Advertisement

ಫ‌ುಟ್‌ಬಾಲ್‌ ದಿಗ್ಗಜ ಮೆಸ್ಸಿಗೆ 21 ತಿಂಗಳು ಕಣ್ಗಾವಲು ಜೈಲು

11:38 AM May 25, 2017 | Team Udayavani |

ಮ್ಯಾಡ್ರಿಡ್‌: ಸ್ಪೇನ್‌ ಸರ್ಕಾರಕ್ಕೆ 30 ಕೋಟಿ ರೂ. ತೆರಿಗೆ ವಂಚಿಸಿದ್ದಾರೆಂಬ ಪ್ರಕರಣದಲ್ಲಿ ಅರ್ಜೆಂಟೀನಾದ ವಿಶ್ವವಿಖ್ಯಾತ ಫ‌ುಟ್‌ಬಾಲಿಗ ಲಯೋನೆಲ್‌ ಮೆಸ್ಸಿಗೆ ಸ್ಪೇನಿನ ಸರ್ವೋಚ್ಚ ನ್ಯಾಯಾಲಯ 21 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

Advertisement

ಆದರೆ ಮೆಸ್ಸಿ ಅರ್ಜೆಂಟೀನಾ ನಾಗರಿಕರಾಗಿರುವುದರಿಂದ ಈ ಶಿಕ್ಷೆಯನ್ನು ಅವರು ಪಾಲಿಸಲೇಬೇಕೆಂದೇನಿಲ್ಲ. ಆದರೆ ಈ ಶಿಕ್ಷೆ ಅನುಭವಿಸದಿದ್ದರೆ ಅವರು ಹಲವು ರೀತಿಯಲ್ಲಿ ಸಮಸ್ಯೆ ಅನುಭವಿಸಬೇಕಾದ ಸಾಧ್ಯತೆಯಿದೆ.

ಮೆಸ್ಸಿಗೆ 21 ತಿಂಗಳು ಜೈಲು ಮತ್ತು 15 ಕೋಟಿ ರೂ. ದಂಡ ಮತ್ತು ಅವರ ತಂದೆ ಜಾರ್ಜ್‌ ಮೆಸ್ಸಿಗೆ 15 ತಿಂಗಳು ಜೈಲು ಮತ್ತು 10 ಕೋಟಿ ರೂ. ದಂಡ ವಿಧಿಸಿದೆ. ವಿಶೇಷವೆಂದರೆ ಈ ಜೈಲು ಶಿಕ್ಷೆಯನ್ನು ಮೆಸ್ಸಿ ನೇರವಾಗಿ ಜೈಲಿನಲ್ಲೇ ಕಳೆಯಬೇಕೆಂದಿಲ್ಲ. ಬದಲಿಗೆ ಕಣ್ಗಾವಲು ಅವಧಿಯನ್ನಾಗಿ ಕಳೆಯಬಹುದು. ಅದಕ್ಕೆ ಸ್ಪೇನ್‌ ಕಾನೂನು ಅವಕಾಶ ನೀಡುತ್ತದೆ.

ಪ್ರಕರಣವೇನು?: 2007ರಿಂದ 2009ರ ಅವಧಿಯಲ್ಲಿ ಮೆಸ್ಸಿ ವ್ಯಕ್ತಿ ಹಕ್ಕುಗಳಡಿ ಗಳಿಸಿದ ಆದಾಯದಲ್ಲಿ 30 ಕೋಟಿ ರೂ. ತೆರಿಗೆಯನ್ನು ಸ್ಪೇನಿಗೆ ತಪ್ಪಿಸಿದ್ದಾರೆ.ಅವರು ಈ ಹಣವನ್ನು ತೆರಿಗೆ ವಂಚನೆ ಸ್ವರ್ಗಗಳೆಂದೆ ಕರೆಸಿಕೊಳ್ಳುವ ಉರುಗ್ವೆ, ಬೆಲಿಜ್‌ನಲ್ಲಿ ಇಟ್ಟಿದ್ದಾರೆ.

ಬ್ರಿಟನ್ನಿನ ಶೆಲ್‌ ಕಂಪನಿಗಳಲ್ಲಿ ತೊಡಗಿಸಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆ 2016, ಜು.6ರಂದು ಸ್ಪೇನ್‌ ನ್ಯಾಯಾಲಯ ಮೆಸ್ಸಿ ಮತ್ತವರ ತಂದೆಗೆ 21 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಸ್ಪೇನಿನ ಸರ್ವೋಚ್ಚ ನ್ಯಾಯಾಲಯದಲ್ಲಿ ಮೆಸ್ಸಿ ಪ್ರಶ್ನಿಸಿದ್ದರು. ಇಲ್ಲೂ ಅವರಿಗೆ ಸೋಲಾಗಿದೆ.

Advertisement

2010-11ರ ಅವಧಿಯಲ್ಲಿ ಮೆಸ್ಸಿ ತಂದೆ ತೆರಿಗೆಯನ್ನು ಪ್ರಾಮಾಣಿಕವಾಗಿ ಕಟ್ಟಿದ್ದಾರೆಂಬ ಹಿನ್ನೆಲೆಯಲ್ಲಿ ಅವರ ಶಿಕ್ಷೆ ಪ್ರಮಾಣ 15 ತಿಂಗಳಿಗೆ ತಗ್ಗಿದೆ.

ಆರಂಭದಲ್ಲಿ ಮೆಸ್ಸಿ ತನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ತನ್ನ ತಂದೆಯೇ ಎಲ್ಲವನ್ನೂ ನಿರ್ವಹಿಸುತ್ತಿದ್ದರಿಂದ ತಾನು ತೆರಿಗೆ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ ಎಂದು ತಿಳಿಸಿದ್ದರು. ಆದರೆ ಸ್ಪೇನ್‌ ನ್ಯಾಯಾಲಯ ಈ ವಾದ ಹುರುಳಿಲ್ಲದ್ದು ಎಂದು ತಿರಸ್ಕರಿಸಿದೆ.

ಅರ್ಜೆಂಟೀನಾ ಫ‌ುಟ್‌ಬಾಲ್‌ ತಂಡದ ನಾಯಕ ಲಯೋನೆಲ್‌ ಮೆಸ್ಸಿಯನ್ನು ಆಧುನಿಕ ಕಾಲದ ಸರ್ವಶ್ರೇಷ್ಠ ಫ‌ುಟ್‌ಬಾಲಿಗ ಎಂದು ಕರೆಸಿಕೊಂಡಿದ್ದಾರೆ. 5 ಬಾರಿ ವರ್ಷದ ವಿಶ್ವಶ್ರೇಷ್ಠ ಫ‌ುಟ್‌ಬಾಲಿಗ ಪ್ರಶಸ್ತಿ ಪಡೆದಿದ್ದಾರೆ.

ಏನಿದು ಕಣ್ಗಾವಲು ಜೈಲು ಶಿಕ್ಷೆ?
ಸ್ಪೇನಿನ ಕಾನೂನಿನ ಪ್ರಕಾರ 2 ವರ್ಷದೊಳಗೆ ಜೈಲು ಶಿಕ್ಷೆಗೊಳಗಾದ ವ್ಯಕ್ತಿ ನೇರವಾಗಿ ಜೈಲಿಗೆ ಹೋಗಬೇಕಾದ ಅಗತ್ಯವಿಲ್ಲ. ಆತ ತನ್ನ ಸಮುದಾಯದವರೊಂದಿಗೆ ಒಬ್ಬ ಅಧಿಕಾರಿಯ ಕಣ್ಗಾವಲಿನಲ್ಲಿ ಸಹಜವಾಗಿಯೇ ಬದುಕು ನಡೆಸಬಹುದು. ಆದರೆ ಅದಕ್ಕೆ ಕೆಲವು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಈ ಪ್ರಕಾರ ಮೆಸ್ಸಿ ಫ‌ುಟ್‌ಬಾಲ್‌ ಆಡಬಹುದೋ, ಇಲ್ಲವೋ ಎನ್ನುವುದು ಮುಂದಷ್ಟೇ
ಖಚಿತವಾಗಬೇಕಿದೆ.
 

Advertisement

Udayavani is now on Telegram. Click here to join our channel and stay updated with the latest news.

Next