ಕಾಮರಾಜ ರಸ್ತೆಗೆ ಬದಲಿಯಾಗಿ ಬಳಸುವ ಎಂ.ಜಿ.ರಸ್ತೆ ಹಾಗೂ ಆಸುಪಾಸಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದನ್ನೂ ನಿಷೇಧಿಸಲಾಗಿದೆ. ಈ ಹಿಂದೆ 2006-07ರಲ್ಲಿ ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಎತ್ತರಿಸಿದ ಮಾರ್ಗ ನಿರ್ಮಾಣಕ್ಕಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next