Advertisement

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

07:12 PM May 04, 2024 | Team Udayavani |

ದಾವಣಗೆರೆ: ನೂರಾರು ಮಹಿಳೆಯರ ಮೇಲೆ ಬಲತ್ಕಾರ ಮಾಡಿದ ವ್ಯಕ್ತಿಯ ಕೈ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮತಯಾಚಿಸುತ್ತಾರೆ. ವಿಷಯ ಹೊರಬರುತ್ತಿದ್ದಂತೆ ಆತ ದೇಶ ಬಿಟ್ಟು ಹೋಗುತ್ತಾನೆ. ಯಾವ ರಾಜಕಾರಣಿ ಎಲ್ಲಿ ಹೋಗುತ್ತಾರೆ ಎಂದು ತಿಳಿಯುವ ಮೋದಿಯವರಿಗೆ ಆತ ದೇಶ ಬಿಟ್ಟು ಹೋಗಿದ್ದು ಗೊತ್ತೇ ಇಲ್ಲ ಎಂದು ನಾಟಕವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದರು.

Advertisement

ದಾವಣಗೆರೆಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಓದಿಸಿ, ರಕ್ಷಿಸಿ ಎಂದು ಹೇಳುವ ಮೋದಿ, ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಏನನ್ನೂ ಮಾತನಾಡಿಲ್ಲ ಎಂದರು.

ಕೋಟ್ಯಧಿಪತಿಗಳಿಂದ ದೇಣಿಗೆ ಪಡೆದು ಬಿಜೆಪಿ ಶ್ರೀಮಂತ ಪಕ್ಷವಾಗಿದೆ. ಚುನಾವಣೆಯಲ್ಲಿ ಹಣ ಖರ್ಚು ಮಾಡದಂತೆ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗೆ ಬೀಗ ಹಾಕಿದೆ. ಮೋದಿಯವರು ಹಂಚಿಕೊಳ್ಳುವ ದೊಡ್ಡ ದೊಡ್ಡ ಕಾರ್ಯಕ್ರಮ ವೇದಿಕೆಯಲ್ಲಿ ಎಂದೂ ಮಹಿಳೆಯರು, ರೈತರು, ಕಾರ್ಮಿಕರ ಸಮಸ್ಯೆ, ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ ಎಂದು ಗುಡುಗಿದರು.

ಬಿಜೆಪಿ ಇಂದು ದೇಶದಲ್ಲೇ ಅಲ್ಲ ವಿಶ್ವದಲ್ಲೇ ಶ್ರೀಮಂತ ರಾಜಕೀಯ ಪಕ್ಷವಾಗಿದೆ. ಎಲೆಕ್ಟ್ರೋಲ್ ಬಾಂಡ್ ಮೂಲಕ ಬಂಡವಾಳಶಾಹಿಗಳಿಂದ ದೇಣಿಗೆ ಸಂಗ್ರಹಿಸಿದೆ. ಗುಜರಾತಿನಲ್ಲಿ ಸೇತುವೆ ಬಿದ್ದು ಅನಾಹುತ ಸಂಭವಿಸಿದ ಗುತ್ತಿಗೆದಾರನಿಂದ ದೇಣಿಗೆ ಪಡೆದಿದೆ ಎಂದು ಪ್ರಿಯಾಂಕಾ ಹೇಳಿದರು.

ಕೋವಿಡ್ ಲಸಿಕೆ ತಯಾರಿಸುವುದನ್ನು ಒಂದೇ ಕಂಪನಿಗೆ ಕೊಟ್ಟಿದೆ. ಲಸಿಕೆ ಹಾಕಿಸಿಕೊಂಡ ಕೆಲವರಿಗೆ ಅದರಲ್ಲಿಯೂ ಯುವಕರಲ್ಲಿ ಹೃದಯಾಘಾತವಾಗುತ್ತಿದೆ ಎಂಬ ವರದಿಯೂ ಬಂದಿದೆ. ಅಂಥ ಕಂಪನಿಯಿಂದ 51 ಕೋಟಿ ರೂ. ದೇಣಿಗೆ ಪಡೆದಿದೆ. ಹೀಗೆ ಇ.ಡಿಯಿಂದ ಕೇಸ್ ಹಿಂಪಡೆಯಲು, ಹಾಕಲು ಎಲ್ಲದಕ್ಕೂ ಹಣ ಪಡೆದು ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದರು.

Advertisement

ಕೋಟ್ಯಧಿಪತಿಗಳ ಕೈಯಲ್ಲೇ ಇರುವ ಮಾಧ್ಯಮಗಳ ಮೂಲಕ ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸವೂ ಮಾಡುತ್ತಿದೆ. ಚುನಾವಣೆ ಸಮಯದಲ್ಲಿ ದೇಶದ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಜೈಲಿನಲ್ಲರಿಸಿದೆ. ಎರಡ್ಮೂರು ದಿನಗಳ ಹಿಂದೆ ಗುಜರಾತಿಗೆ ಹೋದಾಗ ಅಲ್ಲಿ ಪ್ರಧಾನಿ ಮೋದಿಯವರು, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ಎಕ್ಸರೇ ಯಂತ್ರ ತಂದು ತಮ್ಮ ಮನೆಯಲ್ಲಿರುವ ಅರ್ಧ ಸಂಪತ್ತು ಕಿತ್ತುಕೊಳ್ಳುತ್ತಾರೆ. ನಿಮ್ಮ ಮನೆಯಲ್ಲಿ ಎರಡು ಹಸು ಇದ್ದರೆ ಒಂದು ಹಸು ಒಯ್ಯುತ್ತಾರೆ ಎಂದು ಸುಳ್ಳು ಹೇಳಿದ್ದಾರೆ. ಒಬ್ಬ ಪ್ರಧಾನಿಯಾದವರು ರಾಜಕೀಯಕ್ಕಾಗಿ ಈ ರೀತಿ ಸುಳ್ಳು ಹೇಳುವುದನ್ನು ನೀವು ನಿರೀಕ್ಷಿಸಿದ್ದರಾ ಎಂದು ಪ್ರಶ್ನಿಸಿದರು.

ಹತ್ತು ವರ್ಷ ಆಡಳಿತ ನಡೆಸಿ ಜನರೆದುರು ಬಂದ ಪ್ರಧಾನಿಯವರು ತಮ್ಮ ಅವಧಿಯಲ್ಲಿ ಎಷ್ಟು ಶಾಲಾ-ಕಾಲೇಜು ತೆರೆದೆವು, ಎಷ್ಟು ರಸ್ತೆ ಅಭಿವೃದ್ಧಿ ಮಾಡಿದೆವು, ಎಷ್ಟು ಆಸ್ಪತ್ರೆ ಅಭಿವೃದ್ಧಿ ಪಡಿಸಿದೆವು ಎಂದು ತಿಳಿಸಬೇಕಿತ್ತು. ಆದರೆ, ಮೋದಿಯವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಅವರು ಈ ವಿಚಾರವಾಗಿ ಅಭಿವೃದ್ಧಿಯೇ ಮಾಡಿಲ್ಲ ಎಂದರು.

ಈಗ ಜನರಿಗೆ ಹೊಸ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಬಂದಿದೆ. ಈ ದೇಶ ನಿಮ್ಮದು. ಈ ಸಂಪತ್ತು ನಿಮ್ಮದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನು ನಿಮಗೆ ಗ್ಯಾರಂಟಿ ಯೋಜನೆಗಳ ರೂಪದಲ್ಲಿ ವಾಪಸ್ ನೀಡಲಿದೆ. ನಿಮಗಾಗಿ, ನಿಮ್ಮ ಜೀವನ ಬದಲಾವಣೆಗಾಗಿ, ದೇಶವನ್ನು ಬಲಿಷ್ಠಗೊಳಿಸುವುದಕ್ಕಾಗಿ ಈ ಬಾರಿ ಯೋಚಿಸಿ ಮತ ಚಲಾಯಿಸಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next