Advertisement

ಮೆಟ್ರೋ ಹಾದಿಯ ದುರ್ಗಮ ಪಯಣ

12:15 PM Jul 14, 2018 | Team Udayavani |

ಬೆಂಗಳೂರು: ಮಳೆಗಾಲದ ಜತೆಗೆ “ನಮ್ಮ ಮೆಟ್ರೋ’ ಕಾಮಗಾರಿ ನಡೆಯುವ ಮಾರ್ಗಗಳು ಅಕ್ಷರಶಃ ಹೊಂಡಗಳಾಗಿವೆ.  ಕನಕಪುರ ರಸ್ತೆಯ ಜೆ.ಪಿ.ನಗರ, ಕೋಣನಕುಂಟೆ ಕ್ರಾಸ್‌, ದೊಡ್ಡಕಲ್ಲಸಂದ್ರ ಹಾಗೂ ಕನಕಪುರ ರಸ್ತೆ ಮತ್ತು ನಾಯಂಡಹಳ್ಳಿ ಜಂಕ್ಷನ್‌ನಿಂದ ರಾಜರಾಜೇಶ್ವರಿನಗರದ ದ್ವಾರದ ಸಮೀಪ ನಿರ್ಮಾಣಗೊಳ್ಳುತ್ತಿರುವ ಮೆಟ್ರೋ ನಿಲ್ದಾಣಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಈ ಮಾರ್ಗದಲ್ಲಿ ವಾಹನಗಳ ಚಾಲನೆ ತಂತಿ ಮೇಲಿನ ನಡಿಗೆ ಆಗಿದೆ. 

Advertisement

ಕಳೆದ ಅಕ್ಟೋಬರ್‌ನಲ್ಲಿ ಇದೇ ಮೈಸೂರು ರಸ್ತೆಯಲ್ಲಿ ರಾಮನಗರದ ರಾಧಾ ಎಂಬುವರು ಬಲಿ ಆಗಿದ್ದರು. ಈಗ ಮತ್ತದೆ ಸ್ಥಿತಿ ಉದ್ಭವಿಸಿದೆ. ಆದರೆ, ಬಿಎಂಆರ್‌ಸಿ ಮಾತ್ರ ಈ ವಿಚಾರದಲ್ಲಿ ನಿರಮ್ಮಳವಾಗಿದೆ. ಬಿಬಿಎಂಪಿ ತನಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದರೆ, ನಿಲ್ದಾಣ ನಿರ್ಮಾಣ ಮಾತ್ರ ತನ್ನ ಕೆಲಸ ಎಂಬ ಧೋರಣೆ ಅನುಸರಿಸುತ್ತಿದೆ. ಗುತ್ತಿಗೆದಾರರು ಮೆಟ್ರೋ ಕಾಮಗಾರಿಯಲ್ಲಿ “ಬ್ಯುಸಿ’ ಆಗಿದ್ದಾರೆ. ಇದೆಲ್ಲದರ ನಡುವೆ ಮೈಸೂರು ರಸ್ತೆ “ಡೇಂಜರ್‌ ಝೋನ್‌’ ಆಗಿ ಮಾರ್ಪಟ್ಟಿದೆ. 

ತಗ್ಗಿದ ವಾಹನಗಳ ವೇಗ: ಅಷ್ಟೇ ಅಲ್ಲ, ಅತಿ ಹೆಚ್ಚು ವಾಹನದಟ್ಟಣೆ ಇರುವ ಮಾರ್ಗಗಳಲ್ಲಿ ನಾಯಂಡಹಳ್ಳಿ ಜಂಕ್ಷನ್‌ ಮತ್ತು ಕನಕಪುರ ರಸ್ತೆ ಕೂಡ ಸೇರಿವೆ. ಹದಗೆಟ್ಟ ರಸ್ತೆಗಳು ಮತ್ತು ಕಾಮಗಾರಿ ಪ್ರಗತಿಯಲ್ಲಿರುವುದರಿಂದ ವಾಹನಗಳ ವೇಗ ಕೂಡ ಕುಸಿದಿದೆ. ನಗರದ ವಾಹನಗಳ ವೇಗ ಗಂಟೆಗೆ 17 ಕಿ.ಮೀ. ಇದ್ದರೆ, ಈ ಮಾರ್ಗಗಳಲ್ಲಿ 15ರಿಂದ 16 ಕಿ.ಮೀ. ಇದೆ. 

ಅದರಲ್ಲೂ ನಾಯಂಡಹಳ್ಳಿ, ರಾಜರಾಜೇಶ್ವರಿನಗರ ಗೇಟ್‌ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಮುಂಭಾಗದ ನಿಲ್ದಾಣಗಳ ನಡುವಿನ ಮಾರ್ಗವಂತೂ ಸಾಕಷ್ಟು ಹಾಳಾಗಿದೆ. ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳು, ಯಂತ್ರಗಳನ್ನು ಇದೇ ರಸ್ತೆಯಲ್ಲಿ ಕೊಂಡೊಯ್ಯಲಾಗುತ್ತದೆ. ಭಾರಿ ಗಾತ್ರದ ಸಲಕರಣೆಗಳ ಸಾಗಣೆಯಿಂದ ರಸ್ತೆ ಡಾಂಬರು ಕಿತ್ತುಹೋಗಿದೆ. ಈ ಮಧ್ಯೆ ಮಳೆಯಿಂದ ಆ ಗುಂಡಿಗಳಲ್ಲಿ ನೀರು ತುಂಬಿದೆ. ಪರಿಣಾಮ ವಾಹನ ಸವಾರರಿಗೆ ಮೃತ್ಯುಕೂಪಗಳಂತೆ ಕಾದುಕುಳಿತಿವೆ.

ಮೆಟ್ರೋ ಕಾಮಗಾರಿ ಕಳೆದ ಎರಡೂವರೆ ವರ್ಷಗಳಿಂದ ಇಲ್ಲಿ ಪ್ರಗತಿಯಲ್ಲಿದೆ. ಆದರೆ, ಆಮೆಗತಿಯ ಕಾಮಗಾರಿಯ ಎಫೆಕ್ಟ್ ಸ್ಥಳೀಯರು ಮತ್ತು ಆ ಮಾರ್ಗದ ವಾಹನ ಸವಾರರ ಮೇಲೆ ಆಗುತ್ತಿದೆ. ರಸ್ತೆಯಲ್ಲಿ ದೂಳು ಉಂಟುಮಾಡಬಾರದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ. ನಾಯಂಡಹಳ್ಳಿ ಜಂಕ್ಷನ್‌ ಮಾತ್ರವಲ್ಲ; ಈ ಮಾರ್ಗದ ಉಳಿದೆರಡು ನಿಲ್ದಾಣಗಳ ರಸ್ತೆ ಸ್ಥಿತಿಯೂ ಭಿನ್ನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.  

Advertisement

ಅಲ್ಲದೆ, ಮೈಸೂರು ರಸ್ತೆಯಿಂದ ಕಾರ್ಪೋರೇಷನ್‌ಗೆ ತೆರಳುವ ಮಾರ್ಗದಲ್ಲಿ ಅಲ್ಲಲ್ಲಿ ರಸ್ತೆಗಳು ಗುಂಡಿಮಯವಾಗಿವೆ. ಮೈಸೂರು ರಸ್ತೆಯಿಂದ ಚಾಮರಾಜಪೇಟೆಗೆ ಹೋಗಲು ಕೆ.ಆರ್‌. ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಫ್ಲೈಓವರ್‌ ಕೆಳಗಡೆಯಿಂದ ಬರಬೇಕು. ಈ ರಸ್ತೆಯಲ್ಲಿ ಕೂಡ ಗುಂಡಿಗಳು ರಾರಾಜಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next