Advertisement

ನೌಕರಿ ತೊರೆಯುವವರಿಗೆ ಮೆಟ್ರೋ ಷರತ್ತು

11:01 AM Aug 04, 2017 | Team Udayavani |

ಬೆಂಗಳೂರು: ಮೆಟ್ರೋದಿಂದ ವಿಮುಖ ರಾಗುತ್ತಿರುವವರ ಉದ್ಯೋಗಿಗಳ ಮೇಲೆ “ನಮ್ಮಮೆಟ್ರೋ’ ನೌಕರಿ ನಿಷೇದ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ನಿಗಮದ ಕೆಲಸದಿಂದ ನಿರ್ಗಮಿಸುವ ಎಂಜಿನಿಯರ್‌ಗಳು ಮುಂದಿನ ಎರಡು ವರ್ಷ ದೇಶದ ಯಾವುದೇ ಮೆಟ್ರೋ ನಿಗಮಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಎಂದು ನಿಗಮವು ಫ‌ರ್ಮಾನು ಹೊರಡಿಸಿರುವುದು ತಡವಾಗಿ
ಬೆಳಕಿಗೆಬಂದಿದೆ.

Advertisement

ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಸಿಬ್ಬಂದಿ ಮಾತ್ರವಲ್ಲ; ನಮ್ಮ ಮೆಟ್ರೋ ಯೋಜನೆಯ ವಿನ್ಯಾಸ, ಸಿವಿಲ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಎಂಜಿನಿಯರ್‌ ಗಳು ಕೂಡ ದೇಶದ ಇತರೆ ಮೆಟ್ರೋ ಯೋಜನೆಗಳತ್ತ ಸದ್ಯ ಮುಖ ಮಾಡುತ್ತಿದ್ದಾರೆ. ಇದನ್ನು ತಡೆಯಲು ಬಿಎಂಆರ್‌ಸಿ ಈಚೆಗೆ ಹೊಸ ಆದೇಶ ಹೊರಡಿಸಿದೆ. ಅದರಂತೆ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳು ರಾಜೀನಾಮೆ ಕೊಟ್ಟು ಕೆಲಸ ಬಿಟ್ಟರೂ ಮುಂದಿನ 2 ವರ್ಷ ಯಾವುದೇ ಮೆಟ್ರೋ
ನಿಗಮಗಳಲ್ಲಿ ಕೆಲಸ ಮಾಡುವಂತಿಲ್ಲ.

ಷರತ್ತು ವಿಧಿಸಿಲ್ಲ ಎನ್ನುತ್ತಿದೆ ಬಿಎಂಆರ್‌ಸಿ: ಈ ನಿಯಮದ ಕುರಿತು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಹೇಳುವುದೇ ಬೇರೆ. “ಯಾವುದೇ ಎಂಜಿನಿಯರ್‌ಗಳಿಗೆ ಈ ರೀತಿಯ ಷರತ್ತುಗಳನ್ನು ನಾವು ವಿಧಿಸಿಲ್ಲ. ನಿಗಮದಲ್ಲಿ ಕಾರ್ಯನಿರ್ವಹಿಸತ್ತಿರುವ ಎಲ್ಲ ಎಂಜಿನಿಯರ್‌ಗಳನ್ನು ಸಮಾನವಾಗಿ ಕಾಣಲಾಗುತ್ತಿದೆ. ಯಾರಿಗೂ ಯಾವುದೇ ಫ‌ರ್ಮಾನು ಹೊರಡಿಸಿಲ್ಲ,’ ಎಂದು ಹೇಳಿದ್ದಾರೆ.

ನಿಗಮದಲ್ಲಿ 7ನೇ ವೇತನ ಶ್ರೇಣಿ ಜಾರಿ ಮಾಡದಿರುವುದು, ಬಡ್ತಿ ನೀತಿ ಸಮರ್ಪಕವಾಗಿ ಅನುಸರಿಸದಿರುವುದು ಸೇರಿದಂತೆ ಮತ್ತಿತರ
ವಿಚಾರಗಳಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಕಳೆದ ಮೂರು
ವರ್ಷಗಳಲ್ಲಿ ಹಲವು ಎಂಜಿನಿಯರ್‌ಗಳು ಬಿಎಂಆರ್‌ ಸಿಯಿಂದ ವಿಮುಖರಾಗಿದ್ದಾರೆ.

ಈ ನಡುವೆ ದೇಶದ ವಿವಿಧ ಮಹಾನಗರಗಳಲ್ಲಿ ಮೆಟ್ರೋ ಯೋಜನೆಗಳನ್ನು ಜಾರಿಯಲ್ಲಿದ್ದು, ನಮ್ಮ ಮೆಟ್ರೋಗಿಂತ ಉತ್ತಮ ಸೌಲಭ್ಯಗಳು ಅಲ್ಲಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎಂಜಿನಿಯರ್‌ಗಳು ಬೇರೆ ಬೇರೆ ರಾಜ್ಯಗಳ ಮೆಟ್ರೋ ನಿಗಮಗಳತ್ತ 
ಮುಖಮಾಡುತ್ತಿದ್ದಾರೆ. ಇದನ್ನು ತಡೆಯಲು ಮುಂದಾಗಿರುವ ನಿಗಮದ ಆಡಳಿತ ಮಂಡಳಿ, ಈ ಹೊಸ ಷರತ್ತು ಮುಂದಿಟ್ಟಿದೆ ಎಂದು ಹೆಸರು ಹೇಳಲಿಚ್ಛಿಸದ ಎಂಜಿನಿಯರೊಬ್ಬರು ಆರೋಪಿಸಿದ್ದಾರೆ. ಯೋಜನೆ ಮೇಲೆ ಪರಿಣಾಮ? ನಿಗಮದಲ್ಲಿ 
ಕಾರ್ಯನಿರ್ವಹಿಸುತ್ತಿರುವವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಮತ್ತೂಂದೆಡೆ ಇಲ್ಲಿಂದ ಹೊರಹೋಗಲಿಕ್ಕೂ ಬಿಡುತ್ತಿಲ್ಲ. ಇದರಿಂದ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಅಷ್ಟಕ್ಕೂ ದೆಹಲಿ ಸೇರಿದಂತೆ ದೇಶದ ಯಾವುದೇ ಮೆಟ್ರೋ ನಿಗಮಗಳಲ್ಲಿ ಈ ನಿಯಮ ಇಲ್ಲ. ಆದರೆ, ಬಿಎಂಆರ್‌ಸಿಯಲ್ಲಿ ಮಾತ್ರ ಯಾಕೆ ಎಂಬ ಅಪಸ್ವರ ಎಂಜಿನಿಯರ್‌ಗಳಿಂದ ಕೇಳಿಬರುತ್ತಿದೆ. ಸಿಬ್ಬಂದಿಯ ಈ ಅಸಮಾಧಾನ ಮುಂದಿನ ದಿನಗಳಲ್ಲಿ ಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Advertisement

ಪ್ರಾಜೆಕ್ಟ್‌ನಲ್ಲಿರುವ ಸಿವಿಲ್‌, ಸಿಸ್ಟ್‌ಂ, ವಿನ್ಯಾಸ, ಅಂಕಿ-ಸಂಖ್ಯೆ, ಯೋಜನೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 350ರಿಂದ 400 ಎಂಜಿನಿಯರ್‌ಗಳಿಗೆ 15 ದಿನಗಳ ಹಿಂದೆ ಈ ಹೊಸ ಆದೇಶದ ಪ್ರತಿ ತಲುಪಿದೆ. ಈ ಮಧ್ಯೆ 7ನೇ ವೇತನ ಶ್ರೇಣಿ ನೀಡುವುದಿಲ್ಲ ಎಂದೂ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಅಸಮಾಧಾನದ ನಡುವೆ ಸಿಬ್ಬಂದಿ ಕಾರ್ಯನಿರ್ವಹಿಸುವುದರಿಂದ
ಸಹಜವಾಗಿಯೇ ಯೋಜನೆಯ ಗುಣಮಟ್ಟ ಮತ್ತು ನಿಗದಿತ ಕಾಲಮಿತಿಯಲ್ಲಿ ಮಾಡಿಮುಗಿಸುವುದು ಕಷ್ಟವಾಗಲಿದೆ.

ಉಳಿದೆಡೆ ಸೌಲಭ್ಯ ಹೇಗೆ? ಅಹಮದಾಬಾದ್‌ ಹೊರತುಪಡಿಸಿದರೆ, ದೇಶದ ಉಳಿದೆಲ್ಲ ಮೆಟ್ರೋ ರೈಲು ನಿಗಮಗಳಲ್ಲಿ ಕೈಗಾರಿಕಾ ಭತ್ಯೆ (ಐಡಿಎ) ಮಾದರಿ ಅನುಸರಿಸಲಾಗುತ್ತಿದೆ. ಅಂದರೆ ಕಾಯಂ ಜತೆಗೆ ಬಡ್ತಿ ಮತ್ತಿತರ ಲಭ್ಯಗಳು ನಿಯಮಿತವಾಗಿ ಲಭ್ಯವಾಗುತ್ತವೆ. ಆದರೆ, ಬಿಎಂಆರ್‌ಸಿಯಲ್ಲಿ ಗುತ್ತಿಗೆ ಆಧಾರದ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಬಡ್ತಿ ನಿಯಮಗಳನ್ನು ಕೂಡ ಗಾಳಿಗೆ ತೂರಲಾಗಿದ್ದು, ಕೆಲವರಿಗೆ ನೇಮಕಗೊಂಡ ಆರು ತಿಂಗಳಲ್ಲಿ ಬಡ್ತಿ ನೀಡಿದರೆ, ಇನ್ನು ಹಲವರಿಗೆ 10 ವರ್ಷ ಕಳೆದರೂ ಬಡ್ತಿ ಭಾಗ್ಯ ಸಿಕ್ಕಿಲ್ಲ ಎಂದು ಎಂಜಿನಿಯರೊಬ್ಬರು ದೂರಿದ್ದಾರೆ. 

*ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next