ಈ ಪೈಕಿ ಕೊಳ್ಳೇ ಗಾಲ ಎಸ್‌ಸಿ ಮೀಸಲು ಕ್ಷೇತ್ರವಾದರೆ, ಉಳಿದವು ಸಾಮಾನ್ಯ ಕ್ಷೇತ್ರಗಳು. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇ ಗಾಲ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದೆ. ಹನೂರು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 2 ಕಾಂಗ್ರೆಸ್, 1 ಬಿಜೆಪಿ 1 ಬಿಎಸ್‌ಪಿ ಬಲಾಬಲ ಇತ್ತು.
Advertisement
ಚಾಮರಾಜನಗರಇಲ್ಲಿ ಬಿಜೆಪಿಯಿಂದ ಇದೇ ಪ್ರಥಮ ಬಾರಿಗೆ ಸಚಿವ ವಿ. ಸೋಮಣ್ಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ ಮೂರು ಬಾರಿಯಿಂದ ಆಯ್ಕೆಯಾಗಿರುವ ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ, ಬಿಎಸ್‌ಪಿಯಿಂದ ಹ.ರಾ ಮಹೇಶ್, ಜೆಡಿಎಸ್‌ನಿಂದ ಆಲೂರು ಮಲ್ಲು ಸ್ಪರ್ಧಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಲಿಂಗಾಯತ ಸಮಾಜಕ್ಕೆ ಸೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಪ್ಪಾರ ಸಮು ದಾಯದವರು. ಬಿಎಸ್‌ಪಿ ಅಭ್ಯರ್ಥಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದವರು. ಈ ಕ್ಷೇತ್ರದಲ್ಲಿ ಲಿಂಗಾಯತ, ಎಸ್‌ಸಿ, ಉಪ್ಪಾರ, ನಾಯಕ, ಕುರುಬ ಸಮುದಾಯದ ಮತಗಳು ಅನುಕ್ರಮವಾಗಿ ಪ್ರಾಬಲ್ಯ ಸಾಧಿಸಿವೆ.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಸಿ.ಎಸ್. ನಿರಂಜನ ಕುಮಾರ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಪುತ್ರ ಎಚ್. ಎಂ. ಗಣೇಶ್ ಪ್ರಸಾದ್ ಕಣದಲ್ಲಿದ್ದಾರೆ. ಗಣೇಶ್ ಅವರಿಗೆ ಇದು ಮೊದಲ ಚುನಾವಣೆ. ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಚಾಮುಲ್ ನಿರ್ದೇಶಕ ಎಂ.ಪಿ. ಸುನೀಲ್ ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ಕಡಬೂರು ಮಂಜುನಾಥ್ ಕಣಕ್ಕಿಳಿದಿದ್ದಾರೆ. ಈ ನಾಲ್ಕೂ ಅಭ್ಯರ್ಥಿಗಳು ಲಿಂಗಾಯತರು.
Related Articles
Advertisement
ಕೊಳ್ಳೇಗಾಲ ಬಿಜೆಪಿಯಿಂದ ಹಾಲಿ ಶಾಸಕ ಎನ್. ಮಹೇಶ್, ಕಾಂಗ್ರೆಸ್‌ನಿಂದ ಎ.ಆರ್. ಕೃಷ್ಣಮೂರ್ತಿ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಕಿನಕಹಳ್ಳಿ ರಾಚಯ್ಯ ಸ್ಪರ್ಧಿಸಿದ್ದಾರೆ. ಈ ನಾಲ್ವರು ಅಭ್ಯರ್ಥಿಗಳೂ ಎಸ್.ಸಿ. ಸಮುದಾಯದವರು. ಈ ಕ್ಷೇತ್ರದಲ್ಲಿ ಕಳೆದ ಬಾರಿ ಬಿಎಸ್‌ಪಿಯಿಂದ ಹಾಲಿ ಶಾಸಕ ಎನ್. ಮಹೇಶ್ ಗೆದ್ದಿದ್ದರು. ಬದಲಾದ ಸನ್ನಿವೇಶದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಎನ್. ಮಹೇಶ್ ಅವರಿಗೆ ಟಕ್ಕರ್ ಕೊಡಬೇಕೆಂಬ ಉದ್ದೇಶದಿಂದ ಬಿಎಸ್‌ಪಿ ಈ ಬಾರಿ ತನ್ನ ಅಭ್ಯರ್ಥಿ (ರೇಖಾ ಕಮಲ್) ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್‌ಗೆ ತನ್ನ ಬೆಂಬಲ ಘೋಷಿಸಿದೆ. ಹೀಗಾಗಿ ಈ ಬಾರಿ ಎನ್. ಮಹೇಶ್, ಭಾರೀ ಪೈಪೋಟಿ ಎದುರಿಸಬೇಕಾಗಿದೆ. ಕ್ಷೇತ್ರದಲ್ಲಿ ಎಸ್‌ಸಿ, ಲಿಂಗಾಯತ, ಉಪ್ಪಾರ, ನಾಯಕ ಮತದಾರರು ಅನುಕ್ರಮವಾಗಿ ಪ್ರಬಲರಾಗಿದ್ದಾರೆ. ಕಳೆದ ಬಾರಿ ಮಹೇಶ್ ಅವರಿಗೆ ದಲಿತ ಮತಗಳು, ಬಿಎಸ್‌ಪಿಯಲ್ಲಿದ್ದರೂ ನಿರ್ಣಾಯಕವಾಗಿದ್ದ ಲಿಂಗಾಯತ ಮತಗಳ ಬಲದಿಂದ ಗೆದ್ದಿದ್ದರು. ಈ ಬಾರಿ ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಹಾಗೂ ಲಿಂಗಾಯತ ಮತಗಳ ಹೆಚ್ಚಿನ ಪಾಲು ಬಿಜೆಪಿಗೆ ಹೋಗಲಿವೆ. ನಾಯಕ ಮತ್ತು ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿವೆ. ಹನೂರು
ಕಾಂಗ್ರೆಸ್‌ನಿಂದ ಹಾಲಿ ಶಾಸಕ ಆರ್. ನರೇಂದ್ರ (ಒಕ್ಕಲಿಗ), ಬಿಜೆಪಿಯಿಂದ ಡಾ. ಪ್ರೀತನ್ ನಾಗಪ್ಪ, (ಲಿಂಗಾಯತ), ಜೆಡಿಎಸ್‌ನಿಂದ ಎಂ.ಆರ್. ಮಂಜುನಾಥ್ (ಕುರುಬ ಸಮಾಜ) ಬಿಎಸ್‌ಪಿಯಿಂದ ಶಾಗ್ಯ ಮಹೇಶ್ (ಆದಿ ಜಾಂಬವ) ಸ್ಪರ್ಧಿಸಿದ್ದಾರೆ. ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದ್ದರೆ, ಇದೊಂದು ಕ್ಷೇತ್ರದಲ್ಲಿ ಜೆಡಿಎಸ್ ಸೇರಿ ತ್ರಿಕೋನ ಸ್ಪರ್ಧೆ ಇರುವುದು ವಿಶೇಷ. ಕ್ಷೇತ್ರದಲ್ಲಿ ಶಾಸಕ ನರೇಂದ್ರ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ. ಈ ಬಾರಿಯಾದರೂ ಕ್ಷೇತ್ರವನ್ನು ತಮ್ಮ ವಶ ಮಾಡಿಕೊಳ್ಳಲು ಬಿಜೆಪಿ ಹೋರಾಟ ನಡೆಸಿದೆ. ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಸಹ ಗೆಲುವಿಗಾಗಿ ಶತಪ್ರಯತ್ನ ನಡೆಸಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ, ಎಸ್‌ಸಿ, ಅಲ್ಪಸಂಖ್ಯಾಕ, ಕುರುಬ ಮತ್ತು ಹಿಂದುಳಿದ ವರ್ಗಗಳ ಮತಗಳು ಅನುಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿವೆ. ಲಿಂಗಾಯತ ಮತಗಳನ್ನು ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಸ್‌ಸಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾಕರ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲಿವೆ. ಒಟ್ಟಾರೆ ಮೂರು ಪಕ್ಷಗಳ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ ಇದೆ. ~ ಕೆ.ಎಸ್. ಬನಶಂಕರ ಆರಾಧ್ಯ