Advertisement

ಆಟೋ ಮೀಟರ್‌ ಹಾಕದಿದ್ರೆ ವಂಚನೆ ಕೇಸ್‌

05:37 PM Nov 14, 2018 | Team Udayavani |

ಹುಬ್ಬಳ್ಳಿ: ಆಟೋ ರಿಕ್ಷಾಗಳ ಮೀಟರ್‌ ಮಾರಾಟಗಾರರು ಹಾಗೂ ದುರಸ್ತಿದಾರರು ನಿಗದಿಪಡಿಸಿದ ದರದಂತೆ ಮೀಟರ್‌ ಮಾರಾಟ-ದುರಸ್ತಿ ಮಾಡಬೇಕು. ಇಲ್ಲವಾದರೆ ಅಂಥವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿಪಿ ಬಿ.ಎಸ್‌. ನೇಮಗೌಡ ಎಚ್ಚರಿಸಿದರು.

Advertisement

ಇಲ್ಲಿನ ಉತ್ತರ ಸಂಚಾರ ಠಾಣೆ ಆವರಣದಲ್ಲಿ ಮಂಗಳವಾರ ಆಟೋ ರಿಕ್ಷಾ ಚಾಲಕರ, ಮಾಲಕರ ಸಂಘಗಳೊಂದಿಗೆ ಸಭೆ ನಡೆಸಿದ ಅವರು, ಅವಳಿ ನಗರದಲ್ಲಿ ಜನವರಿ 1ರಿಂದ ಕಡ್ಡಾಯವಾಗಿ ಮೀಟರ್‌ ಬಳಕೆ ಕಡ್ಡಾಯಗೊಳಿಸಲಾಗಿದೆ. ಮೀಟರ್‌ಗೆ ಹೊಸ ದರ ಅಳವಡಿಸಿಕೊಳ್ಳಬೇಕಾಗಿದ್ದು, ಮೆಕ್ಯಾನಿಕಲ್‌ಗೆ 525 ರೂ. ಹಾಗೂ ಡಿಜಿಟಲ್‌ಗೆ 470 ರೂ. ದರದಂತೆ ಮೀಟರ್‌ ಮಾಪನಾಂಕ ಮಾಡಬೇಕು ಮತ್ತು ಅದಕ್ಕೆ ಕಡ್ಡಾಯವಾಗಿ ಬಿಲ್‌ ಕೊಡಬೇಕು. ಬಿಡಿಭಾಗಗಳ ದರ ಪ್ರತ್ಯೇಕವಾಗಿ ಪಡೆದುಕೊಳ್ಳಬಹುದು. ಇಲ್ಲವಾದರೆ ಅಂಥವರ ಮೇಲೆ ವಂಚನೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಆಟೋ ರಿಕ್ಷಾ ಸಂಘಟನೆಗಳವರು ಮಾತನಾಡಿ, ಆರ್‌.ಪಿ. ಸೋಳಂಕಿ ಎಂಬ ದುರಸ್ತಿದಾರರು ಲೈಸನ್ಸ್‌ ಹೊಂದಿದ್ದರೂ ಅಂಗಡಿ ಹೊಂದಿಲ್ಲ. ರಸ್ತೆಯಲ್ಲೇ ಎಲ್ಲೆಂದರಲ್ಲಿ ಇರುತ್ತಾರೆ. ಹೀಗಾಗಿ ನಮಗೆ ಅವರನ್ನು ಹುಡುಕಿಕೊಂಡು ಹೋಗುವುದೇ ದೊಡ್ಡ ತಲೆನೋವಾಗಿದೆ ಎಂದರು.

ಮೀಟರ್‌ ರಿಪೇರಿ ನೆಪದಲ್ಲಿ ಆಟೋ ರಿಕ್ಷಾ ಚಾಲಕರಿಂದ ಮನಬಂದಂತೆ ಹಣ ಸುಲಿಗೆ ಮಾಡುತ್ತಿದ್ದಾರೆ. ಅದಕ್ಕೆ ಬಿಲ್‌ ಕೊಡುವುದಿಲ್ಲ. ಮೀಟರ್‌ ಮಾರಾಟಗಾರರು ಸಹಿತ 2500 ರೂ. ಪಡೆದು ಕೇವಲ 1200 ರೂ. ಬಿಲ್‌ ಕೊಡುತ್ತಿದ್ದಾರೆ. ಈಗಾಗಲೇ ಮೀಟರ್‌ಗೆ ದರ ಸೆಟ್‌ ಮಾಡಿ ಪಾಸಿಂಗ್‌ ಪಡೆದವರಿಗೆ ಹೊಸ ದರ ಉಚಿತವಾಗಿ ಅಳವಡಿಸಬೇಕೆಂದರು.

ಮೀಟರ್‌ ದುರಸ್ತಿದಾರರು ಮಾತನಾಡಿ, ಮೀಟರ್‌ನ ಬಿಡಿಭಾಗಗಳ ದರ ಮತ್ತು ಐಸಿ ದರ ಹೆಚ್ಚಾಗಿದೆ. ಹೀಗಾಗಿ ಕಡಿಮೆ ದರದಲ್ಲಿ ಮೀಟರ್‌ನ ಮಾಪನಾಂಕ ದುರಸ್ತಿ ಸಾಧ್ಯವಾಗದು. ಮೆಕ್ಯಾನಿಕಲ್‌ಗೆ ಕನಿಷ್ಟ 800 ರೂ. ಹಾಗೂ ಡಿಜಿಟಲ್‌ಗೆ 650 ರೂ. ನಿಗದಿಪಡಿಸಬೇಕೆಂದು ಕೋರಿದರು.

Advertisement

ಡಿಸಿಪಿ ನೇಮಗೌಡ ಮಾತನಾಡಿ, ಆರ್‌.ಪಿ. ಸೋಳಂಕಿ ಅವರು ಡಿ.31ರ ವರೆಗೆ ಮೀಟರ್‌ ಮಾಪನಾಂಕವನ್ನು ಉತ್ತರ ಸಂಚಾರ ಠಾಣೆ ಹಿಂಭಾಗದ ಆವರಣದಲ್ಲಿ ದುರಸ್ತಿ ಮಾಡಬೇಕು ಹಾಗೂ ಧಾರವಾಡದಲ್ಲಿನ ದುರಸ್ತಿದಾರರು ಧಾರವಾಡ ಸಂಚಾರ ಠಾಣೆಯಲ್ಲಿ ರಿಪೇರಿ ಮಾಡಬೇಕು ಹಾಗೂ ಮೆಕ್ಯಾನಿಕಲ್‌ಗೆ 525 ರೂ. ಮತ್ತು ಡಿಜಿಟಲ್‌ಗೆ 470 ರೂ. ದರ ನಿಗದಪಡಿಸಿದ್ದು, ಅದೇ ರೀತಿ ಪಡೆದುಕೊಳ್ಳಬೇಕೆಂದು ಸೂಚಿಸಿದರು.

ಇದೇ ವೇಳೆ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಎ.ಎಸ್‌. ಪಾನಿಶೆಟ್ಟರ ಅವರು, ನಿಗದಿಪಡಿಸಿದ ದರದಂತೆ ಮೀಟರ್‌ ಮಾಪನಾಂಕ ದುರಸ್ತಿಗೊಳಿಸಬೇಕು ಎಂದರು. ಆರ್‌ ಟಿಒ ಅಧಿಕಾರಿ ರವೀಂದ್ರ ಕವಲಿ, ಆಟೋ ರಿಕ್ಷಾಗಳು ಜನವರಿ 1ರಿಂದ ಕಡ್ಡಾಯವಾಗಿ ಮೀಟರ್‌ ದರದಂತೆ ಸಂಚರಿಸಬೇಕು. ಮೊದಲ 1.6 ಕಿ.ಮೀ. ಗೆ 28 ರೂ. ಹಾಗೂ ನಂತರದ ಪ್ರತಿ ಕಿ.ಮೀ.ಗೆ 15 ರೂ. ದರ ನಿಗದಿಪಡಿಸಲಾಗಿದೆ ಎಂದರು.

ಎಸಿಪಿ ಎಂ.ವಿ. ನಾಗನೂರ, ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ಗಳಾದ ಶ್ರೀಕಾಂತ ತೋಟಗಿ, ಶ್ರೀಪಾದ ಜಲ್ದೆ, ಮುರಗೇಶ ಚನ್ನಣ್ಣವರ ಹಾಗೂ ಆಟೋ ರಿಕ್ಷಾ ಚಾಲಕರ, ಮಾಲಕರ ಸಂಘದ ದೇವಾನಂದ ಜಗಾಪೂರ, ಬಾಬಾಜಾನ ಮುಧೋಳ, ಬಶೀರ ಮುಧೋಳ, ಶೇಖರಯ್ಯ ಮಠಪತಿ, ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ ಮೊದಲಾದವರು ಪಾಲ್ಗೊಂಡಿದ್ದರು.

ಮಾದರಿ ಆಟೋ ರಿಕಾ ನಿಲ್ದಾಣ ನಿರ್ಮಾಣ
ಮಾದರಿ ಆಟೋರಿಕ್ಷಾ ನಿಲ್ದಾಣ ನಿರ್ಮಾಣ ಕುರಿತು 15 ದಿನದೊಳಗೆ ಆಟೋ ರಿಕ್ಷಾ ಸಂಘಟನೆಗಳ ಮುಖಂಡರೊಂದಿಗೆ ವಲಯವಾರು ಭೇಟಿ ನೀಡಿ ಪರಿಶೀಲಿಸಿ, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದು ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಪಾಲಿಕೆ ಹೆಚ್ಚುವರಿ ಆಯುಕ್ತ ಅಜೀಜ್‌ ದೇಸಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next