Advertisement

ಸಾಧಕ ರೈತನ ಕೈಗೆ ಲಾಭ ತಂದಿತ್ತ ‘ಮೀಟರ್‌ ಭತ್ತ’

02:14 PM Sep 26, 2017 | |

ಉಳೆಪಾಡಿ : ಕೃಷಿಯಿಂದ ವಿಮುಖರಾಗುತ್ತಿರುವ ಈ ಕಾಲದಲ್ಲೂ ಕೃಷಿಯೇ ತನ್ನ ಜೀವಾಳ ಎಂದು ನಂಬಿದ ರೈತರೊಬ್ಬರು, ಭತ್ತದ ಬೇಸಾಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಮೂರು ವರ್ಷಗಳಿಂದ ಹೊಸ ಮೀಟರ್‌ ತಳಿಯನ್ನು ಬೆಳೆಯುತ್ತ ಅಧಿಕ ಇಳುವರಿ ಪಡೆದು, ಬೇಸಾಯ ಲಾಭಕರ ಎಂದು ತೋರಿಸಿದ್ದಾರೆ, ಉಳೆಪಾಡಿಯ ಕರುಣಾಕರ ಶೆಟ್ಟಿ.

Advertisement

ಉಳೆಪಾಡಿಯ ಮುಗೇರಬೆಟ್ಟು ಎಂಬಲ್ಲಿರುವ ತಮ್ಮ ಜಮೀನಲ್ಲಿ ಕೃಷಿ ಜೀವನ ನಡೆಸುತ್ತಿರುವ ಕರುಣಾಕರ ಶೆಟ್ಟರು ಆಧುನಿಕತೆಯ ಯಾಂತ್ರೀಕರಣದ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಪ್ರತಿ ವರ್ಷವೂ ಹೊಸ ತಳಿಗಳ ಅನ್ವೇಷಣೆ ಮಾಡುತ್ತ ಬಂದ ಅವರು, ಮೂರು ವರ್ಷಗಳ ಹಿಂದೆ ಮೀಟರ್‌ ತಳಿಯನ್ನು ಆರಿಸಿಕೊಂಡರು. ಸ್ವಲ್ಪ ಜಾಗದಲ್ಲಿ ಬೀಜ ಹಾಕಿ ನೇಜಿ ಮಾಡಿ ಉತ್ತಮ ಇಳುವರಿ ಪಡೆದರು. ಆಮೇಲೆ ಎರಡು ವರ್ಷಗಳಿಂದಲೂ ಉತ್ತಮ ಫಲಸು ಹಾಗೂ ಇಳುವರಿ ಪಡೆದಿದ್ದಾರೆ.

ಈ ಮುಂಗಾರು ಹಂಗಾಮಿನಲ್ಲಿ 90 ಕೆಜಿ ಭತ್ತದ ಬೀಜಗಳಿಂದ ನೇಜಿ ಮಾಡಿ, ಸುಮಾರು ಐದು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದಾರೆ. ಎಕರೆಯೊಂದಕ್ಕೆ 25ರಿಂದ 30 ಕ್ವಿಂಟಲ್‌ ಇಳುವರಿ ಬರುತ್ತಿದೆ ಎನ್ನುತ್ತಾರೆ ಶೆಟ್ಟರು.

ಕೀಟನಾಶಕ ಇಲ್ಲ
ನಾಟಿಯ ಸಂದರ್ಭ ಗದ್ದೆಯನ್ನು ಹದ ಮಾಡುವ ಮೊದಲು ಹಟ್ಟಿ ಗೊಬ್ಬರ ಹಾಗೂ ಸುಡು ಮಣ್ಣು, ಹಸಿರೆಲೆ ಗೊಬ್ಬರ ಮಾತ್ರ ಉಪಯೋಗ ಮಾಡಿದ್ದಾರೆ. ರಸಗೊಬ್ಬರ ವನ್ನು ಬಳಕೆ ಮಾಡುತ್ತಿಲ್ಲ. ಭತ್ತದ ಸಸಿಗಳಿಗೆ ಕೀಟಬಾಧೆ ಕಾಣಿಸಿಕೊಂಡಾಗ ರಾಸಾಯನಿಕ ಸಿಂಪಡಿಸುವ ಬದಲು ಕಹಿಬೇವು ಎಣ್ಣೆ ಹಾಗೂ ಬೂದಿಯನ್ನು ಸಿಂಪಡಿಸುತ್ತಾರೆ. ರೋಗ ನಿಯಂತ್ರಣಕ್ಕೆ ಬರುತ್ತಿದೆ.

ನಮ್ಮ ಊರಿನಲ್ಲಿ ಭತ್ತದ ಬೇಸಾಯಕ್ಕೆ ಕಾರ್ಮಿಕರ ಕೊರತೆಯಿರುವ ಕಾರಣ ತಮಿಳುನಾಡಿನ 15 ಮಂದಿಯ ತಂಡ ಮಂದಿ ಗುತ್ತಿಗೆ ಆಧಾರದಲ್ಲಿ ನೇಜಿ ತೆಗೆದು ಒಂದೇ ದಿನದಲ್ಲಿ ನಾಟಿ ಮಾಡಿದೆ ಎಂದು ವಿವರಿಸಿದರು. ಭತ್ತದ ಕೃಷಿಯ ಜತೆಗೆ ಪೂರಕವಾಗಿ ತೆಂಗು, ಅಡಿಕೆ, ಕಾಳುಮೆಣಸು, ಬಾಳೆ, ಗೇರುಬೀಜ ಮುಂತಾದ ಕೃಷಿಯಲ್ಲೂ ಕೈಯಾಡಿಸಿ ಯಶಸ್ವಿಯಾಗಿದ್ದಾರೆ.

Advertisement

ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next