ಬೀದರ: ರಾಜಧಾನಿ ಬೆಂಗಳೂರಿಗೆ ಲೋಹದ ಹಕ್ಕಿಯಲ್ಲಿ ಹಾರಾಡಬೇಕೆಂಬ ಧರಿನಾಡು ಬೀದರ ಜನರ ಕನಸು ನನಸಾಗಲಿದೆ. ಏರ್ ಕ್ರಾಫ್ಟ್ (ವಿಮಾನ) ಮತ್ತು ಪ್ರಯಾಣಿಕರ ಕೊರತೆ ನೆಪವೊಡ್ಡಿ ಕಳೆದ ಮೂರ್‍ನಾಲ್ಕು ತಿಂಗಳಿಂದ ವಿಮಾನ ಹಾರಾಟ ಸೇವೆ ಸ್ಥಗಿತಗೊಳಿಸಿದ್ದ ಟ್ರೂಜೆಟ್ ಸಂಸ್ಥೆ, ಫೆ.24ರಿಂದ ಮತ್ತೆ ಪುನರ್ ಆರಂಭಿಸಲು ನಿರ್ಧರಿಸಿದೆ.
ದಶಕಗಳ ಹೋರಾಟದ ಫಲವಾಗಿ ಯುದ್ಧ ವಿಮಾನಗಳ ತರಬೇತಿ ನೆಲೆಯಾಗಿರುವ ಬೀದರನಲ್ಲಿ ನಾಗರಿಕ ವಿಮಾನಯಾನ (ಕೇಂದ್ರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ) ಆರಂಭಿ ಸಲಾಗಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಕೋವಿಡ್ ಮತ್ತು ಲಾಕ್‌ಡಾನ್ ತೆರವು ಬಳಿಕವೂ ಟ್ರೂಜೆಟ್ ಸಂಸ್ಥೆ ವಿಮಾನಗಳ ಕೊರತೆ ಸಮಸ್ಯೆ ಮುಂದಿಟ್ಟು ತನ್ನ ಸೇವೆಯನ್ನು ನಿಲ್ಲಿಸಿತ್ತು. ಹಾಗಾಗಿ ಏರ್‌ಪೋರ್ಟ್ ಉದ್ಘಾಟನೆಗೊಂಡ ಒಂದೂವರೆ ವರ್ಷದಲ್ಲೇ ವಿಮಾನಯಾನಕ್ಕೆ ಗ್ರಹಣ ಹಿಡಿದು, ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.
70 ಆಸನಗಳ ಸೌಲಭ್ಯವುಳ್ಳ ಟ್ರೂಜೆಟ್ ಸಂಸ್ಥೆ ಬೀದರ-ಬೆಂಗಳೂರು ನಡುವೆ ವಿಮಾನ ಹಾರಿಸುತ್ತಿದ್ದು, ಆರಂಭದಲ್ಲಿ ವಾರದ 7 ದಿನಗಳ ಕಾಲ ಲಭ್ಯವಿದ್ದ ವಿಮಾನ ಸೇವೆ ನಂತರ ಕೋವಿಡ್ ಲಾಕ್‌ಡೌನ್ ನಿಂದ 2 ತಿಂಗಳು ವಿಮಾನಯಾನ ಸೇವೆ ಸ್ಥಗಿತಗೊಳಿಸಿತ್ತು. ಲಾಕ್‌ಡೌನ್ ತೆರವು ಬಳಿಕ ವಾರದಲ್ಲಿ ಕೇವಲ 2 ದಿನ ಮಾತ್ರ ಸೇವೆ ನೀಡಿದ್ದ ಟ್ರೂಜೆಟ್ ಸಂಸ್ಥೆ, ಕಳೆದ ನವೆಂಬರನಿಂದ ವಾರದಲ್ಲಿ 4 ದಿನ ವಿಮಾನ ಹಾರಾಟ ಶುರು ಮಾಡಿತ್ತು. ನಂತರ ಎರಡು ವಾರಕ್ಕೊಂದು ವಿಮಾನ ಹಾರಾಡಿ ಬಳಿಕ ಸೇವೆಯನ್ನೇ ಸ್ಥಗಿತಗೊಳಿತ್ತು.
ಕೋವಿಡ್ ಲಾಕ್‌ಡೌನ್ ನಡುವೆಯೂ ವಿಮಾನಯಾನ ಆರಂಭವಾದ ಒಂದು ವರ್ಷದ ಅವಧಿಯಲ್ಲಿಯೇ ಬೀದರ-ಬೆಂಗಳೂರು ನಡುವೆ 166 ವಿಮಾನಗಳ ಹಾರಾಟ ಆಗಿದ್ದು, 6923 ಜನರು ಪ್ರಯಾಣಿಸಿದ್ದರು. ಲಾಕ್ ಡೌನ್ ತೆರವು ಬಳಿಕ ಬೇಡಿಕೆ ಹೆಚ್ಚುತ್ತಿದ್ದರಿಂದ ಹಿಂದಿನಂತೆ ನಿತ್ಯ ಕಾರ್ಯಾಚರಣೆ ಮಾಡಬೇಕು. ಜತೆಗೆ ಬೀದರನಿಂದ ಮುಂಬೈ, ಪುಣೆ, ದೆಹಲಿ ಮತ್ತು ಅಮೃತಸರ್‌ಗೆ ವಿಮಾನ ಹಾರಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಇತ್ತ ಟ್ರೂಜೆಟ್ ಸಂಸ್ಥೆ ಸದ್ಯ ಲಭ್ಯವಿದ್ದ ವಿಮಾನಯಾನ ಸೇವೆಯನ್ನೇ ಕಡಿತ ಮಾಡಿ ಜನರ ಕೆಂಗೆಣ್ಣಿಗೆ ಗುರಿಯಾಗಿತ್ತು.
ಇದರಿಂದ ಜಿಲ್ಲೆಯ ಜನ ಅನಿವಾರ್ಯವಾಗಿ ಕಲ್ಬುರ್ಗಿ ಅಥವಾ ಹೈದ್ರಾಬಾದ್ ಮೂಲಕ ಬೆಂಗಳೂರಿಗೆ ತೆರಳಬೇಕಾದಂಥ, ಇಲ್ಲವೇ ರೈಲು ಮತ್ತು ಬಸ್‌ಗಳ ಮೂಲಕ ಸಂಚರಿಸಬೇಕಾದ ಸ್ಥಿತಿ ಎದುರಾಗಿತ್ತು. ವಿಮಾನಯಾನ ಬಂದ್‌ಗೆ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತಲ್ಲದೇ ಜಿಲ್ಲೆಯ ಶಾಸಕರು ಸಹ ಧ್ವನಿ ಎತ್ತಿದ್ದರು. ಕೊನೆಗೂ ಕೇಂದ್ರದ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ಟ್ರೂಜೆಟ್, ಜಿಎಂಆರ್ ಸಂಸ್ಥೆ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸಿ, ಎದುರಾಗಿದ್ದ ತೊಡಕುಗಳನ್ನು ನಿವಾರಿಸಿ ಮತ್ತೆ ಆಗಸದಲ್ಲಿ ಮತ್ತೆ ವಿಮಾನ ಹಾರಾಟ ಶುರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಟ್ರೂಜೆಟ್ ಸಂಸ್ಥೆ ಫೆ.24ರಿಂದ ಸದ್ಯ ವಾರದಲ್ಲಿ ಮಂಗಳವಾರ, ಗುರುವಾರ ಮತ್ತು ರವಿವಾರ ಮೂರು ದಿನ ವಿಮಾನ ಹಾರಿಸಲು ಮುಂದಾಗಿದೆ.
ವಿಮಾನ ನಂ.2ಟಿ625 ಬೆಳಿಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.10 ಬೀದರ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ವಿಮಾನ ನಂ.2ಟಿ626 ಮಧ್ಯಾಹ್ನ 1.40ಕ್ಕೆ ಬೀದರನಿಂದ ಹೊರಟು ಮಧ್ಯಾಹ್ನ 3.25ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಒಟ್ಟು 1 ಗಂಟೆ 45 ನಿಮಿಷ ಪ್ರಯಾಣ ಇರಲಿದೆ.
ಕೋವಿಡ್ ಹಾಗೂ ಇತರೆ ಕಾರಣದಿಂದಾಗಿ ಬೀದರನಿಂದ ನಾಗರಿಕ ವಿಮಾನಯಾನ ಸೇವೆ ಸ್ಥಗಿತಗೊಂಡಿತ್ತು. ಇದರಿಂದ ಬೀದರ ಜನತೆಗೆ ಬೆಂಗಳೂರಿಗೆ ಪ್ರಯಾಣಿಸಲು ತುಂಬಾ ಅನಾನುಕೂಲವಾಗುತ್ತಿತ್ತು. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯದ ಗಮನಕ್ಕೆ ತಂದು ಎಲ್ಲ ತೊಡಕುಗಳನ್ನು ನಿವಾರಿಸಿದ್ದೇನೆ. ಫೆ.24ರಿಂದ ಟ್ರೂಜೆಟ್ ಸಂಸ್ಥೆ ವಿಮಾನ ಹಾರಾಟ ನಡೆಸಲಿದ್ದು, ಜಿಲ್ಲೆಯ ಜನರು ವಿಮಾನಯಾನ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು.
-ಭಗವಂತ ಖೂಬಾ, ಕೇಂದ್ರ ಸಚಿವರು, ರಸಗೊಬ್ಬರ- ರಸಾಯನಿಕ ಖಾತೆ
-ಶಶಿಕಾಂತ ಬಂಬುಳಗೆ