ಬೆಂಗಳೂರು: ವೀರಶೈವ- ಲಿಂಗಾಯತ ಸಮುದಾಯದ ಮತಬುಟ್ಟಿಗಾಗಿ ಪೈಪೋಟಿಗೆ ಬಿದ್ದಿರುವ ಪ್ರಮುಖ ರಾಜಕೀಯ ಪಕ್ಷಗಳು ಇದರ ಭಾಗವಾಗಿಯೇ ಬಸವ ಜಯಂತಿಯಂದು ಚುನಾವಣಾ ರಣಕಹಳೆಗೆ ಮುನ್ನುಡಿ ಬರೆದಿವೆ. ಇದರೊಂದಿಗೆ ಸಮುದಾಯದ ಬಗ್ಗೆ ಇರುವ ತಮ್ಮ ಬದ್ಧತೆ ಪ್ರದರ್ಶಿಸುವ ಕಸರತ್ತು ನಡೆಸಿವೆ.
ಒಂದೆಡೆ ಭಾನುವಾರ ಕೂಡಲಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸ್ವತಃ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡರೆ, ಮತ್ತೂಂದೆಡೆ ತಾವು ಈ ಹಿಂದೆ ಹೇಳಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವ ಜಯಂತಿಯದೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇದರೊಂದಿಗೆ ಚುನಾವಣೆ ಕಣ ಮತ್ತಷ್ಟು ರಂಗೇರಿದೆ.
ನಿರೀಕ್ಷೆಯಂತೆ ವೀರಶೈವ- ಲಿಂಗಾಯತ ಸಮುದಾಯವು ಚುನಾವಣೆಯ ಕೇಂದ್ರಬಿಂದುವಾಗಿದೆ. ಈ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿಯಾದರೆ, ಜಯದ ಹಾದಿ ಸುಲಭ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ರಾಜಕೀಯ ಪಕ್ಷಗಳು, ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳು, ತಂತ್ರಗಳನ್ನು ರೂಪಿಸುತ್ತಿವೆ. ಆ ಸಮುದಾಯದ ಅಭ್ಯರ್ಥಿಗಳಿಗೇ ಹೆಚ್ಚು ಟಿಕೆಟ್ ಕೊಡುವುದು, ತಮ್ಮದು ಬಸವ ಸಿದ್ಧಾಂತ ಪಕ್ಷ ಎಂದು ಹೇಳಿಕೊಳ್ಳುವುದು, ಆ ನಾಯಕರಿಗೆ ಮಣೆ ಹಾಕುವುದು ಆರಂಭದಿಂದಲೂ ನಡೆದಿದೆ. ಇದರ ಮುಂದುವರಿದ ಭಾಗವೇ ಅತ್ತ ಬಸವ ಜಯಂತಿಯಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮನ ಮತ್ತು ಇತ್ತ ಮುಖ್ಯಮಂತ್ರಿಗಳ ಪ್ರಚಾರಕ್ಕೆ ಚಾಲನೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಭೂತಿಯಲ್ಲಿ ರಾಹುಲ್: ಬೆಳಿಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ, ಹೆಲಿಕಾಪ್ಟರ್ ಏರಿ ನೇರವಾಗಿ ಸಂಗಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿಯೇ ಪಕ್ಕದಲ್ಲಿ ಬಸವಣ್ಣನ ಐಕ್ಯ ಲಿಂಗಕ್ಕೆ ನಮಸ್ಕರಿಸಿದರು. ಅಲ್ಲಿಂದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಕೂಡಲ ಸಂಗಮ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು. ಇಡೀ ಕಾರ್ಯಕ್ರಮದುದ್ದಕ್ಕೂ ರಾಹುಲ್ ಹಣೆಯ ಮೇಲೆ ವಿಭೂತಿ ಎದ್ದುಕಾಣುತ್ತಿತ್ತು. ಈ ಮಧ್ಯೆ ವಿಭೂತ ಬಳಿದ ತಮ್ಮ ನಾಯಕನ ಫೋಟೋ ಸಾಮಾಜಿಕ ಜಾಲತಾಣಗಳಲ್ಲೂ ಕಾರ್ಯಕರ್ತರು ವ್ಯಾಪಕವಾಗಿ ಶೇರ್ ಮಾಡಿದ್ದು ಕಂಡುಬಂತು.
ಬಸವ ಪಥದಲ್ಲಿ ಆಡಳಿತ: ಮತ್ತೂಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲುಕ್ಯ ವೃತ್ತದಲ್ಲಿ ಬಸವಣ್ಣ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿ, “ಬಸವ ಪಥದಲ್ಲಿ ಆಡಳಿತ ಮಾಡಿದ್ದು, ಮುಂದೆಯೇ ಅದೇ ಹಾದಿಯಲ್ಲಿ ಸಾಗುವುದಾಗಿ” ಹೇಳಿದರು. ಅಲ್ಲಿಂದ ಯಲಹಂಕಕ್ಕೆ ತೆರಳಿದ ಅವರು, ಶಾಸಕ ಎಸ್.ಆರ್. ವಿಶ್ವನಾಥ್ ಪರ ಪ್ರಚಾರ ಮಾಡಿದರು. ಇದೇ ಜೋಶ್‌ನಲ್ಲಿ ಶಿಳ್ಳೆ ಮತ್ತು ಎರಡು ಸ್ಟೆಪ್ ಹಾಕಿ ಗಮನಸೆಳೆದರು. ನಂತರ ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರಿಗೆ ತೆರಳಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು. ಎಲ್ಲ ಕಡೆಯೂ ಬಸವಣ್ಣನ ಪಠಣ ಮಾಡಿದರು.