Advertisement

Traffic Rules: ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕಂಪನಿಗೆ ಸಂದೇಶ

12:27 PM Dec 17, 2023 | Team Udayavani |

ಬೆಂಗಳೂರು: ಇನ್ಮುಂದೆ ಟೆಕಿಗಳು ಮಾತ್ರವಲ್ಲ, ಖಾಸಗಿ ಕಂಪನಿ ಉದ್ಯೋಗಿಗಳು ಅತೀಯಾದ ವೇಗ, ಸಿಗ್ನಲ್‌ ಜಂಪ್‌ ಸೇರಿ ಸಂಚಾರ ನಿಯಮ ಉಲ್ಲಂಘಿಸಿದರೆ, ಈ ಮಾಹಿತಿಯನ್ನು ಅವರು ಕೆಲಸ ಮಾಡುವ ಕಂಪನಿಗಳಿಗೆ ಕಳುಹಿಸುವ ಹೊಸ ಯೋಜನೆಯನ್ನು ಸಂಚಾರ ವಿಭಾಗದ ಪೊಲೀಸರು ಜಾರಿಗೆ ತಂದಿದ್ದಾರೆ. ಈ ಹೊಸ ವಿಧಾನವನ್ನು ಪ್ರಾಯೋಗಿಕವಾಗಿ ಪೂರ್ವ ವಿಭಾಗದ ಎಲ್ಲ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಜಾರಿಗೆ ತಂದಿದ್ದು, ಒಂದು ವೇಳೆ ಯಶಸ್ವಿಯಾದರೆ ನಗರದ ಎಲ್ಲ ಸಂಚಾರ ವಿಭಾಗದಲ್ಲೂ ವಿಸ್ತರಿಸುವ ಕುರಿತು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಇ-ಮೇಲ್‌ ಮೂಲಕ ಮಾಹಿತಿ: ಪೂರ್ವ ಸಂಚಾರ ವಿಭಾಗದಲ್ಲಿ ಹೆಚ್ಚಾಗಿ ಸಾಫ್ಟ್ವೇರ್‌ ಕಂಪನಿಗಳಿದ್ದು, ಅಲ್ಲಿನ ನೌಕರರಿಂದ ಹೆಚ್ಚು ಸಂಚಾರ ನಿಯಮ ಉಲ್ಲಂಘನೆಗಳು ಆಗುತ್ತಿವೆ. ಕಚೇರಿಗೆ ಹೋಗುವ ಧಾವಂತದಲ್ಲಿ ಸಂಚಾರ ನಿಯಮ ಉಲ್ಲಂ ಸುತ್ತಿದ್ದಾರೆ ಎಂಬುದು ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿದರೆ, ವಾಹನ ಸವಾರನ ಮಾಹಿತಿಯನ್ನು ಸಂಬಂಧಿಸಿದ ಕಂಪನಿಗೆ ಇ-ಮೇಲ್‌ ಅಥವಾ ಕರೆ ಮಾಡಿ ಮಾಹಿತಿ ನೀಡಲಾಗುತ್ತದೆ. ಅದನ್ನು ಕಂಪನಿಯ ಹಿರಿಯ ಅಧಿಕಾರಿಗಳು, ತಮ್ಮ ಸಿಬ್ಬಂದಿಗೆ ತಿಳಿಸಿ ಸಂಚಾರ ನಿಯಮ ಪಾಲನೆ ಮಾಡಬೇಕು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಮಾರ್ಗ ದರ್ಶನ ನೀಡುವಂತೆ ಕೋರಲಾಗುತ್ತದೆ. ಒಂದು ವೇಳೆ ಕಂಪನಿಯ ಕೋರಿಕೆ ಮೇರೆಗೆ ಸಂಚಾರ ಪೊಲೀಸರು, ಕಂಪನಿಯ ಸಿಬ್ಬಂದಿಗೆ ಸಂಚಾರ ಸುರಕ್ಷತೆ ಬಗ್ಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಈ ಕುರಿತು ಮಾಹಿತಿ ನೀಡಿದ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌, ಈ ಯೋಜನೆ ಸಂಬಂಧ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿ ಬೀಳುವ ಟೆಕಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳ ಮಾಹಿತಿ ಪಡೆಯಲಾಗುತ್ತಿದೆ. ಅದನ್ನು ಆಧರಿಸಿ ನಿರ್ದಿಷ್ಟ ಕಂಪನಿಗೆ ಮಾಹಿತಿ ಕೊಡಲಾಗುತ್ತದೆ ಎಂದು ಹೇಳಿದರು.

ಸಂಚಾರ ನಿಯಮ ಉಲ್ಲಂಘನೆ ಎರಡು ವರ್ಗವಾಗಿ ಪ್ರಕರಣಗಳ ವಿಂಗಡಣೆ:

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ನಡೆಯುವ ಅಪಘಾತ ಪ್ರಕರಣಗಳ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕೆ ಹತ್ತು ಹಲವು ಕ್ರಮಕೈಗೊಂಡಿರುವ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಅಧಿಕಾರಿಗಳು ಇದೀಗ ಮತ್ತೂಂದು ದಿಟ್ಟ ಕ್ರಮ ಕೈಗೊಂಡಿದ್ದು, ನಿಯಾಮವಳಿ ಹಾಗೂ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ.

Advertisement

ಈ ಕುರಿತು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಸುತ್ತೋಲೆ ಹೊರಡಿಸಿದ್ದು, ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ದಾಖಲಾಗುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಎರಡು ವರ್ಗಗಳಾಗಿ ವರ್ಗೀಕರಿಸುವಂತೆ ರಾಜ್ಯದ ಎಲ್ಲಾ ನಗರ ಮತ್ತು ಜಿಲ್ಲಾ ಪೊಲೀಸ್‌ ಘಟಕಗಳಿಗೆ ಸೂಚಿಸಿದ್ದಾರೆ.

ವರ್ಗ 1ರ ಅಡಿಯ ಉಲ್ಲಂಘನೆಗಳು : ಕುಡಿದು ವಾಹನ ಚಾಲನೆ, ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ, ಸಿಗ್ನಲ್‌ ಜಂಪ್‌, ವ್ಹೀಲಿಂಗ್‌, ರೇಸಿಂಗ್‌ ಮತ್ತು ವೇಗದ ಪ್ರಯೋಗ, ಶಿಸ್ತು ಪಥ ಚಾಲನೆ ಮಾಡದೇ ಇರುವುದು, ಅಡ್ಡಾದಿಡ್ಡಿ ವಾಹನ ಚಾಲನೆ, ವಾಹನಗಳನ್ನು ತಪ್ಪು ಮತ್ತು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸುವುದು, ಬಿಎಂಟಿಸಿ ನಿಲ್ದಾಣದಲ್ಲಿ ಇತರೆ ವಾಹನಗಳ ನಿಲುಗಡೆ ಮಾಡು ವುದು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದಿರುವುದು, ಕಾರಿನಲ್ಲಿ ಸೀಟ್‌ ಬೆಲ್ಟ್ ಧರಿಸದಿರುವುದು, ತ್ರಿಬಲ್‌ ರೈಡಿಂಗ್‌ ಸೇರಿ ಇತರೆ ಉಲ್ಲಂಘನೆಗಳು.‌

ವರ್ಗ 2 ಅಡಿಯ ಉಲ್ಲಂಘನೆಗಳು: ಹೈಬೀಮ್‌ ಲೈಟ್‌ಗಳನ್ನು ವಾಹನಗಳಲ್ಲಿ ಬಳಸುವುದು, ನಿಷಿದ್ಧ ಪ್ರದೇಶಗಳಲ್ಲಿ ಹಾರ್ನ್ ಬಳಕೆ, ದೋಷಪೂರಿತ ಸೈಲೆನ್ಸರ್‌ ಬಳಕೆ, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ, ಪಾದಾಚಾರಿ ಮಾರ್ಗ ಒತ್ತುವರಿ, ಪರ್ಮಿಟ್‌ ಇಲ್ಲದೆ ವಾಹನ ಚಾಲನೆ, ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಬೇಡಿಕೆ, ಆಟೋ ಚಾಲಕ ಬಾಡಿಗೆಗೆ ಕರೆದಾಗ ಬಾರದಿರುವುದು, ಡಿಸ್ ಪ್ಲೇ ಕಾರ್ಡ್‌ ಹಾಕದಿರುವುದು, ದೋಷಪೂರಿತ ನೋಂದಣಿ ಫ‌ಲಕ ಅಳವಡಿಕೆ ಸೇರಿ ಇತರೆ ಉಲ್ಲಂಘನೆಗಳು. ಈ ರೀತಿ ವರ್ಗಾವಣೆ ಮಾಡಿದ್ದು, ಇದನ್ನು ಪರಿಣಾಮಕಾರಿಯಾಗಿ ಪರಿಗಣಿಸಿ ರಸ್ತೆ ಅಪಘಾತ, ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next