Advertisement

ಗೋಡೆ ಚಿತ್ರಗಳ ಮೂಲಕ ಸ್ವಚ್ಛತೆಯ ಸಂದೇಶ

09:27 PM Mar 19, 2021 | Team Udayavani |

ಕಾರ್ಕಳ: ಪರಿಸರ ಸ್ವತ್ಛತೆಗೆ ಆದ್ಯತೆ ನೀಡುತ್ತಿರುವ ಕಾರ್ಕಳದ ಸ್ವತ್ಛ ಕಾರ್ಕಳ ಬ್ರಿಗೇಡ್‌ ತಂಡವು ಇಲ್ಲಿನ ಜೈನ ಧರ್ಮ ಜೀರ್ಣೋದ್ಧಾರಕ ಸಂಘ ಸಹಕಾರದಲ್ಲಿ ಸಾರ್ವಜನಿಕರಲ್ಲಿ ಸ್ವತ್ಛತೆ ಕುರಿತು ಅರಿವು ಮೂಡಿಸಲು ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸುವ ಮೂಲಕ ವಿನೂತನ ಕಾರ್ಯ ನಡೆಸುತ್ತಿದೆ.

Advertisement

ಕಾರ್ಕಳದ ಜೈನ ಮಠ, ಗೋಮಟೇಶ್ವರ ಬೆಟ್ಟದ ಪ್ರದೇಶದ ಸುತ್ತಮುತ್ತಲ ಪ್ರದೇಶಗಳ ಗೋಡೆಗಳ ಮೇಲೆ ವಿವಿಧ ಚಿತ್ರಗಳ ಮೂಲಕ ಸ್ವತ್ಛ ಪರಿಸರ ಪರಿಕಲ್ಪನೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಲವು ಸಂದೇಶ ಸಾರುವ ಚಿತ್ರಗಳು ಪಾದಚಾರಿಗಳು, ವಾಹನ ಸವಾರರು, ಪ್ರವಾಸಿಗರ ಗಮನ ಸೆಳೆಯುತ್ತಿವೆ.

ಗೋಡೆಗಳಲ್ಲಿ ಸ್ವತ್ಛ ಭಾರತದ ಸಂದೇಶ

ಭಗವಾನ್‌ ಶ್ರೀ ಬಾಹುಬಲಿಯ ಪವಿತ್ರ ಏಕಶಿಲಾ ಪ್ರತಿಮೆ, ಚತುರ್ಮುಖ ಬಸದಿ ವಿಶ್ವದಾದ್ಯಂತ‌ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪಟ್ನಶೆಟ್ಟಿ ಮೈದಾನದ ಬಳಿ ಮೆಟ್ಟಿಲುಗಳ ಮೂಲಕ ಗೊಮ್ಮಟ ಬೆಟ್ಟದ ಕಡೆಗೆ ಏರುವುದು ಪ್ರಾರಂಭವಾಗುತ್ತದೆ. ವಾರಾಂತ್ಯದಲ್ಲಿ ಸಹಸ್ರಾರು ಪ್ರವಾಸಿಗರು ಮತ್ತು ಮತ್ತು ಸ್ಥಳೀಯರು ಭೇಟಿ ನೀಡುವ ಈ ಪ್ರದೇಶದಲ್ಲಿ ಸ್ವತ್ಛತೆಗೆ ಹೆಚ್ಚು ಗಮನ ನೀಡುವ ಅಗತ್ಯ ಮನಗಂಡು ಸಮೀಪದ ಜೈನ ಮಠದ ಗೋಡೆಗಳನ್ನು ಸ್ವತ್ಛ ಭಾರತ ಸಂದೇಶವನ್ನು ಹರಡಲು ಬಳಸಿಕೊಳ್ಳಲಾಗಿದೆ.

ಗೋಡೆಗಳಲ್ಲಿ ತತ್ವಶಾಸ್ತ್ರ ಮತ್ತು ತುಳುನಾಡು ಸಂಸ್ಕೃತಿಯ ವಿಷಯಗಳ ಒಳಗೊಂಡ ಹಲವು ಕಲಾಕೃತಿಗಳನ್ನು ರಚಿಸಲಾಗಿದೆ. ಮರವನ್ನು ಕಡಿಯದೆ ಉಳಿಸುವುದು, ಕೊಂಬೆ ಕತ್ತರಿಸುವಾಗ ಮರ ಕಡಿಯದಿರುವುದು. ಮರ ನಾಶದಿಂದ ಆರಂಭಗೊಂಡು ಕೊನೆಗೊಳ್ಳುವ ತನಕದ ವ್ಯಕ್ತಿಯ ಆಲೋಚನೆಗಳು, ಬದುಕಲು ಬಿಡು, ಕಲ್ಪವೃಕ್ಷ, ಸ್ವತ್ಛತಾ ಕೈಪಿಡಿಗಳು ಹೀಗೆ ವಿವಿಧ ಸಂದೇಶಗಳುಳ್ಳ ಚಿತ್ರಗಳು ಇಲ್ಲಿವೆ. ಜಾಗೃತ ಸಮಾಜಕ್ಕೆ ಇವು ಹಲವು ವಿಚಾರಧಾರೆಗಳನ್ನು ನೀಡಲು ಅನುಕೂಲವಾಗಿವೆ.

Advertisement

ಮನ ಅರಳಿಸುವ ಚಿತ್ರಗಳು

ಗೋಡೆಗಳ ಮೇಲೆ ಚಿತ್ತಾರಗೊಂಡ ಮನಸೂರೆ ಗೊಳ್ಳುವ ಜಾಗೃತಿ ಚಿತ್ರಗಳು ನೋಡುಗರ ಮನಸ್ಸನ್ನು ಅರಳಿಸುತ್ತಿವೆ. ಸಾರ್ವಜನಿಕರಲ್ಲಿ ಸ್ವತ್ಛತೆ, ಪರಿಸರ ಸಂರಕ್ಷಣೆ ಜಾಗೃತಿಗೊಳಿಸುತ್ತಿವೆ. ಬ್ರಿಗೇಡ್‌ ಸದಸ್ಯರು ಸ್ವತಃ ಪೈಂಟಿಂಗ್‌ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಶ್ರೀರಕ್ಷಾ, ಸಂತೋಷ್‌ ಆಚಾರ್ಯ ಮೊದಲಾದ ಚಿತ್ರಕಲಾಕಾರರ ಕೈಯಲ್ಲಿ ಅದ್ಭುತ ಹಾಗೂ ಸುಂದರ ಚಿತ್ರಗಳು ಮೂಡಿ ಬಂದಿವೆ.
ಕಾರ್ಕಳ ಸ್ವತ್ಛ ಬ್ರಿಗೇಡ್‌ನ‌ ಒಟ್ಟು ತಂಡದ ಪರಿಶ್ರಮವಿದೆ. ನ್ಯಾಯವಾದಿ ಸೂರಜ್‌ ಅವರ ಸಹಕಾರವೂ ಸಿಕ್ಕಿದೆ.

ತುಳುನಾಡ ವೈಭವ

ಕರಾವಳಿ ಭಾಗದ ತುಳುನಾಡ ಜಾನಪದ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ಕೂಡ ಇದರ ಜತೆಯಲ್ಲೇ ನಡೆದಿದೆ. ರಥೋತ್ಸವ, ಯಕ್ಷಗಾನ ಹುಲಿವೇಷ, ಭೂತದ ಕೋಲ ಮೊದಲಾದ ಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ.

ಎಲ್ಲರ ಸಹಕಾರ ಪಡೆದು ವಿಸ್ತರಣೆ

ಶ್ರೀ ಭಗವಾನ್‌ ಬೆಟ್ಟದ ಆಸುಪಾಸುಗಳಲ್ಲಿ ಈಗ ಗೋಡೆಗಳಲ್ಲಿ ಕಲಾಕೃತಿಗಳನ್ನು ಆರಂಭಿಸಲಾಗಿದೆ. ಜೈನ ಮಠದ ಗೋಡೆಯ 100 ಮೀ.ನಷ್ಟು ವಿಸ್ತಾರದಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಇದನ್ನು ವಿಸ್ತರಿಸುತ್ತೇವೆ.
-ಎಂ.ಕೆ. ವಿಪುಲ್‌ ತೇಜ್‌, ಬ್ರಿಗೇಡ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next