Advertisement

ತುಮಕೂರಿಗೆ ಮೆಟ್ರೋ?: ಡಿಸಿಎಂ ಸುಳಿವು

07:12 AM Jun 29, 2019 | Team Udayavani |

ಬೆಂಗಳೂರು: ತುಮಕೂರಿಗೆ ಉಪನಗರ ರೈಲು ಯೋಜನೆ ಜತೆಗೆ ಮೆಟ್ರೋ ಕೂಡ ಬರಲಿದೆ. ಈ ಮೂಲಕ ತುಮಕೂರಿನಿಂದ ರಾಜಧಾನಿಯನ್ನು ಯಾವುದೇ ಸಂಚಾರದಟ್ಟಣೆ ಕಿರಿಕಿರಿ ಇಲ್ಲದೆ, ಕೆಲವೇ ಹೊತ್ತಿನಲ್ಲಿ ತಲುಪಬಹುದು.

Advertisement

ಸ್ವತಃ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಈ ವಿಷಯ ತಿಳಿಸಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್ಕೆಸಿಸಿಐ) ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರವು ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡುತ್ತಿದೆ. ಈ ಮೂಲಕ ದೂರದ ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸುವ ಗುರಿ ಹೊಂದಿದೆ.

ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ತುಮಕೂರಿನಲ್ಲಿ ಏಷಿಯಾದಲ್ಲೇ ಅತಿದೊಡ್ಡ ಕೈಗಾರಿಕಾ ಹಬ್‌ ತಲೆಯೆತ್ತಲಿದೆ. ಇದಕ್ಕೆ ಪೂರಕವಾಗಿ ರಾಜ್ಯ ರಾಜಧಾನಿಯಿಂದ ಅಲ್ಲಿಗೆ ಮೆಟ್ರೋ ಮತ್ತು ಉಪನಗರ ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದರು.

ಎರಡನೇ ಹಂತದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ ನಿರ್ಮಾಣಗೊಳ್ಳಲಿರುವ “ನಮ್ಮ ಮೆಟ್ರೋ’ ರೈಲು ಮಾರ್ಗವನ್ನು ಮುಂದಿನ ಹಂತಗಳಲ್ಲಿ ತುಮಕೂರುವರೆಗೆ ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

Advertisement

ಶೀಘ್ರ ನೂತನ ಕೈಗಾರಿಕಾ ನೀತಿ: ಪ್ರಸಕ್ತ ಸಾಲಿಗೆ ಕೈಗಾರಿಕಾ ನೀತಿ ಕೊನೆಗೊಳ್ಳಲಿದೆ. ಬೆನ್ನಲ್ಲೇ 2019-24ರ ಅವಧಿಯ ಕೈಗಾರಿಕಾ ಯೋಜನೆ ರೂಪಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಕಲ್ಪಿಸುವುದು ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುತ್ತಿದೆ.

ಈ ಮೂಲಕ ನಗರಗಳಿಗೆ ವಲಸೆ ಪ್ರಮಾಣ ತಪ್ಪಿಸಲಾಗುವುದು. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಜೀನ್ಸ್‌, ಕೊಪ್ಪಳದಲ್ಲಿ ಗೊಂಬೆ ತಯಾರಿಕೆ ಸೇರಿ ಎರಡನೇ ಹಂತದ ನಗರಗಳಲ್ಲಿ ಕ್ಲಸ್ಟರ್‌ಗಳನ್ನು ರೂಪಿಸಿ, ಉದ್ಯಮಗಳ ಬೆಳವಣಿಗೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next