ಬೆಂಗಳೂರು: ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್‌ಶಿಪ್‌ಗೆ ಸಂಪರ್ಕ ಕಲ್ಪ ಇಸುವ ನಮ್ಮ ಮೆಟ್ರೊ ಎರಡನೇ ಹಂತದ ಮಾರ್ಗದಲ್ಲಿ ಬರುವ ತಾತಗುಣಿ ದೇವಿಕಾರಾಣಿ ರೋರಿಕ್ ಎಸ್ಟೇಟ್‌ನಲ್ಲಿ ಡಿಪೋ ನಿರ್ಮಾಣಕ್ಕೆ ನಿರ್ಧರಿಸಿರುವುದಾಗಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲ ತಿಳಿಸಿದರು.
ಉದ್ದೇಶಿತ ಮಾರ್ಗದಲ್ಲಿ ಆನೆ ಕಾರಿಡಾರ್ ಹಾದು ಹೋಗಲಿದ್ದು, ಅಲ್ಲಿ ಡಿಪೋ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡದ ಕಾರಣ ದೇವಿಕಾರಾಣಿ ರೋರಿಕ್ ಎಸ್ಟೇಟ್‌ನಲ್ಲಿ ಡಿಪೋ ನಿರ್ಮಿಸಲಿದ್ದು, ಎಸ್ಟೇಟ್‌ನ ಪ್ರವೇಶ ದ್ವಾರದಲ್ಲಿ ನಿಲ್ದಾಣ ಬರಲಿದೆ ಎಂದು ಸ್ಪಷ್ಟಪಡಿಸಿದರು. ಶುಕ್ರವಾರ 6.52 ಕಿ.ಮೀ. ಉದ್ದದ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್ ಮಾರ್ಗದ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.
“ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್‌ಶಿಪ್‌ಗೆ ಹೋಗುವ ಮೆಟ್ರೊ ರೈಲು, ಅಲ್ಲಿಂದ ರೋರಿಕ್ ಎಸ್ಟೇಟ್ ಬಳಿಯ ಡಿಪೋಗೆ ತೆರಳಿದೆ. ಇದಕ್ಕೆ ಖಾಸಗಿಯವರಿಗೆ ಸೇರಿದ 15 ಎಕರೆ ಜಾಗ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಡಿಪೋದಲ್ಲಿ ರೈಲಿನ ವಾಟರ್ ವಾಶ್ ಹಾಗೂ ಪರೀಕ್ಷೆ ಮತ್ತಿತರ ಚಟುವಟಿಕೆ ನಡೆಯಲಿದೆ. ದುರಸ್ತಿ ಕಾರ್ಯ ಮಾತ್ರ ಪೀಣ್ಯ ಡಿಪೋದಲ್ಲಿಯೇ ಆಗಲಿದೆ ಎಂದು ಖರೋಲ ತಿಳಿಸಿದರು.
2018ರ ಅಂತ್ಯಕ್ಕೆ ಪೂರ್ಣ: ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, “ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್‌ಶಿಪ್ ನಡುವಿನ ಮಾರ್ಗದ ಸಿವಿಲ್ ಕಾಮಗಾರಿಗಳು 2018ರ ಮಾರ್ಚ್‌ಗೆ ಪೂರ್ಣಗೊಳ್ಳಲಿದ್ದು, ಅದೇ ವರ್ಷ ಡಿಸೆಂಬರ್ ಅಂತ್ಯಕ್ಕೆ ಸೇವೆಗೆ ಅಣಿಯಾಗಲಿದೆ,’ ಎಂದು ಹೇಳಿದರು.
“ಒಟ್ಟು 508.86 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 111 ಪಿಲ್ಲರ್‌ಗಳನ್ನು ಅಳವಡಿಸಲಾಗಿದೆ. ಇದರ ಮೇಲೆ ಸೆಗ್‌ಮೆಂಟ್ ಅಳವಡಿಕೆ, ಎತ್ತರಿಸಿದ ಮಾರ್ಗದ ಕಾಮಗಾರಿ ಸೇರಿದಂತೆ ಎಲ್ಲ ಸಿವಿಲ್ ಕಾಮಗಾರಿಗಳು 2018ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದ್ದು, ಬಳಿಕ ಹಳಿ ಅಳವಡಿಕೆ, ಕೇಬಲ್ ಹಾಕುವುದು ಸೇರಿದಂತೆ ಉಳಿದ ಕಾಮಗಾರಿಗಳು ಮುಗಿದು ಡಿಸೆಂಬರ್‌ನಲ್ಲಿ ಮಾರ್ಗ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದೆ ಎಂದರು.
ಕೆಐಎಎಲ್ ಹೂಡಿಕೆ ಸಾಧ್ಯತೆ: ವಿಮಾನ ನಿಲ್ದಾಣದ ವಿಸ್ತೃತ ಯೋಜನಾ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ವಿವರಿಸಿ ಚರ್ಚಿಸಬೇಕಿದೆ. ಈ ಯೋಜನೆಯಲ್ಲೂ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುವುದು. ಕೆಐಎಎಲ್ ಕೂಡಾ ಹೂಡಿಕೆ ಮಾಡುವ ಸಾಧ್ಯತೆ ಇದ್ದು, ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಜಾರ್ಜ್ ತಿಳಿಸಿದರು.
ಇದಲ್ಲದೇ ಮೆಟ್ರೊ ಯೋಜನೆಗೆ ಕೆ.ಆರ್.ಪುರ-ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗದಲ್ಲಿ ನಿಲ್ದಾಣವನ್ನು ದತ್ತು ಪಡೆಯಲು ಎಂಬಸ್ಸಿ ಗ್ರೂಪ್ ಹಾಗೂ ಬಾಗ್‌ಮನೆ ಟೆಕ್‌ಪಾರ್ಕ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನೂ ಮೂರು ಕಂಪನಿಗಳು ಕೈಜೋಡಿಸುವ ನಿರೀಕ್ಷೆಯಿದೆ. ಇದೇ ರೀತಿ ಆರ್‌ಎಂಸಿ, ಇಂಟೆಲ್ ಹಾಗೂ ಪ್ರಸ್ಟೀಜ್ ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿಸಿವೆ ಎಂದು ಅವರು ಮಾಹಿತಿ ನೀಡಿದರು.