ಬೆಂಗಳೂರು: ವಿಧಾನಸಭಾ ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಜನಸಾಮಾನ್ಯರನ್ನು ನಿತ್ಯ ಕಾಡುವ ಸಮಸ್ಯೆ ಹಾಗೂ ಅಭಿವೃದ್ಧಿ ವಿಚಾರಗಳು ಹಿಂದಕ್ಕೆ ಸರಿಯುತ್ತಿದೆ. ಹದ ತಪ್ಪಿದ ಮಾತುಗಳು ಹಾಗೂ ಹೇಳಿಕೆಗಳೇ ವಿಜೃಂಭಿಸಲಾರಂಭಿಸಿವೆ. ರಾಜಕೀಯ ನಾಯಕರ ಈ ಮಾತುಗಳು ಮುಂದಿನ ದಿನಗಳಲ್ಲಿ ಚುನಾವಣಾ ವಸ್ತುವಾಗುವ ಲಕ್ಷಣಗಳು ಕಾಣಿಸುತ್ತಿವೆ.
ಲಿಂಗಾಯತ ಸಿಎಂ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆ ಸೃಷ್ಟಿಸಿದ ವಿವಾದದಿಂದ ಕಾಂಗ್ರೆಸ್ ಚೇತರಿಸಿಕೊಳ್ಳುವುದಕ್ಕೆ ಮುನ್ನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರ ಬಗ್ಗೆ ಮಾಡಿರುವ ಟೀಕೆ ಮತ್ತೂಂದು ವಾಗ್ಯುದ್ಧಕ್ಕೆ ಕಾರಣವಾಗಿದೆ.
ಖರ್ಗೆ ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೂ ಬಿಜೆಪಿ ಈ ವಿಚಾರವನ್ನು ಜೀವಂತವಾಗಿಡುವುದಕ್ಕೆ ಎಲ್ಲ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಬಿಜೆಪಿಯ ಹಿರಿಯ ನಾಯಕರು ಖರ್ಗೆ ವಿರುದ್ಧ ಮುಗಿ ಬಿದ್ದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಅಶ್ವತ್ಥನಾರಾಯಣ, ವಿ.ಸುನಿಲ್ ಕುಮಾರ್, ಸಂಸದ ಪ್ರತಾಪ ಸಿಂಹ ಸೇರಿ ಬಿಜೆಪಿಯ ಪ್ರಮುಖ ನಾಯಕರು ಖರ್ಗೆ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ವಿಷಕನ್ಯೆ: ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು “ವಿಷಕನ್ಯೆ”, ಚೀನಾ ಹಾಗೂ ಪಾಕಿಸ್ತಾನದ ಏಜೆಂಟ್ ಎಂದು ಟೀಕಿಸಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ನಾಯಕರನ್ನು ಕೆರಳಿಸಿದ್ದು, “ಸೋನಿಯಾ ಗಾಂಧಿ ಎರಡು ಬಾರಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ನನ್ನ ತಾಯಿಯನ್ನು ನಿಂದಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ಯತ್ನಾಳ್ ನಾಲಿಗೆಗೆ ಯಾರು ಏನು ಮಾಡುತ್ತಾರೋ ಗೊತ್ತಿಲ್ಲ. ಯತ್ನಾಳ್‌ನನ್ನು ಪಕ್ಷದಿಂದ ಉಚ್ಛಾಟಿಸಬೇಕು. ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಈ ಬಗ್ಗೆ ಕ್ಷಮೆ ಯಾಚಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಖರ್ಗೆ ಬೆಂಬಲಕ್ಕೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್ ಧಾವಿಸಿದ್ದಾರೆ. ವಿಷಾದ ವ್ಯಕ್ತಪಡಿಸಿದ ಬಳಿಕವೂ ಬಿಜೆಪಿ ಈ ಬಗ್ಗೆ ಅನಗತ್ಯ ವಿವಾದ ಸೃಷ್ಟಿ ಮಾಡುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರೆ, ಬಿಜೆಪಿಯ ಹುಟ್ಟಿನಲ್ಲೇ ವಿಷ ಇದೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ. ಹೀಗಾಗಿ ಈ ಹೇಳಿಕೆ ವಿವಾದ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.
ಇದರಿಂದಾಗಿ ಇಷ್ಟು ದಿನಗಳ ಕಾಲ ಚರ್ಚೆಯ ವಸ್ತುವಾಗಿದ್ದ ಭ್ರಷ್ಟಾಚಾರ, ದುರಾಡಳಿತ ವಿಚಾರ ಹಿಂದಕ್ಕೆ ಸರಿದಿದೆ. ಬೆಂಕಿ ಕಿಡಿಯಂಥ ಮಾತುಗಳು, ಜಾತಿ, ಹಣ, ಪ್ರಾದೇಶಿಕ ಹೇಳಿಕೆಗಳು ಮುನ್ನೆಲೆಗೆ ಬರುತ್ತಿವೆ.