ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಸದ್ಯಇರುವ ಸವಾಲು ಎಂದರೆ ಆಡಳಿತ ಪಕ್ಷದ, ಜನಪ್ರತಿನಿಧಿಗಳ ವೈಫಲ್ಯಗಳಲ್ಲ; ಬದಲಾಗಿ ಇರುವ ವೈಫಲ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತದಾರರಿಗೆ ತಲುಪಿಸಿ ಮತಗಳನ್ನಾಗಿ ಪರಿವರ್ತಿಸುವುದು. ಅದರ ಮೇಲೆಯೇ ಫಲಿತಾಂಶವೂ ನಿರ್ಧಾರಿತ.
ಉಡುಪಿ: ವಿಧಾನಸಭೆ ಚುನಾವಣೆ ಸಾಮಾನ್ಯವಾಗಿ ಸ್ಥಳೀಯ ವಿಷಯಾ ಧಾರಿತವಾಗಿಯೇ ನಡೆಯುವು ದಾದರೂ ಪಕ್ಷಗಳು ಅದನ್ನು ಹೇಗೆ ಜನರಿಗೆ ಮುಟ್ಟಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.
ಜಿಲ್ಲೆಯ ಐದೂ ಕ್ಷೇತ್ರದಲ್ಲೂ ಬಿಜೆಪಿ ಆಡಳಿತ ನಡೆ
ಸಿರುವುದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಅಭಿ ವೃದ್ಧಿ ವಿಷಯವನ್ನೇ ಪ್ರಮುಖವಾಗಿಟ್ಟು ಕೊಂಡು ಮುನ್ನಡೆಯುವ ಇಂಗಿತ ಈಗಾಗಲೇ ವ್ಯಕ್ತಪಡಿಸಿದೆ. ಸ್ಥಳೀಯವಾಗಿ ಬಿಜೆಪಿಗೆ ಕಾಂಗ್ರೆಸ್ ಮೇಲೆ ದಾಳಿ ನಡೆಸಲು ವಿಷಯ ಕಡಿಮೆ. ಆದರೆ ಕಾಂಗ್ರೆಸ್‌ಗೆ ಪ್ರತೀ ಕ್ಷೇತ್ರವಾರು ವಿಷಯಗಳು ಸಾಕಷ್ಟಿವೆ.
ಐದು ವರ್ಷಗಳಿಂದ ಅಭಿವೃದ್ಧಿಯಾಗದ ಅದೆಷ್ಟೋ ವಿಷಯವೂ ಇದೆ. ಇದರ ಜತೆಗೆ ರಾಜ್ಯ, ರಾಷ್ಟ್ರಮಟ್ಟದ ಕೆಲವು ವಿಷಯವೂ ಮುನ್ನೆಲೆಗೆ ಬರುತ್ತಿದೆ. ಇದೆಲ್ಲವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಜನರಿಗೆ ತಲಪಿಸಿ ಮತಗಳನ್ನಾಗಿಸುತ್ತದೇ ಎಂಬುದೇ ಕುತೂಹಲ.
ಸ್ಟಾರ್ ಪ್ರಚಾರಕ ಯಾರು?
ಬಿಜೆಪಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಹಾಗೆಯೇ ಯಾವ ವಿಷಯದಲ್ಲಿ ಯಾರ್ಯಾರು ಮಾತನಾಡಬೇಕು ಎಂಬುದನ್ನು ಕೇಂದ್ರದಿಂದಲೇ ತಯಾರು ಮಾಡಿ ಕೊಡಲಾಗುತ್ತಿದೆ.
Related Articles
ಕಾಂಗ್ರೆಸ್ ಕೂಡ ರಾಜ್ಯಮಟ್ಟದಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿ ಸಿದ್ಧಪಡಿಸುತ್ತಿದೆ. ಆದರೆ, ಜಿಲ್ಲೆಗೆ ರಾಜ್ಯದಿಂದ ಬರುವವರಿಗಿಂತ ಮುಖ್ಯವಾಗಿ ಜಿಲ್ಲೆಯ ಕೆಲವು ಸ್ಟಾರ್ ಪ್ರಚಾರಕರು ಹೆಚ್ಚು ಅಗತ್ಯವಿದೆ. ಬಿಜೆಪಿಯಿಂದ ಸಚಿವರಾದ ಸುನಿಲ್ ಕುಮಾರ್, ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೊದಲಾದವರು ಇದ್ದಾರೆ.
ಕಾಂಗ್ರೆಸ್‌ಗೆ ಸದ್ಯದ ಮಟ್ಟಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕ ಕೆ. ಗೋಪಾಲ್ ಪೂಜಾರಿ ಮಾತ್ರ. ಅವರಿಬ್ಬರಿಗೂ ಕಾಪು ಮತ್ತು ಬೈಂದೂರಿನಲ್ಲಿ ಟಿಕೆಟ್ ಘೋಷಣೆ ಯಾಗಿರುವುದರಿಂದ ಕ್ಷೇತ್ರಬಿಟ್ಟು ಹೊರ ಬರುವುದು ತುಸು ಕಷ್ಟ. ಹೀಗಾಗಿ ಕಾಂಗ್ರೆಸ್‌ಗೆ ಜಿಲ್ಲಾಮಟ್ಟದಲ್ಲಿ ಸ್ಟಾರ್ ಪ್ರಚಾರಕರ ಕೊರತೆಯೂ ಎದುರಾಗಬಹುದು.
ಬಿಜೆಪಿ 5 ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದಿಂದ ಆಗಿರುವ ಅಭಿವೃದ್ಧಿ ಕಾರ್ಯ, ಫಲಾನುಭವಿಗಳ ಪಟ್ಟಿ ಹೀಗೆ ಎಲ್ಲವನ್ನೂ ಕರಪತ್ರದ ರೂಪದಲ್ಲಿ ಸಿದ್ಧಪಡಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ, ವಿಧಾನಸಭಾ ಕ್ಷೇತ್ರವಾರು ಮನೆ ಮನೆಗೂ ತಲುಪಿಸುವ ಕಾರ್ಯವಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡ ಲಿದೆ ಎಂಬುದರ ಗ್ಯಾರೆಂಟಿ ಕಾರ್ಡ್ ಮನೆ ಮನೆಗೂ ಮುಟ್ಟಿಸುತ್ತದೆ. ಆದರೆ ಈ ಐದು ವರ್ಷದಲ್ಲಿ ಆಗಿರುವ ಪ್ರಮುಖ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬೇಕಾದ ತಯಾರಿಯನ್ನು ತೆರೆಮರೆಯಲ್ಲಿ ನಡೆ ಸುತ್ತಿರಬಹುದು. ಭ್ರಷ್ಟಾಚಾರ, ಕಮಿಷನ್ ಆರೋಪಗಳನ್ನು ಮುನ್ನೆಲೆಗೆ ತರಬಹುದು. ಆದರೆ ಇದನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಲು ಬಳಸುವ ತಂತ್ರದ ಮೇಲೆಯೇ ಫಲಿತಾಂಶವೂ ನಿರ್ಣಯವಾಗುವ ಸಾಧ್ಯತೆಯನ್ನು ಸಾರಾ ಸಗಟಾಗಿ ತಳ್ಳಿ ಹಾಕುವಂತಿಲ್ಲ.
ಪಟ್ಟಿಗಾಗಿ ಕಾತರ
ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ಹೊರತುಪಡಿಸಿ ಉಳಿದೆರೆಡು ಕ್ಷೇತ್ರ ಹಾಗೂ ಬಿಜೆಪಿ ಐದೂ ಕ್ಷೇತ್ರದಲ್ಲೂ ಅಭ್ಯರ್ಥಿಯ ಘೋಷಣೆ ಇನ್ನಷ್ಟೇ ಮಾಡಬೇಕಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಈ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರು ಕೂಡ ಅಭ್ಯರ್ಥಿಗಳ ಪಟ್ಟಿಗಾಗಿ ಕಾಯುತ್ತಿದ್ದಾರೆ. ಪಟ್ಟಿ ಅಂತಿಮವಾಗದೆ ಪೂರ್ಣ ಪ್ರಮಾಣದಲ್ಲಿ ಫೀಲ್ಡ್‌ಗೆ ಇಳಿದು ಮತ ಕೇಳುವುದು ಕಷ್ಟ. ಹೀಗಾಗಿ ಎಲ್ಲರಲ್ಲೂ ಪಟ್ಟಿ ಕಾತರ ಹಾಗೇ ಉಳಿದುಕೊಂಡಿದೆ.
~ ರಾಜು ಖಾರ್ವಿ ಕೊಡೇರಿ