ಬೆಂಗಳೂರು: ಬಹುನಿರೀಕ್ಷಿತ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಮೆಟ್ರೋ ಸಂಚಾರಕ್ಕೆ ಗುರುವಾರ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದು, ಜೂನ್ 18ರ ಬೆಳಿಗ್ಗೆಯಿಂದ ಉದ್ದೇಶಿತ ಸಂಪಿಗೆ ರಸ್ತೆ-ಯಲಚೇನಹಳ್ಳಿ ನಡುವೆ ಮೆಟ್ರೋ ಸಾರ್ವಜನಿಕ ಸೇವೆ ಆರಂಭಗೊಳ್ಳಲಿದೆ.
ಜೂನ್ 17ರಂದು ಸಂಜೆ 6ಕ್ಕೆ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಬಾಕಿ ಇರುವ 12 ಕಿ.ಮೀ. ಉದ್ದದ ಮೆಟ್ರೋ ರೈಲು ಸಂಚಾರಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚಾಲನೆ ನೀಡಲಿದ್ದಾರೆ. ಬಹುತೇಕ ವಿಧಾನಸೌಧ ಮುಂಭಾಗದಲ್ಲೇ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲು ಉದ್ದೇಶಿಸಲಾಗಿದೆ. ಆದರೆ, ಸಾರ್ವಜನಿಕರಿಗೆ ಮಾತ್ರ 18ರಿಂದ “ಸಂಚಾರ ಭಾಗ್ಯ’ ಸಿಗಲಿದೆ.
ದರ ನಿಗದಿ ಆಗಿಲ್ಲ; ಎಂಡಿ: ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ದೊರಕಿದೆ ಹಾಗೂ ರಾಷ್ಟ್ರಪತಿಗಳೂ ಉದ್ಘಾಟನೆಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಜೂನ್ 17ರ ಸಂಜೆ 6ಕ್ಕೆ ಉತ್ತರ-ದಕ್ಷಿಣ ಕಾರಿಡಾರ್‌ನ ಮಾರ್ಗ ಉದ್ಘಾಟನೆಗೊಳ್ಳಲಿದೆ. ಆದರೆ, ವಾಣಿಜ್ಯ ಸಂಚಾರ ಸೇವೆ 18ರಿಂದ ಆರಂಭಗೊಳ್ಳಲಿದೆ. ಪ್ರಯಾಣ ದರವನ್ನು ಇನ್ನೂ ನಿಗದಿಪಡಿಸಿಲ್ಲ. ಉದ್ಘಾಟನೆಗೊಳ್ಳಲಿರುವ ಮಾರ್ಗದಲ್ಲಿ ಮೊದಲ ದಿನವೇ ಒಂದು ಲಕ್ಷ ಜನ ಪ್ರಯಾಣಿಸುವ ನಿರೀಕ್ಷೆಯಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ ಹೇಳಿದ್ದಾರೆ.
ಮೇ ಕೊನೆಯ ವಾರದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ಈ ಮಾರ್ಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದರ ವಿಶ್ಲೇಷಣೆ ಮಾಡಿ, ಸಾರ್ವಜನಿಕ ಸಂಚಾರ ಆರಂಭಿಸಲು ಬೇಕಾದ ಪ್ರಮಾಣಪತ್ರವನ್ನು ಗುರುವಾರ ನಿಗಮಕ್ಕೆ ನೀಡಿದ್ದಾರೆ. ಅದರಲ್ಲಿ ಪ್ರಯಾಣಿಕರಿಗೆ ಕೆಲವು ಮೂಲಸೌಕರ್ಯ ಹೆಚ್ಚಿಸಲು ಸೂಚಿಸಿದ್ದಾರೆ. ಅದರಂತೆ ಒಂದೆರಡು ದಿನಗಳಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ಪ್ರಮುಖವಾದ ಯಾವುದೇ ಸಲಹೆ-ಸೂಚನೆಗಳು ಸಿಆರ್‌ಎಸ್ ತಂಡ ನೀಡಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಮೊದಲ ಹಂತ ಪೂರ್ಣ: ಒಟ್ಟಾರೆ 24.4 ಕಿ.ಮೀ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಸದ್ಯ 12.4 ಕಿ.ಮೀ. ಉದ್ದದ ನಾಗಸಂದ್ರ-ಸಂಪಿಗೆರಸ್ತೆ ನಡುವೆ ಮೆಟ್ರೋ ವಾಣಿಜ್ಯ ಸಂಚಾರ ಲಭ್ಯವಿದೆ. 4 ಕಿ.ಮೀ. ಜೋಡಿ ಸುರಂಗ ಮಾರ್ಗ ಸೇರಿದಂತೆ 12 ಕಿ.ಮೀ. ಬಾಕಿ ಇದೆ. ಈ ಮಾರ್ಗವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಸರ್ಕಾರ ಈ ಹಿಂದೆ ನಿಗಮಕ್ಕೆ ಏಪ್ರಿಲ್ 15ರ ಗಡುವು ವಿಧಿಸಿತ್ತು. ನಂತರ ಮೇ ತಿಂಗಳಿಗೆ ಗಡುವು ವಿಸ್ತರಣೆ ಆಯಿತು. ಅಂತಿಮವಾಗಿ ಜೂನ್ 18ಕ್ಕೆ ಸೇವೆ ಲಭ್ಯವಾಗುತ್ತಿದೆ. ಈ ಮೂಲಕ 42.3 ಕಿ.ಮೀ. ಉದ್ದದ ಮೊದಲ ಹಂತ ಪೂರ್ಣಗೊಂಡಂತಾಗಲಿದೆ.
ಈ ಮಧ್ಯೆ ಕಾರ್ಯಕ್ರಮ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆದಿವೆ. ಉದ್ಘಾಟನೆಗೂ ಮುನ್ನಾ ದಿನ ಅಂದರೆ ಜೂನ್ 16ರಂದು ಈ ಮಾರ್ಗದಲ್ಲಿ ಮತ್ತೂಂದು ಸುತ್ತಿನಲ್ಲಿ ಮೆಟ್ರೋ ರೈಲು ಪರೀಕ್ಷಾರ್ಥವಾಗಿ ಸಂಚರಿಸಲಿದೆ. ಈಗಾಗಲೇ ಲಾಡುಗಳಿಗೆ ಟೆಂಡರ್ ನೀಡಲಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಅಥವಾ ವಿಧಾನಸೌಧ ಮುಂಭಾಗದಲ್ಲಿ ಮೆಟ್ರೋಗೆ ಚಾಲನೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
“ನಮ್ಮ ಮೆಟ್ರೋ’ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಕೇಂದ್ರ ರೈಲ್ವೆ ಸುರಕ್ಷಾ ಆಯುಕ್ತರು ಸುರಕ್ಷತಾ ಪ್ರಮಾಣಪತ್ರ ನೀಡಿದ್ದಾರೆ. ಜೂ.17ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೆಟ್ರೋ ರೈಲು ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜೂ.18ರಿಂದ ರೈಲು ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.
-ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ