Advertisement

ಲಾಕ್‌ಡೌನ್‌ ಬೆನ್ನಲ್ಲೇ ವಿದ್ಯುತ್‌ ದರ ಏರಿಕೆ ಶಾಕ್‌! ದರ ಹೆಚ್ಚಳಕ್ಕೆ ಮೆಸ್ಕಾಂ ಬೇಡಿಕೆ

07:27 PM May 29, 2021 | Team Udayavani |

ಮಂಗಳೂರು : ಕೊರೊನಾ ಸಂಕಷ್ಟದ ನಡುವೆಯೇ ವಿದ್ಯುತ್‌ ದರ ಏರಿಕೆಯ ಸಾಧ್ಯತೆ ನಿಚ್ಚಳವಾಗಿದೆ. ಸಾಮಾನ್ಯವಾಗಿ ಪ್ರತೀ ವರ್ಷ ಎಪ್ರಿಲ್‌ 1ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ವಿದ್ಯುತ್‌ ದರ ಪರಿಷ್ಕರಣೆಯಾಗುತ್ತಿದ್ದು ಈ ಬಾರಿ ಕೊರೊನಾ, ಲಾಕ್‌ಡೌನ್‌ ಕಾರಣದಿಂದ ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ.

Advertisement

ಈಗಾಗಲೇ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ವಿದ್ಯುತ್ಛಕ್ತಿ ಆಯೋಗ(ಕೆಇಆರ್‌ಸಿ)ವು ಲಾಕ್‌ಡೌನ್‌ ಅಂತ್ಯಗೊಂಡ ಕೂಡಲೇ ಪ್ರಸಕ್ತ ವರ್ಷದ ದರ ಪರಿಷ್ಕರಣೆಗೆ ಸರಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ. ಕಳೆದ ವರ್ಷವೂ ಮಾರ್ಚ್‌ನಿಂದ ಏಳು ತಿಂಗಳ ಕಾಲ ಲಾಕ್‌ಡೌನ್‌ ಜಾರಿಯಲ್ಲಿತ್ತು. ಲಾಕ್‌ಡೌನ್‌ ಮುಗಿಯುತ್ತಿದ್ದಂತೆ ಎಪ್ರಿಲ್‌ನಿಂದಲೇ ಅನ್ವಯವಾಗುವಂತೆ ಪ್ರತೀ ಯೂನಿಟ್‌ ಮೇಲೆ 40 ಪೈಸೆ ಏರಿಕೆ ಮಾಡಲಾಗಿತ್ತು.

ಪ್ರಕಟನೆಯಷ್ಟೇ ಬಾಕಿ
2021-22ನೇ ಸಾಲಿನ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ಸಹಿತ ಎಲ್ಲ ಎಸ್ಕಾಂಗಳು ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಎಷ್ಟು ಪ್ರಮಾಣದಲ್ಲಿ ಏರಿಕೆಗೆ ಅನುಮತಿಸಲಾಗಿದೆ ಎನ್ನುವುದರ ಪ್ರಕಟನೆಯಷ್ಟೇ ಬಾಕಿಯಿದೆ. ಸದ್ಯ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ನಿರ್ಬಂಧಗಳು ಕಳೆದ ವರ್ಷದಷ್ಟು ಕಠಿನವಾಗಿಲ್ಲ. ಆರ್ಥಿಕ ಸಂಕಷ್ಟವನ್ನು ಮನಗಂಡು ಸರಕಾರ ಸಡಿಲಿಕೆ ಮಾಡಿದೆ. ಆದ್ದರಿಂದ ವಿದ್ಯುತ್‌ ದರ ಏರಿಕೆಯ ಪ್ರಸ್ತಾವವನ್ನು ಕೂಡ ಸರಕಾರ ದೀರ್ಘ‌ ಕಾಲ ಮುಂದೂಡುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿವೆ. ಜನರು ದರ ಏರಿಕೆಯನ್ನು ಎದುರಿಸಲು ಸಿದ್ಧರಾಗಬೇಕಿದೆ.

ಇದನ್ನೂ ಓದಿ :ಕೇರಳದಲ್ಲಿ ಮತ್ತೆ ಹತ್ತು ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆ, ಹೆಚ್ಚುವರಿ ನಿರ್ಬಂಧ ತೆರವು

ಮೆಸ್ಕಾಂ ವ್ಯಾಪ್ತಿಯಲ್ಲಿ ಕೆಇಆರ್‌ಸಿ ಸಾರ್ವಜನಿಕ ವಿಚಾರಣೆಯನ್ನು ಈಗಾಗಲೇ ಮುಗಿಸಿದೆ. ನಮ್ಮ ಬೇಡಿಕೆ ಮಂಡಿಸಿದ್ದೇವೆ. ದರ ಪರಿಷ್ಕರಣೆ 2021ರ ಎಪ್ರಿಲ್‌ 1ರಿಂದ ಜಾರಿಯಾಗಬೇಕಾಗಿತ್ತು. ಇದುವರೆಗೆ ಕೆಇಆರ್‌ಸಿ ಅಥವಾ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ.
– ಪ್ರಶಾಂತ್‌ ಕುಮಾರ್‌ ಮಿಶ್ರಾ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

Advertisement

ಹೆಚ್ಚಲ್ಲ; ಕಡಿಮೆ ಮಾಡಿ ಎಂಬುದು ಜನಾಗ್ರಹ!
ಯೂನಿಟ್‌ ಒಂದಕ್ಕೆ 1.67 ರೂ.ನಂತೆ ಏರಿಸಬೇಕೆಂಬುದು ಕೆಇಆರ್‌ಸಿಗೆ ಮೆಸ್ಕಾಂನ ಮನವಿ. ಈ ಹಿನ್ನೆಲೆಯಲ್ಲಿ ಫೆ. 19ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಇಆರ್‌ಸಿ ಏರ್ಪಡಿಸಿದ್ದ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಸಾರ್ವಜನಿಕ ವಲಯದಿಂದ ವಿರೋಧದ ಜತೆಗೆ “ದರ ಹೆಚ್ಚಳ ಬೇಡ; ಈಗಿರುವುದನ್ನೇ ಕಡಿಮೆ ಮಾಡಬೇಕು’ ಎಂಬ ಆಗ್ರಹ ವ್ಯಕ್ತವಾಗಿತ್ತು. ಮೆಸ್ಕಾಂನ ವಾದ ಮತ್ತು ಸಾರ್ವಜನಿಕರ ಅಹವಾಲು-ಆಕ್ಷೇಪಗಳನ್ನು ಆಲಿಸಿದ ಕೆಇಆರ್‌ಸಿ ಅಧ್ಯಕ್ಷ ಶಂಭು ದಯಾಳ್‌ ಮೀನಾ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು.

ಹೆಚ್ಚಳ ಎಷ್ಟಿರಬಹುದು?

ಇಸವಿ ಬೇಡಿಕೆ   ಜಾರಿ
2019-20  1.38 ರೂ. 25ರಿಂದ 33 ಪೈಸೆ
2020-21 62 ಪೈಸೆ 40 ಪೈಸೆ
2021-22 1.67 ರೂ. ?

 

Advertisement

Udayavani is now on Telegram. Click here to join our channel and stay updated with the latest news.

Next