ತಿರುವನಂತಪುರಂ : ಕೇರಳದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಕಾವು ಜೋರಾಗಿದೆ. ಇದರ ನಡುವೆ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಘೋಷಣೆಯೊಂದನ್ನು ಮಾಡಿದ್ದು, ರಾಜ್ಯದಲ್ಲಿ ನಾವೇನಾದ್ರು ಗೆದ್ದರೆ, ಮೆಟ್ರೋ ಮ್ಯಾನ್ ಇ. ಶ್ರೀಧರನ್ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡುವುದಾಗಿ ಹೇಳಿದ್ದಾರೆ.
ಇ ಶ್ರೀಧರನ್ ಕಳೆದ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅಲ್ಲದೆ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಇಂಗಿತವನ್ನು ಹೊರ ಹಾಕಿದ್ದರು.
ಅಲ್ಲದೇ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಮುಖ್ಯ ಗುರಿಯಾಗಿದೆ ಎಂದಿದ್ದ ಮೆಟ್ರೋ ಮ್ಯಾನ್, ಮುಖ್ಯಮಂತ್ರಿಯಾದರೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು.
ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿರುವ ಬಿಜೆಪಿ, ಗಣ್ಯರು, ಸಿನಿಮಾ ತಾರೆಯರು ಸೇರಿದಂತೆ ಹಲವರನ್ನು ತನ್ನತ್ತ ಸೆಳೆಯುತಿದೆ.