Advertisement

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

12:13 PM May 06, 2024 | Team Udayavani |

ಬೆಂಗಳೂರು: ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂಬರುವ ದಿನಗಳಲ್ಲಿ ಉಪನಗರಗಳಿಗೂ “ವಂದೇ ಭಾರತ್‌ ಮೆಟ್ರೋ ರೈಲು’ಗಳು ಕಾರ್ಯಾಚರಣೆ ಮಾಡಲಿವೆ. ಈ ಮೂಲಕ ನಗರ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿರುವ ಸಂಚಾರದಟ್ಟಣೆ ಸಮಸ್ಯೆಗೆ ಪರಿಹಾರ ದೊರೆಯಲಿದೆ.

Advertisement

ಬಹುನಿರೀಕ್ಷಿತ ಉಪನಗರ ರೈಲು ಯೋಜನೆ ಅಡಿ ವಂದೇ ಭಾರತ್‌ ಮೆಟ್ರೋ ಬೋಗಿಗಳನ್ನು ಪರಿಚಯಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ-ರೈಡ್‌) ಮುಂದಾಗಿದೆ. ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್) ಪ್ರತಿ ಬೋಗಿಗೆ 9.17 ಕೋಟಿ ರೂ. ವೆಚ್ಚ ಆಗಲಿದೆ ಎಂದು ದರ ಕೂಡ ಕೋಟ್‌ ಮಾಡಿದೆ. ಇದು ಸಾಧ್ಯವಾದರೆ, ಉದ್ದೇಶಿತ ಉಪನಗರ ಜಾಲದಲ್ಲೂ “ವಂದೇ ಭಾರತ್‌ ಮೆಟ್ರೋ ರೈಲು’ಗಳು ಕಾರ್ಯಾಚರಣೆ ಮಾಡಲಿವೆ. ಇದರೊಂದಿಗೆ ಹೆಚ್ಚು-ಕಡಿಮೆ ಮೆಟ್ರೋಗಿಂತ ಹೈಟೆಕ್‌ ಸಮೂಹ ಸಾರಿಗೆ ಸೇವೆ ಬೆಂಗಳೂರಿಗರಿಗೆ ಸಿಗಲಿದೆ.

148.17 ಕಿ.ಮೀ. ಉದ್ದದ ನಾಲ್ಕು ಕಾರಿಡಾರ್‌ಗಳನ್ನು ಹೊಂದಿರುವ ಉಪನಗರ ರೈಲು ಯೋಜನೆಗೆ ಒಟ್ಟು 306 ಬೋಗಿಗಳನ್ನು ಕೆ-ರೈಡ್‌ ಪ್ರಸ್ತಾಪಿಸಿದೆ. ಪ್ರತಿ ಬೋಗಿಗೆ 9.17 ಕೋಟಿ ರೂ.ಗಳಂತೆ 3,311 ಕೋಟಿ ರೂ. ವೆಚ್ಚ ಆಗುತ್ತದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಬದಲಿಗೆ ರೈಲ್ವೆ ಸಚಿವಾಲಯ, ರಾಜ್ಯ ಸರ್ಕಾರ ತಲಾ ಶೇ. 50 ವೆಚ್ಚ ಭರಿಸುವಂತೆ ಮಾಡಲು ಚಿಂತನೆ ನಡೆದಿದೆ ಎಂದು ಕೆ-ರೈಡ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ ಪಿಪಿಪಿ ಮಾದರಿಯಲ್ಲಿ 264 ಬೋಗಿಗಳ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಪ್ರಸ್ತಾವನೆಗೆ ಮನವಿ ಸಲ್ಲಿಕೆ (ಆರ್‌ಎಫ್ಪಿ) ಕೂಡ ಮಾಡಲಾಗಿದ್ದು, ಬಿಇಎಂಎಲ್‌, ಬಿಇಎಲ್‌ ಮತ್ತು ಸಿಎಎಫ್ ಕಂಪನಿಗಳು ಆಸಕ್ತಿ ತೋರಿಸಿವೆ. ಮೊದಲ ಹಂತದಲ್ಲಿ ಕೆ-ರೈಡ್‌ 3 ಬೋಗಿಗಳನ್ನು ಹೊಂದಿರುವ 80 ಹಾಗೂ 6 ಬೋಗಿಗಳನ್ನು ಒಳಗೊಂಡ ನಾಲ್ಕು ರೈಲುಗಳ ಕಾರ್ಯಾಚರಣೆಗೊಳಿಸಲು ಉದ್ದೇಶಿಸಿತ್ತು. ಆದರೆ, ದೇಶದಲ್ಲಿ ಬೋಗಿಗಳನ್ನು “ಲೀಸ್‌’ ರೂಪದಲ್ಲಿ ಪಡೆದು ಕಾರ್ಯಾಚರಣೆಗೊಳಿಸುವ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.

ವಂದೇ ಮೆಟ್ರೋದಿಂದ ಲಾಭ ಏನು?: ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ವಂದೇ ಭಾರತ್‌ ಮೆಟ್ರೋ ಬೋಗಿಗಳನ್ನು ಪರಿಚಯಿಸಲು ಕೆ-ರೈಡ್‌ ಚಿಂತನೆ ನಡೆದಿದೆ. ಇದರಿಂದ ಸ್ವತಃ ಐಸಿಎಫ್ ಈ ಬೋಗಿಗಳನ್ನು ತಯಾರು ಮಾಡುತ್ತದೆ. ಆಗ ವೆಚ್ಚ ಕಡಿಮೆ ಆಗುವುದರಿಂದ ಸಹಜವಾಗಿ ಪ್ರಯಾಣ ದರ ಕೂಡ ಹೊರೆ ಆಗುವುದಿಲ್ಲ. ಇದು ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ. ಅಷ್ಟೇ ಅಲ್ಲ, ಇನ್ನಷ್ಟು ಆರಾಮದಾಯಕ ಸೇವೆಯೂ ದೊರೆಯ ಲಿದೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.

Advertisement

ಈ ನಿಟ್ಟಿನಲ್ಲಿ ಒಂದೆಡೆ ರೈಲ್ವೆ ಸಚಿವಾಲಯದಡಿ ಬರುವ ಐಸಿಎಫ್ಗೆ ಪತ್ರ ಬರೆಯಲಾಗಿದೆ. ಇನ್ನೂ ಮುಂದುವರಿದು ಬೋಗಿಗಳ ಪೂರೈಕೆಯ ಕಾರ್ಯಸಾಧ್ಯತೆಗೆ ಸಂಬಂಧಿಸಿದಂತೆ ಐಸಿಎಫ್ಗೆ ಕೆ-ರೈಡ್‌ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ, ಕೆ-ರೈಡ್‌ ಅಧಿಕಾರಿಗಳು ಕಪುರ್ತಲಾದಲ್ಲಿರುವ ರೈಲ್ವೆ ಕೋಚ್‌ ಫ್ಯಾಕ್ಟರಿ (ಆರ್‌ಸಿಎಫ್)ಗೆ ಕೂಡ ಭೇಟಿ ನೀಡಿ, ವಂದೇ ಭಾರತ ಮೆಟ್ರೋ ಬೋಗಿಗಳು ಉಪನಗರ ರೈಲು ಯೋಜನೆಗೆ ಸೂಕ್ತವಾಗಿರಲಿವೆಯೋ ಇಲ್ಲವೋ ಎಂಬುದನ್ನೂ ಖಾತ್ರಿಪಡಿಸಿಕೊಂಡಿದ್ದು, ಪೂರಕ ಸ್ಪಂದನೆ ಮತ್ತು ಅಭಿಪ್ರಾಯಗಳು ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟದಲ್ಲಿ ನಿರ್ಧಾರ ಆಗ್ಬೇಕು: ಈ ಎಲ್ಲ ಪ್ರಯತ್ನ ಗಳ ನಂತರ ಉಪನಗರ ರೈಲು ಯೋಜನೆಯಲ್ಲಿ ವಂದೇ ಭಾರತ್‌ ಮೆಟ್ರೋ ಬೋಗಿಗಳನ್ನು ಪರಿಚಯಿಸುವ ಆಲೋಚನೆಗೆ ಮುಂದಾಗಿದೆ. ಈ ಸಂಬಂಧ ರೈಲ್ವೆ ಸಚಿವಾಲಯಕ್ಕೆ ಪತ್ರ ಕೂಡ ಬರೆಯಲಾಗಿದೆ ಎನ್ನಲಾಗಿದೆ. ಅಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಲ್ಲಿರುವುದರಿಂದ ಹೊಸ ಸರ್ಕಾರ ಬಂದ ಮೇಲೆ ಈ ನಿಟ್ಟಿನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಒಂದು ವೇಳೆ ಉದ್ದೇಶಿತ ಪ್ರಸ್ತಾವನೆಗೆ ಪೂರಕ ಸ್ಪಂದನೆ ದೊರೆತರೆ, ಈಗಾಗಲೇ ಕೇಂದ್ರ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರವನ್ನು ಹಿಂಪಡೆದು ಹೊಸದಾಗಿ ಪ್ರಸ್ತಾವನೆ ಮುಂದಿಟ್ಟು ಅನುಮೋದನೆ ಪಡೆಯಬೇಕಾಗುತ್ತದೆ.

ಪ್ರಮುಖಾಂಶಗಳು:

ನಾಲ್ಕು ಕಾರಿಡಾರ್‌ ಒಳಗೊಂಡ ಉಪನಗರ ರೈಲು ಯೋಜನೆಗೆ 306 ಬೋಗಿಗಳು ಅಗತ್ಯ

9.17 ಕೋಟಿ ರೂ. ಪ್ರತಿ ಬೋಗಿ ತಯಾರಿಕೆಗೆ ಐಸಿಎಫ್ ಕೋಟ್‌ ಮಾಡಿರುವ ಅಂದಾಜು ಮೊತ್ತ

3,311 ಕೋಟಿ ರೂ. ಒಟ್ಟಾರೆ

306 ಬೋಗಿಗಳ ತಯಾರಿಕೆಗೆ ತಗಲುವ ವೆಚ್ಚ

ಪ್ರಸ್ತುತ ಬೋಗಿಗಳನ್ನು ಪಿಪಿಪಿ ಅಡಿ ಪೂರೈಸಲು ಉದ್ದೇಶಿಸಲಾಗಿದೆ

ಐಸಿಎಫ್ನಿಂದ ವಂದೇ ಭಾರತ್‌ ಮೆಟ್ರೋ ಬೋಗಿಗಳ ಪೂರೈಸಬ ಹುದು ಎಂಬ ಅಭಿಪ್ರಾಯ ವ್ಯಕ್ತ

264 ಬೋಗಿಗಳ ಪೂರೈಕೆಗೆ ಆರ್‌ಎಫ್ಪಿಯಲ್ಲಿ ಬಿಇಎಂಎಲ್‌, ಬಿಇಎಲ್‌, ಸಿಎಎಫ್ ಆಸಕ್ತಿ

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next