Advertisement

ಮೆಟ್ರೋ ಸೇವೆ ಕಡಿಮೆ ದರದಲ್ಲಿ ಸಿಗಲಿ

11:55 AM Dec 08, 2018 | |

ಬೆಂಗಳೂರು: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತ್ಯಾಜ್ಯ ನೀರು ಹಾಗೂ ಘನ ತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣ ಕಡ್ಡಾಯಗೊಳಿಸಬೇಕು, ಬಿಎಂಟಿಸಿ, ಮೆಟ್ರೋ ಸೇವೆಗಳು ಕಡಿಮೆ ದರದಲ್ಲಿ ದೊರೆಯಬೇಕು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಆದ್ಯತೆ, ಅಭಿವೃದ್ಧಿಯನ್ನು ಬೆಂಗಳೂರಿಗೆ ಸೀಮಿತಗೊಳಿಸದೆ ಉಳಿದ ನಗರಗಳಿಗೂ ವಿಸ್ತರಿಸಬೇಕು, ಅಂತರ್ಜಲ ಹಾಗೂ ಕೆರೆಗಳ ಸಂರಕ್ಷಣೆಗೆ ಕಾನೂನು ಜಾರಿಗೊಳಿಸಬೇಕು. 

Advertisement

ಕಾಂಗ್ರೆಸ್‌ ಪಕ್ಷವು ನಗರದ ಸೇಂಟ್‌ ಜೋಸೆಫ್ ಇನ್ಸ್‌ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಜನ ಧ್ವನಿ’ ಕಾರ್ಯಕ್ರಮದಲ್ಲಿ ಕೇಳಿಬಂದ ಸಲಹೆಗಳಿವು. ಮೂಲ ಸೌಕರ್ಯ ಹಾಗೂ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ತಜ್ಞರಿಂದ ಸಲಹೆ ಪಡೆಯುವ ಉದ್ದೇಶದಿಂದ “ಜನ ಧ್ವನಿ’ ಆಯೋಜಿಸಲಾಗಿತ್ತು. ಈ ವೇಳೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ತಜ್ಞರು, ಪರಿಸರವಾದಿಗಳು ಹಾಗೂ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು. 

ಲೋಕಸಭಾ ಚುನಾವಣೆಗಾಗಿ ಪ್ರಣಾಳಿಕೆ ಸಿದ್ಧಪಡಿಸುತ್ತಿರುವ ಕಾಂಗ್ರೆಸ್‌, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಜ್ಞರಿಂದ ಪ್ರಣಾಳಿಕೆಗೆ ಪೂರಕವಾದ ಹಲವಾರು ಸಲಹೆಗಳನ್ನು ಪಡೆಯಿತು. ಎಐಸಿಸಿ ಸದಸ್ಯೆ ಕುಮಾರಿ ಸೆಲ್ಜಾ, ರಾಜ್ಯಸಭಾ ಸದಸ್ಯರಾದ ಪ್ರೊ.ರಾಜೀವ್‌ ಗೌಡ, ಎಲ್‌.ಎನ್‌.ಹನುಮಂತಯ್ಯ, ಶಾಸಕ ಹ್ಯಾರೀಸ್‌ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಸಂಚಾರ ದಟ್ಟಣೆ, ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಉತ್ತಮಪಡಿಸುವುದು,

ಖಾಸಗಿ ವಾಹನಗಳ ಖರೀದಿಗೆ ಕಡಿವಾಣ, ಕುಡಿಯುವ ನೀರು ಸರಬರಾಜು, ಒಳಚರಂಡಿ ನೀರು ಹಾಗೂ ಘನ ತ್ಯಾಜ್ಯ ಸಂಸ್ಕರಣೆ, ಸಬ್‌ ಅರ್ಬನ್‌ ರೈಲು ಸೇವೆ, ಪರಿಸರ ಸಂರಕ್ಷಣೆ, ಪ್ರವಾಸೋದ್ಯಮ ಬೆಳವಣಿಗೆ ಹೀಗೆ ಹತ್ತಾರು ವಿಷಯಗಳಿಗೆ ಸಂಬಂಧಿಸಿದಂತೆ ತಜ್ಞರು ಅಭಿಪ್ರಾಯ ಹಂಚಿಕೊಂಡರು. 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಿದ್ಧಪಡಿಸುತ್ತಿರುವ ಪ್ರಣಾಳಿಕೆ ಹೇಗಿರಬೇಕು, ಅಳವಡಿಸಿಕೊಳ್ಳಬೇಕಾದ ಅಂಶಗಳು, ಯೋಜನೆಗಳ ಕುರಿತ ಪ್ರಸ್ತಾವನೆಗಳು ಹಾಗೂ ಸಲಹೆಗಳನ್ನು ಸಾರ್ವಜನಿಕರು ತಿಳಿಸಬಹುದಾಗಿದೆ. ಅದರಂತೆ ತಮ್ಮ ಸಲಹೆಗಳನ್ನು manifesto@inc.inಗೆ ಕಳುಹಿಸಬೇಕು. ಕಾರ್ಯಕ್ರಮದಲ್ಲಿ ಸಿವಿಕ್‌ನ ಕಾತ್ಯಾಯಿನಿ ಚಾಮರಾಜ್‌, ನಗರ ತಜ್ಞ ಅಶ್ವಿ‌ನ್‌ ಮಹೇಶ್‌, ಉಬರ್‌ನ ಸೌಮ್ಯರಾವ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

Advertisement

ಉದ್ಯೋಗಕ್ಕಾಗಿ ನಗರಕ್ಕೆ ಇತರೆ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ವ್ಯಾಪಕವಾಗಿ, ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ವಾಹನ ಖರೀದಿಗೆ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಬೇಕು. ಜತೆಗೆ, ಕೇಂದ್ರ ಸರ್ಕಾರ ಪ್ರಮುಖ ನಗರಗಳ ಅಭಿವೃದ್ಧಿಗೆ ಐದು ವರ್ಷಗಳಿಗೆ 1 ಲಕ್ಷ ಕೋಟಿ. ರೂ. ಮೀಸಲಿಡಬೇಕು.
-ಆರ್‌.ಕೆ.ಮಿಶ್ರಾ

ಆಯಾ ವಾರ್ಡ್‌ಗಳ ತ್ಯಾಜ್ಯವನ್ನು ಅಲ್ಲೇ ಸಂಸ್ಕರಣೆ ಮಾಡಬೇಕು. ಹೆಸರುಘಟ್ಟ ಹಾಗೂ ವೃಷಭಾವತಿ ನದಿ ಪುನರುಜ್ಜೀವನಗೊಳಿಸಬೇಕು. ಜತೆಗೆ ನಗರದ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದ್ದು, ಅಂತರ್ಜಲ ಹೆಚ್ಚಿಸಲು ಮಳೆನೀರು ಕೊಯ್ಲನ್ನು ಪ್ರೋತ್ಸಾಹಿಸಬೇಕು.
-ಮುಕುಂದ, ಸಿಟಿಜನ್‌ ಆಕ್ಷನ್‌ ಫೋರಂ

74ನೇ ಪರಿಚ್ಛೇಧದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆಯಾದರೂ, ವಾಸ್ತವದಲ್ಲಿ ಅಧಿಕಾರ ವಿಕೇಂದ್ರೀಕರಣವಾಗಿಲ್ಲ. ಜತೆಗೆ ಮೇಯರ್‌ ಅವಧಿ ಕೇವಲ ಒಂದು ವರ್ಷವಿರುವುದರಿಂದ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
-ಅನಿಲ್‌ ನಾಯರ್‌, ಜನಾಗ್ರಹ

ದೇಶದಲ್ಲಿ ಸಾವಿರಾರು ಪಾರಂಪರಿಕ ಸ್ಥಳಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ಅವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕಿದ್ದು, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು.
-ಸಿದ್ಧಾರ್ಥ ರಾಜು, ಪರಿಸರವಾದಿ

ರಾಜ್ಯದಲ್ಲಿ ಪಾದಚಾರಿಗಳು ಆತಂಕದ ವಾತಾವರಣದಲ್ಲಿದ್ದು, ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಸರ್ಕಾರಗಳು ನಿರ್ದಿಷ್ಟ ಗುರಿಗಳನ್ನು ಹೊಂದಿದ್ದಾಗ ಮಾತ್ರ ಸಮಸ್ಯೆಗಳ ಪರಿಹಾರ ಸಾಧ್ಯವಾಗುತ್ತದೆ.
-ರವಿಚಂದರ್‌, ನಗರ ತಜ್ಞ

ತುಮಕೂರು ರಸ್ತೆಗೆ ಹೋಗಲು ಜನರು ಮೆಟ್ರೋ ಬಳಸುವ ಬದಲಿಗೆ, ಬಿಎಂಟಿಸಿ ಬಸ್‌ಗಳಲ್ಲಿ ಹೋಗುತ್ತಿದ್ದಾರೆ. ಕಾರಣ, ನಮ್ಮ ಮೆಟ್ರೋ ಟಿಕೆಟ್‌ ದರಕ್ಕಿಂತಲೂ ಬಿಎಂಟಿಸಿ ದರ ಕಡಿಮೆ. ಮೆಟ್ರೋ ಸೇವೆಯನ್ನು ಜನರು ಬಳಸಬೇಕಾದರೆ, ದರ ಕಡಿಮೆ ಮಾಡಬೇಕು.
-ಶೇಷಾದ್ರಿ, ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next