Advertisement

ಮಿಥನೈಸೇಷನ್‌ ಘಟಕ ನಿರ್ವಹಣೆ ನಿರ್ಧಾರ

12:13 PM Jul 05, 2018 | |

ಬೆಂಗಳೂರು: ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಬಯೋ ಮಿಥನೈ ಸೇಷನ್‌ ಘಟಕಗಳನ್ನು ಪುನಾರಂಭಿಸಿ ಪಾಲಿಕೆಯಿಂದಲೇ ನಿರ್ವಹಿಸಲು ನಿರ್ಧರಿಸಲಾಗಿದೆ.

Advertisement

ಹಸಿ ತ್ಯಾಜ್ಯ ಸಂಸ್ಕರಣೆಯಿಂದ ವಿದ್ಯುತ್‌ ಉತ್ಪಾದಿಸಿ ಬೀದಿ ದೀಪಗಳಿಗೆ ಬಳಸುವ ಉದ್ದೇಶದಿಂದ ನಗರದ 13 ಕಡೆಗಳಲ್ಲಿ ನಿರ್ಮಿಸಿದ್ದ ಬಯೋ ಮಿಥನೈಸೇಷನ್‌ ಘಟಕಗಳ ಪೈಕಿ 3 ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ. ಮೂರ್ನಾಲ್ಕು ವರ್ಷದಿಂದ 10 ಘಟಕಗಳು ಸ್ಥಗಿತಗೊಂಡಿವೆ.

ಮತ್ತೀಕೆರೆ ಹಾಗೂ ಯಲಹಂಕ ಸಮೀಪದ ಸಿಂಗಾಪುರದಲ್ಲಿನ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಿಂದ ಉತ್ಪಾದಿಸಲಾಗುತ್ತಿರುವ ವಿದ್ಯುತ್ತನ್ನು ಸಮೀಪದ ಬೀದಿ ದೀಪಗಳಿಗೆ ಬಳಸಲಾಗುತ್ತಿದೆ. ಒಂದೂವರೆ ವರ್ಷ ಹಿಂದೆ ಸ್ಥಗಿತ ಗೊಂಡಿದ್ದ ಯಡಿಯೂರು ವಾರ್ಡ್‌ನಲ್ಲಿರುವ ಘಟಕ ಇತ್ತೀಚೆಗೆ ಪುನಾರಂಭವಾಗಿದ್ದು, ಗೋ ಗ್ರೀನ್‌ ಸಂಸ್ಥೆ ಈ ಘಟಕವನ್ನು ನಿರ್ವಹಣೆ ಮಾಡುತ್ತಿದೆ. ಅದಕ್ಕಾಗಿ ಪಾಲಿಕೆ ತಿಂಗಳಿಗೆ 64 ಸಾವಿರ ರೂ. ಪಾವತಿಸುತ್ತಿದೆ.

ಎಲ್ಲೆಲ್ಲಿ ಘಟಕ: ಅದೇ ರೀತಿ ಸ್ವಾತಂತ್ರ್ಯ ಉದ್ಯಾನ, ಕೆ.ಆರ್‌. ಮಾರುಕಟ್ಟೆ, ನಾಗಪುರ, ಕೋರಮಂಗಲ, ಸೌತ್‌ ಎಂಡ್‌ ವೃತ್ತದ ಲಕ್ಷ್ಮಣರಾವ್‌ ಬುಲೇವಾರ್ಡ್‌, ಕೂಡ್ಲು ಬಳಿಯ ಕೆಸಿಡಿಸಿ ಘಟಕ, ದೊಮ್ಮಲೂರು, ಬೇಗೂರು ಸೇರಿ ಒಟ್ಟು 10 ಕಡೆ ಘಟಕ ನಿರ್ಮಿಸಲಾಗಿದೆ. ಪ್ರತಿ ಘಟಕ ನಿರ್ಮಾಣಕ್ಕೆ 79 ಲಕ್ಷ ರೂ. ಹಾಗೂ 3 ವರ್ಷದ ನಿರ್ವಹಣೆಗೆ 24.25 ಲಕ್ಷ ರೂ. ವ್ಯಯ ಮಾಡಲಾಗಿತ್ತು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಯಂತ್ರೋಪಕರಣಗಳು ತಕ್ಕು ಹಿಡಿದು ಹಾಳಾಗುತ್ತಿವೆ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.

ಪ್ರತಿ ಘಟಕದಿಂದ 400 ಯೂನಿಟ್‌ ವಿದ್ಯುತ್‌: ಬಯೋ ಮಿಥನೈಸೇಷನ್‌ ಘಟಕಗಳು ಸಮರ್ಪಕವಾಗಿ ಕಾರ್ಯಹಿಸಿದರೆ, 5 ಟನ್‌ ಹಸಿ ಕಸದಿಂದ ನಿತ್ಯ 400 ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ. ವಿದ್ಯುತನ್ನು ಪಾಲಿಕೆಯ ವ್ಯಾಪ್ತಿಯ ಬೀದಿ ದೀಪಗಳಿಗೆ ಬಳಸುವುದರಿಂದ ಪಾಲಿಕೆಗೆ ಮಾಸಿಕ ಲಕ್ಷಾಂತರ ರೂ. ವಿದ್ಯುತ್‌ ಶುಲ್ಕ ಉಳಿತಾಯವಾಗುತ್ತದೆ. ಜತೆಗೆ ನಗರದಲ್ಲಿ ಹಸಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ. ಒಂದು ಘಟಕದಲ್ಲಿ ಉತ್ಪಾದನೆ ಯಾಗುವ 400 ಯೂನಿಟ್‌ ವಿದ್ಯುತ್‌ನಿಂದ 67 ತಾಸುಗಳ ಕಾಲ 25 ಬೀದಿ ದೀಪ ಬೆಳಗಿಸಬಹುದಾಗಿದೆ.

Advertisement

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಹೇಗೆ?: ನಗರದಲ್ಲಿ ವಿವಿಧ ಭಾಗಗಳಿಂದ ಸಂಗ್ರಹಿಸಿದ ಹಸಿ ತ್ಯಾಜ್ಯವನ್ನು ತುಂಡರಿಸಿ, ಇನ್ಸ್ರಟ್‌ ಚೇಂಬರ್‌ ಮೂಲಕ ಬಯೋ ಡೈಜೆಸ್ಟರ್‌ನಲ್ಲಿ ಕೊಳೆಸಲಾಗುತ್ತದೆ. ಇದಕ್ಕೆ ಒಂದು ಸಾವಿರ ಲೀಟರ್‌ ನೀರು ಬೆರೆಸಿ, ಬಯೋಡೈಜೆಸ್ಟರ್‌ನಲ್ಲಿ ಕೊಳೆತ ತ್ಯಾಜ್ಯದಿಂದ ಉತ್ಪತ್ತಿಯಾಗುವ ಜೈವಿಕ ಅನಿಲ ಮಿಥೇನ್‌ ಅನ್ನು 80 ಕ್ಯೂಬಿಕ್‌ ಮೀಟರ್‌ ಸಾಮರ್ಥಯದ ಬೃಹತ್‌ ಬಲೂನಿನಲ್ಲಿ ಶೇಖರಿಸಲಾಗುತ್ತದೆ. ಬಳಿಕ ಅನಿಲವನ್ನು ಎಲೆಕ್ಟ್ರಿಕಲ್‌ ಜನರೇಟರ್‌ ಮೂಲಕ ವಿದ್ಯುತ್‌ ಅಗಿ ಪರಿವರ್ತಿಸಲಾಗುತ್ತದೆ.

ಘಟಕ ಸ್ಥಗಿತಕ್ಕೆ ಏನು ಕಾರಣ?: ನಗರದ ಕೆ.ಆರ್‌. ಮಾರುಕಟ್ಟೆ ಸೇರಿದ ಒಟ್ಟು 11 ಕಡೆಗಳಲ್ಲಿ ನಾಸಿಕ್‌ ಮೂಲಕ ಅಶೋಕ ಬಯೋಗ್ರೀನ್‌ ಸಂಸ್ಥೆಯು ಘಟಕ ಸ್ಥಾಪಿಸಿ, ಕಾರ್ಯಾರಂಭಿಸಿತ್ತು. ಆದರೆ, ಕೆಲ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸದೆ ವಿದ್ಯುತ್‌ ಉತ್ಪಾದಿಸದ ಹಿನ್ನೆಲೆಯಲ್ಲಿ ಪಾಲಿಕೆಯು ಸಂಸ್ಥೆಯ ಗುತ್ತಿಗೆಯನ್ನು ರದ್ದುಪಡಿಸಿತ್ತು. ಇದೀಗ ಸ್ಥಗಿತಗೊಂಡಿರುವ ಘಟಕಗಳನ್ನು ಪಾಲಿಕೆಯಿಂದಲೇ ನಿರ್ವಹಿಸುವ ಮೂಲಕ ಹಸಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 13 ಬಯೋ ಮಿಥನೈಸೇಷನ್‌ ಘಟಕಗಳ ಪೈಕಿ 3 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 10 ಘಟಕಗಳು ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಅವುಗಳನ್ನು ಪುನಾರಂಭಿಸಿ ಪಾಲಿಕೆಯಿಂದಲೇ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. 
ಸಫ್ರಾರ್ಜ್‌ ಖಾನ್‌, ಜಂಟಿ ಆಯುಕ್ತ, ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಭಾಗ

ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next