ಬೆಂಗಳೂರು: “ನಮ್ಮ ಮೆಟ್ರೋ’ ಸಿಬ್ಬಂದಿ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐ ಎಸ್‌ಎಫ್) ಸಿಬ್ಬಂದಿ ನಡುವೆ ಈಚೆಗೆ ನಡದು, ಮೆಟ್ರೋ ಸೇವೆಯಲ್ಲಿಯೇ ವ್ಯತ್ಯಯ ಉಂಟಾಗಿದ್ದ ಪ್ರಕರಣ ಹಸಿಯಾಗಿರುವಾಗಲೇ ಹೊಸಹಳ್ಳಿಯ ಬಾಲಗಂಗಾಧರನಾಥ ಮೆಟ್ರೋ ನಿಲ್ದಾಣದಲ್ಲಿ ಪಾನಮತ್ತ ಹೆಡ್‌ಕಾನ್‌ಸ್ಟೆàಬಲ್‌ವೊಬ್ಬರು ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ವಿಮಾನ ನಿಲ್ದಾಣ ಸಂಚಾರ ಠಾಣೆ ಹೆಡ್‌ಕಾನ್‌ಸ್ಟೆಬಲ್ ಆಗಿರುವ ವೀರಣ್ಣ ಎಂಬುವರು ಮೆಟ್ರೋ ಭದ್ರತಾ ಸಿಬ್ಬಂದಿ ಗಜಾನಂದ ಭೀಮಪ್ಪ ಕಿಲಾರಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ರಾತ್ರಿ 8.30ರ ಸುಮಾರಿಗೆ ಪಾನಮತ್ತರಾಗಿ ನಿಲ್ದಾಣ ಪ್ರವೇಶಿಸಿದ ವೀರಣ್ಣ ಅವರನ್ನು ಭದ್ರತಾ ಸಿಬ್ಬಂದಿ ತಡೆದು, ಮದ್ಯ ಸೇವನೆ ಮಾಡಿದವರು ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದ ವೀರಣ್ಣ, ತಪಾಸಣೆಗೆ ಒಳಗಾಗದೆ ಟಿಕೆಟ್ ಕೌಂಟರ್‌ನತ್ತ ನುಗ್ಗಿದ್ದಾರೆ.
ಗಲಾಟೆ ನಡೆಯುತ್ತಿರುವ ವಿಷಯ ತಿಳಿದು ನಿಲ್ದಾಣದ ನಿಯಂತ್ರಕರು ಸ್ಥಳಕ್ಕೆ ಧಾವಿಸಿದರು. ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀರಣ್ಣ ನಿಲ್ದಾಣದ ಪಾವತಿ ಪ್ರದೇಶಕ್ಕೆ ಹೋಗಲು ಯತ್ನಿಸಿದರು. ಆಗ ತಡೆಯಲು ಮುಂದಾದಾಗ ಕಿಲಾರಿ ಅವರನ್ನು ವೀರಣ್ಣ ಒದ್ದಿದ್ದಾರೆ. ಈ ವೇಳೆ ಕಿಲಾರಿ ಅವರು ಕುಸಿದು ಬಿದ್ದರು ಎಂದು ಮೆಟ್ರೋ ಸಿಬ್ಬಂದಿ ತಿಳಿಸಿದರು.
ಆಗ ಪೊಲೀಸರು ವೀರಣ್ಣ ಅವರನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ ಪಾನಮತ್ತರಾಗಿರುವುದು ಧೃಡಪಟ್ಟಿದೆ. ಈ ಮಧ್ಯೆ ಹಲ್ಲೆಗೊಳಗಾದ ಕಿಲಾರಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಗುಣಮುಖರಾಗಿ ಕರ್ತವ್ಯಕ್ಕೆ ಹಿಂತಿರುಗಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹಲ್ಲೆ ನಡೆಸಿದ ವಿಮಾನನಿಲ್ದಾಣ ಸಂಚಾರ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ವೀರಣ್ಣ ವಿರುದ್ಧ ಜೀವ ಬೆದರಿಕೆ, ಅಕ್ರಮ ಬಂಧನ, ಹಲ್ಲೆ ಹಾಗೂ ಶಾಂತಿ ಕದಡಿದ ಆರೋಪಗಳಡಿ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಅನುಚೇತ್, “ಹಲ್ಲೆ ನಡೆಸಿದ ಮುಖ್ಯಪೇದೆ ಏರ್‌ಪೋರ್ಟ್ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 20 ದಿನಗಳಿಂದ ರಜೆ ಪಡೆದುಕೊಂಡಿದ್ದಾರೆ. ಘಟನೆ ನಡೆದ ದಿನ ಅಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ. ಮದ್ಯ ಸೇವಿಸಿ ಪ್ರವೇಶಿದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ,’ ಎಂದು ತಿಳಿಸಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಹೊಸಹಳ್ಳಿ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ಪಾನಮತ್ತರಾಗಿ ಹೆಡ್‌ಕಾನ್‌ಸ್ಟೆàಬಲ್‌ವೊಬ್ಬರು ಹಲ್ಲೆ ನಡೆಸಿದ್ದರು. ಅವರ ವಿರುದ್ಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
-ಯು.ಎ. ವಸಂತರಾವ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿಎಂಆರ್‌ಸಿ