Advertisement
ನಿಲ್ದಾಣಗಳಲ್ಲಿ ಬಂದಿಳಿಯುವವರಿಗೆ ರಸ್ತೆ ದಾಟಲು ಬೇಕಾಗುವ ಸಬ್‌ವೇ, ಸ್ಕೈವಾಕ್‌ನಂತಹ ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ಇನ್ನೂ ಟೆಂಡರ್ ಹಂತದಲ್ಲೇ ಇವೆ. ಇದರಿಂದ ಅತ್ಯಧಿಕ ವಾಹನದಟ್ಟಣೆ ಇರುವ ರಸ್ತೆಯನ್ನು ಜನ ಕೈಯಲ್ಲಿ ಜೀವಹಿಡಿದುಕೊಂಡು ದಾಟಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
Related Articles
Advertisement
ಟೆಂಡರ್ ಹಂತದಲ್ಲೇ ನಿಂತ ಕಾಮಗಾರಿ: ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ 9.61 ಕೋಟಿ ರೂ. ವೆಚ್ಚದಲ್ಲಿ ಸಬ್‌ವೇಗಳನ್ನು ನಿರ್ಮಿಸಲು ಬಿಎಂಆರ್‌ಸಿ ಈ ಹಿಂದೆಯೇ ನಿರ್ಧರಿಸಿ, ಟೆಂಡರ್ ಕೂಡ ಕರೆದಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಸಮಸ್ಯೆಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಇನ್ನು ಪೀಣ್ಯ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದ ನಿಲ್ದಾಣಗಳಿಗೆ ಒಂದು ಕಡೆ ಮಾತ್ರ ಆಗಮನ ಮತ್ತು ನಿರ್ಗಮನ ದ್ವಾರಗಳಿವೆ.
ಈ ಮಧ್ಯೆ ನೂರಾರು ವಾಹನಗಳು ಒಮ್ಮೆಲೆ ನುಗ್ಗಿಬರುತ್ತವೆ. ಮತ್ತೂಂದೆಡೆ ಎರಡೂ ನಿಲ್ದಾಣಗಳ ಆಸುಪಾಸು ಎಲ್ಲಿಯೂ ಟ್ರಾಫಿಕ್ ಸಿಗ್ನಲ್‌ಗಳು, ಅಂಡರ್‌ಪಾಸ್‌ಗಳು ಅಥವಾ ಎತ್ತರಿಸಿದ ಪಾದಚಾರಿ ಮಾರ್ಗಗಳೂ ಇಲ್ಲ. ಆದ್ದರಿಂದ ಪ್ರಯಾಣಿಕರಿಗೆ ಇರುವ ಏಕೈಕ ಆಯ್ಕೆ ವಾಹನಗಳು ಓಡಾಡುವ ಈ ರಸ್ತೆ ದಾಟುವುದು. ಕೊನೆಪಕ್ಷ ಎತ್ತರಿಸಿದ ಪಾದಚಾರಿ ಮಾರ್ಗ ಕಲ್ಪಿಸಿದರೂ ನಿರಾತಂಕವಾಗಿ ಮೆಟ್ರೋ ಸೌಲಭ್ಯ ಪಡೆಯಬಹುದು ಎಂಬುದು ಜನರ ಒತ್ತಾಯ.
ಸ್ಕೈವಾಕ್‌ಗಾಗಿ ಮುಸುಕಿನ ಗುದ್ದಾಟ: ಯಶವಂತಪುರ ರೈಲು ನಿಲ್ದಾಣ ಮತ್ತು ಮೆಟ್ರೋ ರೈಲು ನಿಲ್ದಾಣಗಳ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ “ಸ್ಕೈವಾಕ್’ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡೂ ಇಲಾಖೆಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲೇ ಕಾಲಹರಣ ಮಾಡುತ್ತಿವೆ.
ಕೇವಲ 40ರಿಂದ 50 ಮೀ. ಉದ್ದದ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ತಗಲುವ ವೆಚ್ಚ 50 ಲಕ್ಷದಿಂದ 1 ಕೋಟಿ ರೂ. ಇದರಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ದೆಹಲಿ, ಹೌರಾ, ದಾದರ್, ಹುಬ್ಬಳ್ಳಿ, ವಾಸ್ಕೋ, ಮಂಗಳೂರು, ಹಾಸನ, ಮೈಸೂರು ಮತ್ತಿತರ ಕಡೆಗೆ ರೈಲುಗಳಿರುವುದೇ ಯಶವಂತಪುರ ನಿಲ್ದಾಣದಿಂದ.
ಹಾಗಾಗಿ 80 ಸಾವಿರ ಪ್ರಯಾಣಿಕರ ಸಾಮರ್ಥಯ ಇರುವ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು, ಎದುರಿಗಿರುವ ಮೆಟ್ರೋ ಏರಲು ರೈಲು ನಿಲ್ದಾಣದಲ್ಲಿನ ಮೇಲ್ಸೇತುವೆ ಹತ್ತಿಳಿದು, ರಸ್ತೆ ದಾಟಿ ಮೆಟ್ರೋ ನಿಲ್ದಾಣ ಏರಬೇಕಾಗುತ್ತದೆ.
ದೂರದ ಊರುಗಳಿಂದ ಬರುವ ಅಥವಾ ಹೋಗಲು ಲಗೇಜುಗಳೊಂದಿಗೆ ಆಗಮಿಸುವ ಪ್ರಯಾಣಿಕರಿಗೆ ಇದು ಕಿರಿಕಿರಿಯಾಗಿ ಪರಿಣಮಿಸುತ್ತದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ 10ನೇ ಪ್ಲಾಟ್‌ಫಾರಂ ಮತ್ತು ಮೆಟ್ರೋ ನಿಲ್ದಾಣದ ನಡುವೆ ಕೂಡ ಜನ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.
ಸಬ್‌ವೇ ಅಥವಾ ಸ್ಕೈವಾಕ್‌ಗಳೆಲ್ಲಾ ಹೆಚ್ಚುವರಿ ಕಾಮಗಾರಿಗಳಾಗಿವೆ. ಯೋಜನೆ ಪೂರ್ಣಗೊಳಿಸುವುದು ನಮ್ಮ ಮೊದಲ ಗುರಿಯಾಗಿತ್ತು. ಅದನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಹೆಚ್ಚುವರಿ ಕಾಮಗಾರಿಗಳನ್ನೂ ಮಾಡಿ ಮುಗಿಸಲಾಗುವುದು.-ವಿಜಯಕುಮಾರ್ ಧೀರ್, ಬಿಎಂಆರ್‌ಸಿ ನಿರ್ದೇಶಕ (ಪ್ರಾಜೆಕ್ಟ್ ಆಂಡ್ ಪ್ಲಾನಿಂಗ್)