ರೋಣ: ಕುಡಿಯುವ ನೀರಿನ ಘಟಕಕ್ಕೆ ಮೀಟರ್ ಅಳವಡಿಸಬೇಕು. ಜೊತೆಗೆ ಪಟ್ಟಣದ ಸ್ವಚ್ಛತೆಗೆ ಭಂಗವುಂಟು ಮಾಡುವ ಅಂಗಡಿಗಳಿಗೆ ನೋಟಿಸ್ ನೀಡಬೇಕೆಂದು ಪುರಸಭೆ ಸದಸ್ಯ ಗದಿಗೆಪ್ಪ ಕಿರೇಸೂರ ಮುಖ್ಯಾಧಿಕಾರಿಗಳಿಗೆ ಆಗ್ರಹಿಸಿದರು.
ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕುಡಿಯುವ ನೀರಿನ ಘಟಕದಲ್ಲಿ ಮೀಟರ್ ಅಳವಡಿಸಿ ಹಣ ಪಾವತಿಸಿಕೊಳ್ಳಬೇಕು. ಅಲ್ಲದೇ, ಅವುಗಳಿಗೆ ಶರತ್ತು ಬದ್ಧ ನಿಯಮಗಳಡಿ ಟೆಂಡರ್ ನೀಡಬೇಕು. ಬಾಕಿಯಿರುವ ಘಟಕಗಳ ಹಣವನ್ನು ತುಂಬಿಸಿ ಕೊಳ್ಳಬೇಕು. ಹೊಸ ಸಂತೆ ಬಜಾರನಲ್ಲಿರುವ ವಾಣಿಜ್ಯ ಮಳಿಗೆಗಳನ್ನು 6 ವರ್ಷಗಳಿಂದ ಟೆಂಡರ್ ಕರೆಯುತ್ತಿದ್ದೀರಿ. ಅವುಗಳನ್ನು ಕೂಡಲೇ ಸ್ವತ್ಛಗೊಳಿಸಿ ವಿದ್ಯುತ್ ಮೀಟರ್ ಅಳವಡಿಸಿ ಗುತ್ತಿಗೆದಾರರಿಗೆ ನೀಡಬೇಕು. ವಾಣಿಜ್ಯ ಮಳಿಗೆಗಳು ಖಾಲಿ ಇರುವುದರಿಂದ ಪುರಸಭೆಗೆ ಕೋಟ್ಯಂತರ ರೂ. ನಷ್ಟವಾಗುತ್ತದೆ. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಪುರಸಭೆ ಸಿಬ್ಬಂದಿ ಮಾತನಾಡಿ, ಮಳಿಗೆಯ ಬಾಡಿಗೆ ಕಡಿಮೆಯಾದರೆ ಮಾತ್ರ ಗುತ್ತಿಗೆದಾರರು ಮಳಿಗೆಗೆ ಪ್ರವೇಶ ಮಾಡುತ್ತೇವೆ. ಇಲ್ಲವಾದರೆ ಇಲ್ಲ ಎನ್ನುತ್ತಾರೆ. ನಿಗದಿಪಡಿಸಿದ ಬಾಡಿಗೆಗೆ ಒಪ್ಪಿ ಬಂದರೆ ನಾವು ಪ್ರವೇಶ ಪತ್ರ ನೀಡುತ್ತೇವೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ನಾಯಕ ಮಾತನಾಡಿ, ಮಳಿಗೆಗಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಿ ಟೆಂಡರ್ ಕರೆದು ಸದಸ್ಯರ ಸೂಚನೆ ಮೇರೆಗೆ ಗುತ್ತಿಗೆದಾರರಿಗೆ ನೀಡುತ್ತೇವೆ ಎಂದರು. ಪುರಸಭೆ ಉಪಾಧ್ಯಕ್ಷ ಮಿಥುನ ಜಿ.ಪಾಟೀಲ ಮಾತನಾಡಿ, ಮುಂದಿನ ಸಭೆಯೊಳಗಾಗಿ ಮಳಿಗೆಗೆ ಭಾಡಿಗೆದಾರರು ಪ್ರವೇಶ ಮಾಡಿರಬೇಕು. ಅವುಗಳಿಗೆ ಪೂರಕ ಸೌಕರ್ಯ ನೀಡಿ ಗುತ್ತಿಗೆದಾರರಿಗೆ ಹಸ್ತಾಂತರಿಸಬೇಕೆಂದು ಸಲಹೆ ನೀಡಿದರು.
ಸದಸ್ಯ ಭಾವಸಾಬ ಬೆಟಗೇರಿ, ಸದಸ್ಯ ದುರಗಪ್ಪ ಹಿರೇಮನಿ, ಸಂಗಪ್ಪ ಜಿಡ್ಡಿಬಾಗಿಲ, ವಿಜಯ ಗಡಗಿ, ಮಲ್ಲಯ್ಯ ಮಹಾಪುರ ಮಠ ಮಾತನಾಡಿದರು. ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.