ಅಂದು ಎಲ್ಲವೂ ರೆಡಿಯಾಗಿತ್ತು. ವೇದಿಕೆ ಕೂಡ ಕಲರ್‌ಫುಲ್ ಆಗಿತ್ತು. ಎಲ್ಲರೂ ಬಂದಿದ್ದರು. ಕಾರ್ಯಕ್ರಮ ಮಾತ್ರ ಶುರುವಾಗಲಿಲ್ಲ. ಬರಬೇಕಾದವರಿಗಾಗಿ ಎದುರು ನೋಡುತ್ತಿದ್ದರು. ಕೊನೆಗೂ ಆ ಕಾರ್ಯಕ್ರಮದ ಅತಿಥಿಯ ಆಗಮನವಾಯ್ತು. ಅಷ್ಟೊತ್ತಿಗೆ ಒಂದು ಗಂಟೆ ತಡವಾಗಿತ್ತು. ಅವರು ಬಂದ ಕೂಡಲೆ ಆ ಕಾರ್ಯಕ್ರಮಕ್ಕೂ ಚಾಲನೆ ಸಿಕ್ಕಿತ್ತು. ಇದೆಲ್ಲಾ ಕಂಡುಬಂದದ್ದು “ಸಿಲಿಕಾನ್ ಸಿಟಿ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ. ಅಂದು ಸುದೀಪ್ ಮತ್ತು ಅಂಬರೀಶ್‌ಗಾಗಿ ಚಿತ್ರತಂಡ ಕಾಯುತ್ತಿತ್ತು. ಮೊದಲು ಸುದೀಪ್ ಆಗಮಿಸಿದರು. ಅಂಬರೀಶ್ ಬರಲ್ಲ ಎಂಬ ಸೂಚನೆ ಸಿಕ್ಕ ಕೂಡಲೇ, ವೇದಿಕೆಗೆ ಸುದೀಪ್ ಅವರನ್ನು ಬರಮಾಡಿಕೊಂಡ ಚಿತ್ರತಂಡ ಅವರಿಂದ ಆಡಿಯೋ ಸಿಡಿ ಬಿಡುಗಡೆ ಮಾಡಿಸಿತು.
ಸಿಡಿ ಬಿಡುಗಡೆ ಮಾಡಿದ ಸುದೀಪ್, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು. “ಕಿಟ್ಟಿ ಹಳೆಯ ಗೆಳೆಯ. ನೋಡೋಕೆ ಒರಟನಂತೆ ಕಾಣಾ¤ರೆ. ದಾಡಿ ಬಿಟ್ಟು, ನಡೆಯೋ ಸ್ಟೈಲ್ ನೋಡಿ ನಂಗೂ ಹಾಗೇ ಅನಿಸಿತ್ತು. ಕಿಟ್ಟಿಯ ಸಿನಿಮಾ ನೋಡಿದ್ದೇನೆ. ಹಾರ್ಡ್‌ವರ್ಕರ್. ಈ ಸಿನಿಮಾ ಯಶಸ್ಸು ಕೊಡಲಿ’ ಅಂದರು ಸುದೀಪ್.
ನಿರ್ದೇಶಕ ಮುರಳಿ ಗುರಪ್ಪ ಅವರಿಗೆ ನಿರ್ದೇಶನ ಬಹಳ ವರ್ಷಗಳ ಕನಸಾಗಿತ್ತಂತೆ. “ಸಂಕಲನಕಾರನಾಗಿರುವ ನನಗೆ ಏನು ಬೇಕೋ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಚಿತ್ರೀಕರಿಸಿದ್ದೇನೆ. ಒಳ್ಳೇ ನಿರ್ಮಾಪಕ ಗೆಳೆಯ ಸಿಕ್ಕಿದ್ದಾರೆ. ಒಳ್ಳೆಯ ತಂಡ ಸಿಕ್ಕಿದೆ. ಸಿನಿಮಾ ನನ್ನ ಕಲ್ಪನೆಗೂ ಮೀರಿ ಮೂಡಿಬಂದಿದೆ. ನಿಮ್ಮಗಳ ಹಾರೈಕೆ ಇರಲಿ’ ಎಂದರು ಮುರಳಿ ಗುರಪ್ಪ.
ನಿರ್ಮಾಪಕ ರವಿ ಅವರಿಗೆ ಸಿನಿಮಾ ಗೆಲುವು ಕೊಡುತ್ತೆ ಎಂಬ ವಿಶ್ವಾಸ. ಸಿನಿಮಾ ನೋಡಿದವರಿಗೆ ಹೊಸ ಫೀಲ್ ಆಗುತ್ತೆ ಎಂಬ ನಂಬಿಕೆಯಂತೆ. ಇನ್ನು, ಅಂದಿನ ಹೀರೋ ಸಂಗೀತ ನಿರ್ದೇಶಕ ಅನೂಪ್ ಸೀಳಿನ್. “ಇದು ತಮಿಳಿನ “ಮೆಟ್ರೋ’ ರಿಮೇಕ್ ಆಗಿದ್ದರೂ, ಇಲ್ಲಿ ಎರಡು ಹೊಸ ಬಗೆಯ ಹಾಡು ಕೊಟ್ಟಿದ್ದೇನೆ. ವಿಷ್ಯುಯಲ್ಸ್ ನೋಡಿದಾಗ ಖುಷಿಯಾಯ್ತು. ಒಳ್ಳೇ ತಂಡದಲ್ಲಿ ನಾನಿದ್ದೇನೆ ಎಂಬುದೇ ಹೆಮ್ಮೆ’ ಅಂದರು ಅನೂಪ್.
ಸಹೋದರನ ನಿರ್ದೇಶನದ ಬಗ್ಗೆ ಗೀತಾ ಗುರಪ್ಪ ಅವರಿಗೆ ನಂಬಿಕೆ ಇದೆಯಂತೆ. “ಮುರಳಿ ಗುರಪ್ಪ ಅವರನ್ನು ಎಡಿಟರ್ ಆಗಿ ನೋಡಿದ್ದೆ. ಈಗ ನಿರ್ದೇಶಕನಾಗಿ ನೋಡಿದ್ದೇನೆ. ಮೊದಲ ಸಿನಿಮಾ ಇದಾಗಿದ್ದರೂ, ಅನುಭವಿಯಂತೆ ಕೆಲಸ ಮಾಡಿದ್ದಾನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು ಗೀತಾ ಗುರಪ್ಪ.
ಕೊನೆಯಲ್ಲಿ ಮಾತಿಗಿಳಿದ ಕಿಟ್ಟಿ, ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡಿದ್ದೇನೆ. ಎಲ್ಲರ ಶುಭ ಹಾರೈಕೆ ಇರಲಿ ಎಂದರು. ಅಂದು ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ಛಾಯಾಗ್ರಾಹಕ ಶ್ರೀನಿವಾಸ್, ಷಡಕ್ಷರಿ ಇತರರು ಮಾತಾಡುವ ಹೊತ್ತಿಗೆ ಸಮಯ ಮೀರಿತ್ತು. ಟ್ರೇಲರ್ ತೋರಿಸುವುದರೊಂದಿಗೆ ಆಡಿಯೋ ಸಿಡಿ ಕಾರ್ಯಕ್ರಮಕ್ಕೂ ಬ್ರೇಕ್ ಬಿತ್ತು.