ಬೆಂಗಳೂರು: ಕೃಷಿ ಪಂಪ್‌ಸೆಟ್‌ಗಳ ಆರ್.ಆರ್. ನಂಬರ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡುವಂತೆ ಸರಕಾರಕ್ಕೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ನೀಡಿರುವ ಸೂಚನೆ ರೈತರ ನಿದ್ದೆಗೆಡಿಸಿದೆ. ಈ ಸಲಹೆ ಮುಂದಿನ ದಿನಗಳಲ್ಲಿ ಮೀಟರ್ ಅಳವಡಿಕೆಗೆ ಮುನ್ನುಡಿ ಆಗುವ ಆತಂಕದ ಜತೆಗೆ, ಒಂದಕ್ಕಿಂತ ಹೆಚ್ಚು ಸಂಪರ್ಕಗಳಿಗೆ ಕೊಕ್ಕೆ ಹಾಕಬಹುದು ಎಂಬ ತಳಮಳ ಮೂಡಿದೆ.
ಸದ್ಯಕ್ಕೆ ಯಾವುದೇ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಇಲ್ಲ (ಕರಾವಳಿ ಭಾಗದಲ್ಲಿ ಇದ್ದರೂ ರೀಡಿಂಗ್ ಮಾಡುವುದಿಲ್ಲ). ಎಷ್ಟು ಪ್ರಮಾಣದ ವಿದ್ಯುತ್ ಪೂರೈಕೆ ಆಗುತ್ತಿದೆ ಎಂಬ ನಿಖರ ಲೆಕ್ಕವೂ ಇಲ್ಲ. ಆದರೆ ದಶಕ ಗಳಿಂದ ಒಟ್ಟಾರೆ ಬಳಕೆಯ ಶೇ. 34ರಷ್ಟು ವಿದ್ಯುತ್ ಪಂಪ್‌ಸೆಟ್‌ಗಳಿಗೆ ಹೋಗುತ್ತಿದೆ. ಈಗ ಅದರ ಲೆಕ್ಕಹಾಕಿ ಆರು ತಿಂಗಳಲ್ಲಿ ಜೋಡಣೆ ಮಾಡತಕ್ಕದ್ದು. ಇಲ್ಲ ದಿದ್ದರೆ ಅಂತಹ ಗ್ರಾಹಕರಿಗೆ ಸಹಾಯಧನ ಬಿಡುಗಡೆ ಮಾಡಬಾರದು ಎಂದು ಸೂಚಿಸಲಾಗಿದೆ. ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿದವರೇ ಹೆಚ್ಚಿದ್ದು, ಇದು ನೇರವಾಗಿ ಆ ವರ್ಗವನ್ನೇ ಗುರಿ ಮಾಡಿದಂತಿದೆ.
ಸಾಮಾನ್ಯವಾಗಿ ರೈತರು ಒಂದಕ್ಕಿಂತ ಹೆಚ್ಚು ವಿದ್ಯುತ್ ಸಂಪರ್ಕಗಳನ್ನು ಹೊಂದಿರುತ್ತಾರೆ. ಒಂದೊಂದು ಜಮೀನಿ ನಲ್ಲಿ ನಾಲ್ಕೈದು ಕೊಳವೆಬಾವಿಗಳನ್ನು ಹೊಂದಿ ರುವ ಉದಾಹರಣೆಗಳೂ ಸಾವಿರಾರು ಇವೆ. ಅವುಗಳ ಪೈಕಿ ಬಹುತೇಕ ಒಂದಕ್ಕಿಂತ ಹೆಚ್ಚು ಆರ್.ಆರ್. ನಂಬರ್ ಇರುವುದನ್ನು ಕಾಣಬಹುದು. ಆದರೆ ಅದನ್ನು ಬಳಸುತ್ತಿರುವ ಗ್ರಾಹಕರ ಆಧಾರ್ ಸಂಖ್ಯೆ ಒಂದೇ ಆಗಿದೆ. ಈಗ “ಲಿಂಕ್’ ಮಾಡುವ ನೆಪದಲ್ಲಿ ಆ ಬಹು ಸಂಪರ್ಕಗಳಿಗೆ ಕತ್ತರಿ ಹಾಕುವ ಉದ್ದೇಶ ಇದರ ಹಿಂದಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಕೆಲವು ಕಡೆಗಳಲ್ಲಿ ತುಂಡು ಜಮೀನುಗಳಿದ್ದು, ಅದನ್ನು ಎರಡು-ಮೂರು ಕಡೆಗಳಲ್ಲಿ ರೈತರು ಹೊಂದಿರುತ್ತಾರೆ. ಅವುಗಳಿಗೂ ಪ್ರತ್ಯೇಕ ಸಂಪರ್ಕ ಪಡೆದಿದ್ದು, ಆರ್.ಆರ್. ಸಂಖ್ಯೆಗಳೂ ಬೇರೆ ಬೇರೆಯಾಗಿರುತ್ತವೆ. ಆದರೆ ಅವೆರಡನ್ನೂ ಬಳಸುತ್ತಿರುವ ರೈತರ ಆಧಾರ್ ಸಂಖ್ಯೆ ಒಂದೇ ಆಗಿರುತ್ತದೆ. ಅದನ್ನು ಪತ್ತೆಹಚ್ಚಿ, ಕೊಕ್ಕೆ ಹಾಕುವ ಕೆಲಸ ಮುಂಬರುವ ದಿನಗಳಲ್ಲಿ ಆಗಲಿದೆ ಎಂಬ ಆತಂಕ ರೈತರ ನಿದ್ದೆಗೆಡಿಸಿದೆ.
“ಇದೆಲ್ಲದರ ಮೂಲ ಉದ್ದೇಶ ರೈತರಿಗೆ ನೀಡುತ್ತಿರುವ ಸಬ್ಸಿಡಿ ತೆಗೆದು ಹಾಕುವುದಾಗಿದೆ. ಮೊದಲಿಗೆ ಆರ್.ಆರ್. ಸಂಖ್ಯೆ ಮತ್ತು ಆಧಾರ್ ಲಿಂಕ್ ಮಾಡುತ್ತಾರೆ. ಅನಂತರ ಬಹುಸಂಪರ್ಕಗಳಿಗೆ ಕತ್ತರಿ ಹಾಕುತ್ತಾರೆ. ಉಳಿದೊಂದು ಪಂಪ್‌ಸೆಟ್‌ಗೆ ಮೀಟರ್ ಅಳವಡಿಸುತ್ತಾರೆ. ಒಟ್ಟಾರೆ ಮೀಟರ್ ಅಳವಡಿಕೆಗೆ ಈ ನಡೆ ಮುನ್ನುಡಿ ಆಗಿದೆ. ರೈತರಿಗೆ ಅನುಕೂಲ ಆಗುವುದನ್ನು ಮಾಡಬೇಕೇ ಹೊರತು, ಅನನುಕೂಲ ಆಗುವಂಥದ್ದನ್ನಲ್ಲ. ಸರಕಾರ ಬೇಡ ವಾದದ್ದನ್ನೇ ಮಾಡುತ್ತದೆ’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿದ್ದಾರೆ.
ಶೇ.65 ಸಣ್ಣ ಹಿಡುವಳಿದಾರರು
ಸರಕಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ ನೀರಾವರಿ ಪ್ರದೇಶ 50.34 ಲಕ್ಷ ಹೆಕ್ಟೇರ್. ಈ ಪೈಕಿ ನಿವ್ವಳ ನೀರಾವರಿ ಪ್ರದೇಶ 42.35 ಲಕ್ಷ ಹೆಕ್ಟೇರ್ ಆಗಿದೆ. ಇನ್ನು ಹಿಡುವಳಿದಾರರ ಸಂಖ್ಯೆ 86.81 ಲಕ್ಷ ಇದ್ದು, ಸಣ್ಣ ಮತ್ತು ಮಧ್ಯಮ ಹಿಡುವಳಿದಾರರು ಶೇ. 80ರಷ್ಟಿದ್ದಾರೆ.
ಕೆಇಆರ್‌ಸಿ ನೀಡಿರುವ ಆರ್.ಆರ್. ಸಂಖ್ಯೆ ಮತ್ತು ಆಧಾರ್ “ಜೋಡಣೆ’ ಸೂಚನೆಯು ಸಣ್ಣ ಹಿಡುವಳಿದಾರರಿಗಿಂತ ದೊಡ್ಡ ಪ್ರಮಾಣದ ರೈತರಲ್ಲೇ ಆತಂಕ ಸೃಷ್ಟಿಸಿದೆ. ನೂರಾರು ಎಕರೆ ಜಮೀನು ಹೊಂದಿರುವ ರೈತರು, ರಾಜಕೀಯ ನಾಯಕರು, ಉದ್ಯಮಿಗಳು ಕೂಡ ಬೇನಾಮಿ ಹೆಸರಿನಲ್ಲಿ ಆರ್.ಆರ್. ಸಂಖ್ಯೆ ಹೊಂದಿದ್ದು, ಆ ಮೂಲಕ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಒಂದು ವೇಳೆ “ಲಿಂಕ್’ ಮಾಡಿದರೆ, ಅದು ಕೂಡ ಬಯಲಾಗುವುದರ ಜತೆಗೆ ಸೌಲಭ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ಇದು ದೊಡ್ಡ ಪ್ರಮಾಣದ ರೈತರ ನಿದ್ದೆಗೆಡಿಸಿದೆ.