Advertisement

ಮೆಟ್ರೋ ಪಿಲ್ಲರ್ ದುರಂತ: ದಾವಣಗೆರೆಯಲ್ಲಿ ತೇಜಸ್ವಿನಿ- ವಿಹಾನ್ ಅಂತ್ಯಕ್ರಿಯೆ

03:19 PM Jan 11, 2023 | Team Udayavani |

ದಾವಣಗೆರೆ: ಬೆಂಗಳೂರಿನ ಎಚ್ ಬಿಆರ್ ಲೇಔಟ್ ಹೆಣ್ಣೂರು ಕ್ರಾಸ್ ಸಮೀಪ ಮಂಗಳವಾರ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಬಿದ್ದು ಸಾವನ್ನಪಿದ ತೇಜಸ್ವಿನಿ ಮತ್ತು ವಿಹಾನ್ ಅವರ ಅಂತ್ಯಕ್ರಿಯೆಯನ್ನು ತೇಜಸ್ವಿನಿ ಅವರ ತವರೂರು ದಾವಣಗೆರೆಯಲ್ಲಿ ಬುಧವಾರ ನೆರವೇರಿಸಲಾಯಿತು.

Advertisement

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಘೋರ ದುರಂತದಲ್ಲಿ ಮೃತಪಟ್ಟ ತೇಜಸ್ವಿನಿ ಮೂಲತಃ ದಾವಣಗೆರೆಯವರು. ತೇಜಸ್ವಿನಿ ಅವರ ಕುಟುಂಬ ದಾವಣಗೆರೆಯ ಬಸವೇಶ್ವರ ನಗರದಲ್ಲಿ ವಾಸವಾಗಿದೆ. ಸಾಫ್ಟ್ ವೇರ್ ಎಂಜಿನಿಯರ್ ತೇಜಸ್ವಿನಿ ಗದಗ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ ಕುಮಾರ್ ಅವರನ್ನು ವಿವಾಹ ವಾಗಿದ್ದರು.

ಮಂಗಳವಾರವೇ ತೇಜಸ್ವಿನಿ ಮತ್ತು ವಿಹಾನ್ ಅವರ ಪಾರ್ಥಿವ ಶರೀರಗಳನ್ನು ಬಸವೇಶ್ವರ ನಗರದ ಮನೆಗೆ ತರಲಾಗಿತ್ತು.

ಭಾವಸಾರ ಕ್ಷತ್ರಿಯ ಸಮಾಜದ ಸಂಪ್ರದಾಯದಂತೆ ತೇಜಸ್ವಿನಿ ಅವರ ಅಂತ್ಯಕ್ರಿಯೆ ಹಳೆ ಪಿ.ಬಿ. ರಸ್ತೆಯಲ್ಲಿನ ವೈಕುಂಠಧಾಮದಲ್ಲಿ ನೆರವೇರಿತು. ಗ್ಲಾಸ್ ಹೌಸ್ ಬಳಿಯ ರುದ್ರಭೂಮಿಯಲ್ಲಿ ವಿಹಾನ್ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನದ ನಡುವೆ ನಡೆಯಿತು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ದುರಂತದಲ್ಲಿ ಪಾರಾದ ಲೋಹಿತ್ ಕುಮಾರ್ ಹಾಗೂ ವಿಸ್ಮಿತಾ ಸಹ ಕಣ್ಣೀರು ಹಾಕುವ ದೃಶ್ಯ ಎಲ್ಲರ ಮನಕಲುಕುವಂತಿತ್ತು.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತೇಜಸ್ವಿನಿ ತಂದೆ ಮದನ್ ಗುಜ್ಜರ್ ಹಾಗೂ ತಾಯಿ ರುಕ್ಷ್ಮೀಮಿ ಬಾಯಿ ಬೆಂಗಳೂರಿಗೆ ಹೋಗಿದ್ದರು.

Advertisement

ಇದನ್ನೂ ಓದಿ:ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಇಡಿ ಪರಿಶೀಲನೆ: ಪ್ರತಿಕ್ರಿಯಿಸಿದ ಕಿಮ್ಮನೆ ರತ್ನಾಕರ್

ರಾಜ್ಯ ಸರ್ಕಾರ ನೀಡುವ ಪರಿಹಾರ ಯಾರಿಗೆ ಬೇಕು, ಜೀವ ತಂದುಕೊಡಲು ಆಗುತ್ತಾ, ಯಾರೋ ಮಾಡಿದ ತಪ್ಪಿಗೆ ನಮ್ಮ ಮಗಳು, ಮೊಮ್ಮಗ ಬಲಿಯಾದರು. ಬದುಕಿ ಬಾಳಬೇಕಿದ್ದ ಮೊಮ್ಮಗನನ್ನು ಕಳೆದುಕೊಂಡಿದ್ದೇವೆ. ನಾವೇ ಪರಿಹಾರ ಕೊಡುತ್ತೇವೆ. ಹೋದ ಜೀವ ತಂದುಕೊಡಲು ಆಗುತ್ತಾ, ಕಮೀಷನ್ ಆಸೆಗೆ ಕಳಪೆ ಕಾಮಗಾರಿ ಮಾಡಿರುವುದೇ  ದುರಂತಕ್ಕೆ ಕಾರಣ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ನಮಗೆ ನ್ಯಾಯ ಬೇಕು ಎಂದು ತೇಜಸ್ವಿನಿ ಸಹೋದರಿ ಭಾಗ್ಯ, ದೊಡ್ಡಪ್ಪ ಜಿ. ರಾಘವೇಂದ್ರ ರಾವ್ ಒತ್ತಾಯಿಸಿದರು.

ಕೇವಲ ಕಣ್ಣೊರೆಸುವ ತಂತ್ರ ಮಾಡದೇ ತಪ್ಪು ಮಾಡಿದವರಿಗೆ ಶಿಕ್ಷೆ ಮೊದಲು ವಿಧಿಸಲಿ ಎಂದು ಒತ್ತಾಯಿಸಿದರು.

ದೊಡ್ಡಪ್ಪ ನಾರಾಯಣ್ ಮಾತನಾಡಿ, ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಬಳಿಕ ಲೋಹಿತ್ ಕುಮಾರ್ ಘಟನೆ ಸಂಬಂಧ ದೂರು ನೀಡಲು ಗೋವಿಂದಪುರ ಪೊಲೀಸ್ ಠಾಣೆಗೆ ತೆರಳಿದ್ದಾಗ ದೂರು ದಾಖಲಿಸಿ ಕೊಳ್ಳುವುದಕ್ಕೇ ವಿಪರೀತ ವಿಳಂಬ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ದುಃಖದಲ್ಲಿದ್ದ ಲೋಹಿತ್ ಅವರನ್ನು ಠಾಣೆಯಲ್ಲಿ ಹೆಚ್ಚು ಹೊತ್ತು ಕೂರಿಸಿದ ಪೊಲೀಸರ ಕ್ರಮ ಸರಿಯಲ್ಲ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next