Advertisement

ಮತದಾನ ಜಾಗೃತಿ ಜತೆಗೆ ಸಂದೇಶ ಸಾರುವ ಚಿತ್ರ

12:27 AM Apr 09, 2019 | Lakshmi GovindaRaju |

ಬೆಂಗಳೂರು: ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಒಂದೆಡೆ ವಾಹನಗಳ ದಟ್ಟಣೆ.. ಕಿರಿಕಿರಿ, ಮತ್ತೂಂದೆಡೆ ಬಡವ -ಶ್ರೀಮಂತ, ಮೇಲ್ವರ್ಗ- ಕೆಳವರ್ಗ, ಶಿಕ್ಷಿತ- ಅಶಿಕ್ಷಿತ ಎಂಬಿತ್ಯಾದಿ ಭೇದ ಭಾವಗಳಿಲ್ಲದೇ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಿ ತಮ್ಮ ಜವಾಬ್ದಾರಿ ನಿರ್ವಹಿಸಲು ಸರತಿಯಲ್ಲಿ ನಿಂತರುವ ಜನರು – ಇದು ಮೇಖ್ರೀ ವೃತ್ತದ ಕೆಳಸೇತುವೆಯಲ್ಲಿ ಕಂಡಬಂದ ದೃಶ್ಯಗಳು.

Advertisement

ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಚುನಾವಣಾ ಆಯೋಗ ನಿರಂತರವಾಗಿ ಮಾಡುತ್ತಿದೆ. ಆ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆ ಹಾಗೂ ಪಾದಚಾರಿ ಮಾರ್ಗದ ಗೋಡೆಗಳಲ್ಲಿ ಜಾಗೃತಿ ಚಿತ್ರಗಳನ್ನು ಬಿಡಿಸಿ ಮತದಾರರದಲ್ಲಿ ಈ ಬಾರಿ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ರವಾನಿಸಲು ಮುಂದಾಗಿದೆ.

ಆಯೋಗದ ಈ ಕಾರ್ಯಕ್ಕೆ ನಗರದ ಸಮಸ್ಯೆಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸುವ ಮೂಲಕ ಸ್ಥಳೀಯ ಸಂಸ್ಥೆಗಳ ಕಣ್ತೆರೆಸುತ್ತಿದ್ದ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಕೈಜೋಡಿಸಿದ್ದು, ಜಾಗೃತಿ ಜತೆಗೆ ಸಂದೇಶ ಒಳಗೊಂಡ “ಗ್ರಾಫಿಟಿ” ಮಾದರಿಯ ಗೋಡೆ ಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬರೆಯುತ್ತಿದ್ದಾರೆ.

ಇದಕ್ಕಾಗಿ ಶುಕ್ರವಾರದಿಂದಲೇ ನಗರದ ಮೇಖ್ರೀ ವೃತ್ತದ ಕೆಳ ಸೇತುವೆ ಬದಿಯಲ್ಲಿ ಕಲಾವಿದರ ತಂಡ ಕಾರ್ಯಚಟುವಟಿಕೆ ಕೈಗೊಂಡಿದ್ದು, ಸೋಮವಾರ ಸಂಜೆ ವೇಳೆಗೆ ತಂಡದ ಮೊದಲ ಚಿತ್ರಬರಹ ಮುಕ್ತಾಯಗೊಳಿಸಿತು. ಈ ಚಿತ್ರಬರಹದಲ್ಲಿ ಚುನಾವಣೆ ದಿನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವ ಯುವಕ, ಸ್ವಾಮೀಜಿ, ವಯೋವೃದ್ಧ, ರೈತ, ಉದ್ಯಮಿ ಹೀಗೆ ಸಮಾಜದ ವಿವಿಧ ವ್ಯಕ್ತಿಗಳನ್ನು ಪ್ರತಿನಿಧಿಸುವ 25 ವ್ಯಕ್ತಿಗಳು ಇದ್ದಾರೆ. ಈ ಮೂಲಕ ಚಿತ್ರವು ಸಮಾನತೆಯ ತತ್ವವನ್ನು ಸಾರುತ್ತಿದೆ.

ಜಾಗೃತಿ ಜತೆಗೊಂದು ಸಂದೇಶ: ಬಾದಲ್‌ ನಂಜುಂಡಸ್ವಾಮಿಯವರು ಬರೆಯುತ್ತಿರುವ ಚಿತ್ರಗಳು ಕೇವಲ ಮತದಾನ ಜಾಗೃತಿಗೆ ಸೀಮಿತವಾಗದೇ ಜತೆಗೊಂದು ಸಾಮಾಜಿಕ ಸಂದೇಶವನ್ನು ಸಾರುತ್ತಿವೆ. ಈ ಕುರಿತು ಮಾಹಿತಿ ನೀಡಿದ ಕಲಾವಿದ ಬಾದಲ್‌ ನಂಜುಂಡಸ್ವಾಮಿ, “ಸದ್ಯ ಮೇಖ್ರೀ ವೃತ್ತದಲ್ಲಿ ಬರೆದಿರುವ ಚಿತ್ರವು ಮತದಾನದ ಹಕ್ಕು ಚಲಾವಣೆಯಲ್ಲಿ ನಾವೆಲ್ಲರೂ ಸಮಾನರು ಎಂಬ ಸಂದೇಶ ಸಾರುತ್ತದೆ.

Advertisement

ಇಂದು ಇಲ್ಲೆಡೆ ಉಳ್ಳವರಿಗೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ, ಮತದಾನ ಮಾಡುವ ಸ್ಥಳದಲ್ಲಿ ಮಾತ್ರ ಬಡವ, ಶ್ರೀಮಂತ, ಮೇಲ್ವರ್ಗ ಕೆಳವರ್ಗ, ಯುವಕ ಹಿರಿಕ ಯಾರೇ ಆಗಲಿ, ಸಮಾಜದಲ್ಲಿ ಯಾವ ಸ್ಥಾನಮಾನದಲ್ಲೇ ಇರಲಿ, ಮತದಾನ ಸಮಯದಲ್ಲಿ ಮಾತ್ರ ಎಲ್ಲರೂ ಸಮಾನರೆ. ಹೀಗಾಗಿ, ಈ ಸಂದೇಶ ಸಾರುತ್ತದೆ ಎಂದು ತಿಳಿಸಿದರು.

ಮತದಾನದ ಜಾಗೃತಿ ಮೂಡಿಸುವ ಜತೆಗೆ ಮತದಾನದಲ್ಲಿರುವ ಕೆಲವು ಸಾಮಾಜಿಕ ಸಂದೇಶವನ್ನು ಒಳಗೊಂಡ ಚಿತ್ರಗಳನ್ನು ಬರೆಯಲಾಗುತ್ತಿದೆ. ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಮತ್ತೆರಡು ಕಡೆಯಲ್ಲಿ ಈ ಜಾಗೃತಿ ಚಿತ್ರ ಬರಹಗಳನ್ನು ಬರೆಯಲಾಗುವುದು.
-ಬಾದಲ್‌ ನಂಜುಂಡಸ್ವಾಮಿ, ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next