Advertisement
ಟಿಕೆಟ್ ಹಂಚಿಕೆ ವಿಷಯದಲ್ಲಿ ತೀವ್ರ ಅಸಮಾಧಾನಕ್ಕೆ ಗುರಿಯಾಗಿ ಪಕ್ಷಾಂತರ ರಾಜಕಾರಣದ ಮೂಲಕ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿ ದೊಡ್ಡ ಸುದ್ದಿ ಮಾಡಿದ್ದ ಜಿಲ್ಲೆ ಈಗ ಐವರು ಶಾಸಕರ ವಿಶಿಷ್ಟ ಸಾಧನೆಯ ಮೂಲಕ ಸುದ್ದಿ ಮಾಡಲಿದೆ. ಈ ವಿಶಿಷ್ಟ ಸಾಧನೆ ಬೇರೆ ಏನೂ ಅಲ್ಲ. ಐವರು ಹಾಲಿ ಶಾಸಕರ ಹ್ಯಾಟ್ರಿಕ್ ಸಾಧನೆಯ ಹಾದಿ.
Related Articles
ರಾಜಕೀಯ ಸ್ಥಿತಿ ಬದಲಾದಂತೆ ಮಹೇಶ ಕುಮಟಳ್ಳಿ ಮತ್ತು ರಮೇಶ್ ಜಾರಕಿಹೊಳಿ ಇಬ್ಬರೂ ಬಿಜೆಪಿಯಲ್ಲಿದ್ದಾರೆ. ಕಟ್ಟಾ ಬಿಜೆಪಿವಾದಿಯಾಗಿದ್ದ ಲಕ್ಷ್ಮಣ ಸವದಿ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಇದೊಂದೇ ವ್ಯತ್ಯಾಸ. ಒಂದು ವೇಳೆ ಮಹೇಶ ಕುಮಟಳ್ಳಿ ಚುನಾವಣೆಯಲ್ಲಿ ಗೆದ್ದರೆ ಸವದಿ ಅವರ ಹ್ಯಾಟ್ರಿಕ್ ಸಾಧನೆ ಸರಿಗಟ್ಟಲಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಇದುವರೆಗೆ ಸವದಿ ಹೊರತುಪಡಿಸಿ ಬೇರೆ ಯಾವ ಅಭ್ಯರ್ಥಿಯೂ ಹ್ಯಾಟ್ರಿಕ್ ಸಾಧನೆ ಮಾಡಿಲ್ಲ.
Advertisement
ಕಾಗವಾಡದಲ್ಲಿ ಶ್ರೀಮಂತ ಕಸರತ್ತು: ಕಾಗವಾಡ ಕ್ಷೇತ್ರದಲ್ಲೂ ಸಹ ಇದೇ ಪರಿಸ್ಥಿತಿ ಇದೆ. ಬಿಜೆಪಿಯ ಶ್ರೀಮಂತ ಪಾಟೀಲ ಸಹ ಹ್ಯಾಟ್ರಿಕ್ ಸಾಧನೆ ಬಾಗಿಲಲ್ಲಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ ಇದುವರೆಗೆ ರಾಜು ಕಾಗೆ ಹೆಸರಿನಲ್ಲಿ ಮಾತ್ರ ಹ್ಯಾಟ್ರಿಕ್ ಸಾಧನೆಯ ಗೌರವವಿದೆ. ಈ ಸಾಧನೆ ಮಾಡುವಾಗ ರಾಜು ಕಾಗೆ ಬಿಜೆಪಿಯಲ್ಲಿದ್ದರು ಎಂಬುದು ಗಮನಿಸಬೇಕಾದ ಅಂಶ.
ಈಗ ರಾಜು ಕಾಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಶ್ರೀಮಂತ ಪಾಟೀಲ ಬಿಜೆಪಿಯಿಂದ ಎದುರಾಳಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕರಾದರು. ಶ್ರೀಮಂತ ಪಾಟೀಲ ಅವರ ಗೆಲುವಿನಲ್ಲೂ ರಮೇಶ್ ಜಾರಕಿಹೊಳಿ ಪಾತ್ರ ಬಹಳ ಮಹತ್ವದ್ದಾಗಿತ್ತು. ಉಪಚುನಾವಣೆಯಲ್ಲಿ ರಾಜು ಕಾಗೆ ಬಿಜೆಪಿ ಟಿಕೆಟ್ ಸಿಗದೆ ಅನಿವಾರ್ಯವಾಗಿ ಕಾಂಗ್ರೆಸ್ ಸೇರಿ ಚುನಾವಣೆ ಎದುರಿಸಿ ಸೋತಿದ್ದರು. ಈಗ ಮತ್ತೆ ಇಬ್ಬರೂ ಪರಸ್ಪರ ಎದುರಾಳಿಗಳಾಗಿದ್ದಾರೆ. ಒಂದು ವೇಳೆ ಶ್ರೀಮಂತ ಪಾಟೀಲ ಜಯಗಳಿಸಿದರೆ ಕಾಗವಾಡ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದ ಎರಡನೇ ಶಾಸಕರು ಎಂಬ ದಾಖಲೆಯಾಗಲಿದೆ.
ಕುಡಚಿಯಲ್ಲಿ ರಾಜೀವ್ ಸಾಧನೆಗೆ ಅಣಿ: ಕುಡಚಿ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಗೆಲುವಿನ ತವಕದಲ್ಲಿರುವ ಪಿ.ರಾಜೀವ ಬಿಜೆಪಿ ಪಕ್ಷದವರು ಎಂಬುದು ವಿಶೇಷ. 2008ರಲ್ಲಿ ಹೊಸ ಕ್ಷೇತ್ರವಾಗಿ ಉದಯವಾದ ಕುಡಚಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಪಿ.ರಾಜೀವ 2013ರಲ್ಲಿ ಬಿಎಸ್‌ಅರ್ ಪಕ್ಷದಿಂದ ಸ್ಪರ್ಧೆ ಮಾಡಿ ಮೊದಲ ಬಾರಿಗೆ ಗೆಲುವಿನ ಮೆಟ್ಟಿಲು ಹತ್ತಿದ್ದರು. ಅನಂತರ ಬಿಎಸ್‌ಅರ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಯಿತು. ರಾಜೀವ್ ಬಿಜೆಪಿ ಶಾಸಕರಾಗಿ ಗುರುತಿಸಿಕೊಂಡರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ರಾಜೀವ್ ಎರಡನೇ ಬಾರಿಗೆ ವಿಧಾನಸೌಧದ ಮೆಟ್ಟಿಲು ಹತ್ತಿದರು. ಈಗ ಸತತ ಮೂರನೇ ಬಾರಿಗೆ ಗೆಲುವಿನ ಕನಸು ಕಾಣುತ್ತಿದ್ದಾರೆ.
ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹುಕ್ಕೇರಿ ಕುಟುಂಬದ್ದೇ ದರ್ಬಾರ್. ಮೊದಲು ತಂದೆ ಪ್ರಕಾಶ ಹುಕ್ಕೇರಿ ಹಿಡಿತದಲ್ಲಿದ್ದ ಚಿಕ್ಕೋಡಿ-ಸದಲಗಾ ಕ್ಷೇತ್ರ ಈಗ ಅವರ ಪುತ್ರ ಗಣೇಶ ಕೈಯಲ್ಲಿದೆ. 2013ರಲ್ಲಿ ಗೆದ್ದಿದ್ದ ಪ್ರಕಾಶ ಹುಕ್ಕೇರಿ ರಾಜೀನಾಮೆ ನೀಡಿ 2014ರಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಿದರು. ಆಗ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಗಣೇಶ ಹುಕ್ಕೇರಿ ಮೊದಲ ಪ್ರಯತ್ನದಲ್ಲೇ ಶಾಸಕರಾದರು. 2018ರಲ್ಲಿ ಮತ್ತೆ ಕಣಕ್ಕಿಳಿದ ಗಣೇಶ ಹುಕ್ಕೇರಿ ಯಾವುದೇ ಅತಂಕವಿಲ್ಲದೆ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. ಈಗ ಸತತ ಮೂರನೇ ಬಾರಿಗೆ ಸ್ಪರ್ಧೆ ಮಾಡಿರುವ ಗಣೇಶ ಹುಕ್ಕೇರಿಗೆ ಬಿಜೆಪಿಯಿಂದ ರಮೇಶ್ ಕತ್ತಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಈ ಕದನದಲ್ಲಿ ಗಣೇಶ ಹುಕ್ಕೇರಿ ಗೆದ್ದರೆ ತಂದೆಯಂತೆ ಮಗನೂ ಸಹ ಹ್ಯಾಟ್ರಿಕ್ ಸಾಧನೆ ಮಾಡಿದ ಗೌರವ ಪಡೆಯಲಿದ್ದಾರೆ.
ದಾಖಲೆ ಹಾದಿಯಲ್ಲಿ ಜೊಲ್ಲೆನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸತತ ಮೂರನೇ ಬಾರಿಗೆ ಜಯ ಗಳಿಸಿದರೆ ಜಿಲ್ಲೆಯಿಂದ ಈ ಸಾಧನೆ ಮಾಡಿದ ಎರಡನೇ ಮಹಿಳಾ ಶಾಸಕಿ ಎಂಬ ದಾಖಲೆ ಬರೆಯಲಿದ್ದಾರೆ. ಇದುವರೆಗೆ ಕಾಂಗ್ರೆಸ್‌ನ ಚಂಪಾಬಾಯಿ ಬೋಗಲೆ ಮಾತ್ರ ಈ ಸಾಧನೆ ಮಾಡಿದ್ದಾರೆ. 1957ರಲ್ಲಿ ಹುಕ್ಕೇರಿ ದ್ವಿ ಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಆಯ್ಕೆಯಾಗಿದ್ದ ಚಂಪಾಬಾಯಿ ಬೋಗಲೆ ಅನಂತರ 1962ರಲ್ಲಿ ಹೊಸದಾಗಿ ನಾಮಕರಣಗೊಂಡ ಸಂಕೇಶ್ವರ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿದ್ದರು. ಮುಂದೆ 1967ರಲ್ಲಿ ಕ್ಷೇತ್ರ ಬದಲಾಯಿಸಿದ ಚಂಪಾಬಾಯಿ ಬೋಗಲೆ ಕಾಗವಾಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಹ್ಯಾಟ್ರಿಕ್ ಗೌರವ ಪಡೆದರು. ಅಲ್ಲಿಂದ ಇದುವರೆಗೆ ಯಾವ ಮಹಿಳಾ ಶಾಸಕರು ಜಿಲ್ಲೆಯಲ್ಲಿ ಹ್ಯಾಟ್ರಿಕ್ ದಾಖಲೆ ಮಾಡಿಲ್ಲ. ಈಗ ನಿಪ್ಪಾಣಿಯ ಶಶಿಕಲಾ ಜೊಲ್ಲೆ ಅವರಿಗೆ ಈ ದಾಖಲೆ ಸರಿಗಟ್ಟುವ ಅವಕಾಶ ಸಿಕ್ಕಿದೆ. 2008ರಲ್ಲಿ ಶಾಸಕರಾಗುವ ಮೊದಲ ಪ್ರಯತ್ನದಲ್ಲಿ ಸೋತಿದ್ದ ಶಶಿಕಲಾ ಜೊಲ್ಲೆ 2013ರಲ್ಲಿ ಈ ದಾಹ ನೀಗಿಸಿಕೊಂಡರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ ಅವರನ್ನು ಸೋಲಿಸುವ ಮೂಲಕ ಹಿಂದಿನ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡಿ ದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆ ಮತ್ತೆ ಕಾಂಗ್ರೆಸ್‌ನ ಕಾಕಾಸಾಹೇಬ ಅವರನ್ನು ಸೋಲಿಸಿದರು. ಈಗ ಸತತ ನಾಲ್ಕನೇ ಬಾರಿಗೆ ಇಬ್ಬರೂ ಮುಖಾಮುಖೀಯಾಗುತ್ತಿ ದ್ದಾರೆ. ಇಲ್ಲಿ ಗೆದ್ದರೆ ಶಶಿಕಲಾ ಅವರಿಗೆ ಹ್ಯಾಟ್ರಿಕ್ ಗೌರವ ಸಿಗಲಿದೆ. ~ ಕೇಶವ ಆದಿ