Advertisement

ದುಪ್ಪಟ್ಟು ಕೊಟ್ಟು ಮೆಟ್ರೋ ಭೂಸ್ವಾಧೀನ

12:01 PM Apr 25, 2017 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಕೆ.ಆರ್‌. ಪುರ- ಮಹದೇವಪುರ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ವೇಳೆ, ವಶಕ್ಕೆ ಪಡೆಯಲಾಗುವ ಭೂಮಿಗೆ ಪ್ರತಿಯಾಗಿ ಈಗ ನಿಗದಿಪಡಿಸಿರು ವುದಕ್ಕಿಂತಲೂ ದುಪ್ಪಟ್ಟು ಪರಿಹಾರ ನೀಡಲು ಚಿಂತನೆ ನಡೆದಿದೆ. 

Advertisement

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವಿನ 15.5 ಕಿ.ಮೀ. ಉದ್ದದ ಮಾರ್ಗದಲ್ಲಿ ಬರುವ ಕೆ.ಆರ್‌. ಪುರ- ಮಹದೇವಪುರ ನಡುವಿನ ಭೂಸ್ವಾಧೀನ ಪ್ರಕ್ರಿಯೆ ಬೆಲೆ ವಿಚಾರಕ್ಕೆ ಸದ್ಯ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ನಿಗದಿಪಡಿಸಿರುವ ದರಕ್ಕಿಂತ ಪರಿಹಾರ ಮೊತ್ತವನ್ನು ಹೆಚ್ಚಿಸಿ, ಸಮಸ್ಯೆ ಆದಷ್ಟು ಬೇಗ ಪರಿಹರಿಸಿಕೊಳ್ಳಲು ಬಿಎಂಆರ್‌ಸಿ ಉದ್ದೇಶಿಸಿದೆ. 

ಸರ್ಕಾರಕ್ಕೆ ಪ್ರಸ್ತಾವನೆ: ಕೆ.ಆರ್‌.ಪುರದ ಲೌರಿ ಮೆಮೋರಿಯಲ್‌ ಸ್ಕೂಲ್‌ನಿಂದ ಮಹದೇವಪುರ ನಡುವಿನ ಎರಡು ಕಿ.ಮೀ. ಮಾರ್ಗದಲ್ಲಿ ಕೆ.ಆರ್‌. ಪುರ, ಜಿ. ನಾರಾಯಣಪುರ, ವಿಜಿನಾಪುರ ಮತ್ತು ಮಹದೇವಪುರ ಗ್ರಾಮಗಳು ಬರುತ್ತವೆ. ಇಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಪ್ರತಿ ಚದರಡಿಗೆ ಬಿಎಂಆರ್‌ಸಿ 3,500ಯಿಂದ 4,000 ರೂ. ಪರಿಹಾರ ನಿಗದಿಪಡಿಸಿದೆ. ಆದರೆ, ಇಲ್ಲಿನ ನಿವಾಸಿಗಳು ಪರಿಹಾರ ಹೆಚ್ಚಳಕ್ಕೆ ಪಟ್ಟುಹಿಡಿದಿದ್ದಾರೆ. ಅನೇಕ ಸಲ ಮಾತುಕತೆ ನಡೆಸಿದರೂ ವಿಫ‌ಲವಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತ ಹೆಚ್ಚಳಕ್ಕೆ ಉದ್ದೇಶಿಸಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

2 ಕಿ.ಮೀ.; 80 ಆಸ್ತಿಗಳು: ಕೆ.ಆರ್‌.ಪುರ-ಮಹದೇಪುರ ನಡುವಿನ 2 ಕಿ.ಮೀ. ಉದ್ದದ ಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಸುಮಾರು 3 ಎಕರೆ ಜಾಗವನ್ನು ಸ್ವಾಧೀನ ಮಾಡಿಕೊಳ್ಳಬೇಕಾಗಿ ಬಂದಿದೆ. ಈ ಜಾಗದಲ್ಲಿ ಎತ್ತರಿಸಿದ ಮಾರ್ಗ ಹಾಗೂ ಒಂದು ಮೆಟ್ರೋ ನಿಲ್ದಾಣ ಬರಲಿದೆ. ಇದಕ್ಕಾಗಿ ಅಂದಾಜು 80 ಆಸ್ತಿಗಳನ್ನು ತೆರವುಗೊಳಿಸಬೇಕಾಗಿದೆ. ಭೂಸ್ವಾಧೀನಕ್ಕೆ ನಿವಾಸಿಗಳ ತಕರಾರಿಲ್ಲ.

ಆದರೆ, ನಿಗದಿಪಡಿಸಿರುವ ಪರಿಹಾರದ ಬಗ್ಗೆ ಅಪಸ್ವರ ಕೇಳಿಬಂದಿದೆ. ಇದೇ ಮೆಟ್ರೋ ಯೋಜನೆಗೆ ಅಕ್ಕಪಕ್ಕ ವಶಪಡಿಸಿಕೊಂಡ ಭೂಮಿಗೆ ಚದರಡಿಗೆ 8ರಿಂದ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಆದರೆ, ತಮಗೆ ಕೇವಲ 3,500ರಿಂದ 4,000 ಕೊಡಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ಈ ಸಂಬಂಧ ಆರೆಂಟು ತಿಂಗಳಿಂದ ಚೌಕಾಸಿ ನಡೆಯುತ್ತಲೇ ಇದೆ.

Advertisement

ಆದರೆ, ಸುಮಾರು ಎರಡು ತಿಂಗಳ ಹಿಂದೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಸಂಬಂಧಿಸಿದ ನಿಗಮವು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇನ್ನೂ ಅಂತಿಮಗೊಂಡಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ. ಮತ್ತೂಂದೆಡೆ ಇದೇ ಮಾರ್ಗದಲ್ಲಿ ಇನ್ನೂ ಒಂದು ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ವಾಧೀನಕ್ಕೆ ಮುಂದಾಗಿದೆ ಎಂಬ ಹಿನ್ನೆಲೆಯಲ್ಲಿ ಮೆಟ್ರೋ ಯೋಜನೆಗೆ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಿತ್ತು.

ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈಗ ಆ ದಾರಿ ಕೂಡ ಸುಗಮವಾಗಿದೆ ಎನ್ನಲಾಗಿದೆ. ಒಟ್ಟು 26000 ಕೋಟಿ ರೂ. ವೆಚ್ಚ 72 ಕಿ.ಮೀ. ಉದ್ದದ ಎರಡನೇ ಹಂತದ ಮೆಟ್ರೋ ಯೋಜನೆಯು ನಾಲ್ಕು ವಿಸ್ತರಿಸಿದ ಮಾರ್ಗ ಹಾಗೂ ಎರಡು ಹೊಸ ಮಾರ್ಗಗಳನ್ನು ಒಳಗೊಂಡಿದೆ. ಈ ಎಲ್ಲ ಮಾರ್ಗಗಳ ಪ್ರಗತಿ ತ್ವರಿತವಾಗಿ ಸಾಗಿದೆ.ಇನ್ನು ಹೊಸ ಎರಡು ಮಾರ್ಗಗಳಿಗೆ ಅಗತ್ಯವಿರುವ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next